UN NETWORKS
ಉಳ್ಳಾಲ : ತಾಂತ್ರಿಕ ದೋಷಗಳಿಂದಾಗಿ ವಿಳಂಬವಾಗಿದ್ದ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಶೇ.98 ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಶೀಘ್ರವೇ ಪೂರ್ಣಗೊಂಡು ಜೂ.10 ಕ್ಕೆ ಜನಸಂಪರ್ಕಕ್ಕೆ ಅನುಕೂಲವಾಗುವಂತೆ ವಾಹನಗಳು ತೆರಳಲು ತಾವೇ ನಿಂತು ಗ್ರೀನ್ ಸಿಗ್ನಲ್ ನೀಡುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ತೊಕ್ಕೊಟ್ಟು ಭರದಿಂದ ಸಾಗಿರುವ ಫ್ಲೈಓವರ್ ಕಾಮಗಾರಿಯ ಲೋಪ, ಅಡೆತಡೆಗಳು ಹಾಗೂ ಕಳಪೆಯಾಗಿದ್ದಲ್ಲಿ ವೀಕ್ಷಿಸಲು ಬುಧವಾರ ಭೇಟಿ ನೀಡಿದ ಸಂದರು ಸ್ಥಳೀಯರಿಂದ ಅಭಿಪ್ರಾಯಗಳನ್ನು ಪಡೆದುಕೊಂಡರು. ತಾಂತ್ರಿಕ ಅಡಚಣೆಗಳಿಂದಾಗಿ ಫ್ಲೈಓವರ್ ಕಾಮಗಾರಿ ವಿಳಂಬವಾಗಿದೆ. ಕೇಂದ್ರ ಮಂತ್ರಿ ನಿತಿನ್ ನಿತಿನ್ ಗಡ್ಕರಿ ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆಯಲಾಗಿ ವಿಳಂಬವಾಗಿದ್ದ ಕಾಮಗಾರಿಗೆ ವೇಗ ಕೊಡುವ ಕೆಲಸವಾಗಿತ್ತು. ಆದರೆ ನೀತಿ ಸಂಹಿತೆ ಜಾರಿಯಿಂದಾಗಿ ಸಭೆಯನ್ನು ಮುಂದುವರಿಸಲು ಅಸಾಧ್ಯವಾಯಿತು. ಇದೀಗ ಚುನಾವಣಾ ಮುಗಿದು ನೀತಿ ಸಂಹಿತೆ ಮುಗಿದ ಹಿನ್ನೆಲೆಯಲ್ಲಿ ವೀಕ್ಷಣೆ ಮಾಡುವ ನಿಟ್ಟಿನಲ್ಲಿ ಇ ಭೇಟಿಯಾಗಿದೆ. ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಶೇ.90 ಮುಗಿದಿದೆ. ಇನ್ನು ಶೇ.2 ಬಾಕಿಯಿದೆ. ಈ ಹಿಂದೆ ಹಣದ ಅಡಚಣೆ ಉಂಟಾದಾಗ ರೂ.55 ಕೋಟಿ ಹೆಚ್ಚುವರಿ ಅನುದಾನವನ್ನು ಬ್ಯಾಂಕ್ ಮೂಲಕ ಬಿಡುಗಡೆಗೊಳಿಸಲಾಗಿತ್ತು. ಮೂರನೇ ಬಾರಿ ಲೋಕಸಭಾ ಸದಸ್ಯನಾಗಿ ಆಯ್ಕೆಗೊಂಡು ಮೊದಲ ಕಾಮಗಾರಿ ತೊಕ್ಕೊಟ್ಟು ಫ್ಲೈಓವರ್ ಪೂರ್ಣಗೊಂಡಿದೆ. ಮುಂದೆ ಯಾವುದೇ ಕಾಮಗಾರಿಗಳು ನಿಲ್ಲದಂತೆ ಹಾಗೂ ವಿಳಂಬವಾಗದಂತೆ ಕಾರ್ಯಾಚರಿಸುವುದಾಗಿ ತಿಳಿಸಿದ ಸಂಸದರು, ಕೂಡಲೇ ಪಂಪ್ ವೆಲ್ ಕಾಮಗಾರಿಯನ್ನು ನವಯುಗ ಸಂಸ್ಥೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮುಗಿಸುವ ವಿಶ್ವಾಸವಿದೆ. ಮಳೆಗಾಲ ಆರಂಭವಾಗುವ ಸಮಯವಾಗಿರುವುದರಿಂದ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಣ್ಣಪುಟ್ಟ ಕೆಲಸಗಳನ್ನು ಸರಿಪಡಿಸುವಂತೆ ನವಯುಗ ಅಧಿಕಾರಿಗಳಿಗೆ ಸೂಚಿಸಿದರು. ತಡವಾಗಿಯಾದರೂ ನವಯುಗ ಸಂಸ್ಥೆ ಹಾಗೂ ಅಧಿಕಾರಿಗಳು ಕಾಮಗಾರಿ ಮುಗಿಸಿದ್ದಾರೆ. ಅದರಂತೆ ಪಂಪ್ ವೆಲ್ ಫ್ಲೈಓವರ್ ಕಾಮಗಾರಿಯನ್ನು ಮುಗಿಸಬೇಕೆಂದರು. ಜನರಿಂದ ಸಮಸ್ಯೆಗಳನ್ನು ಆಲಿಸಿ ಅದನ್ನು ಅಧಿಕಾರಿಗಳು ಪರಿಹರಿಸಬೇಕಿದೆ. ಮಳೆಗಾಲದ ಸಮಯವಾಗಿರುವುದರಿಂದ ಹಲವೆಡೆ ಸಮಸ್ಯೆಗಳಿರುವುದರಿಂದ ಕೇಂದ್ರದ ಮಂತ್ರಿಗಳು ಬರಲು ಅಸಾಧ್ಯ. ಈ ನಿಟ್ಟಿನಲ್ಲಿ ತಾವೇ ನಿಂತು ಲೋಕಾರ್ಪಣೆ ನಡೆಸುವುದಾಗಿ ತಿಳಿಸಿದರು. ಜತೆಗೆ ಸರ್ವಿಸ್ ರಸ್ತೆಗಳ ಅಗಲೀಕರಣ ಪ್ರಕ್ರಿಯೆಯೂ ಫ್ಲೈಓವರ್ ನಲ್ಲಿ ವಾಹನ ಬಿಟ್ಟುಕೊಟ್ಟ ನಂತರ ಆರಂಭಿಸಲಾಗುವುದು. ಈಗಲೇ ಅದಕ್ಕೂ ಕೈಹಾಕಿದಲ್ಲಿ ವಾಹನ ದಟ್ಟಣೆ ಹೆಚ್ಚಿರುವುದರಿಂದ ಅಡ್ಡಿಯಾಗಲಿದೆ ಎಂದರು.
ಈ ಸಂದರ್ಭ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂಪಲ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ರವೀಂದ್ರ ಶೆಟ್ಟಿ, ಚಂದ್ರಶೇಖರ್ ಉಚ್ಚಿಲ್, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಕ್ಷೇತ್ರ ಪ್ರ.ಕಾರ್ಯದರ್ಶಿ ಹೇಮಂತ್ ಶೆಟ್ಟಿ, ಮುಖಂಡರುಗಳಾದ ಚಂದ್ರಹಾಸ್ ಪಂಡಿತ್ ಹೌಸ್, ಪ್ರಕಾಶ್ ಸಿಂಫೋನಿ, ತಲಪಾಡಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಆಳ್ವ ಮುಂತಾದವರು ಉಪಸ್ಥಿತರಿದ್ದರು .