UN NETWORKS
ಕೊಣಾಜೆ : ಕೊಣಾಜೆ ಬೆಳ್ಮ ಕೆಳಗಿನ ಮನೆಯ ಶ್ರೀ ಬ್ರಹ್ಮಸನ್ನಿಧಿ-ನಾಗ ಪರಿವಾರ ಕ್ಷೇತ್ರದ ಜೀರ್ಣೋದ್ದಾರದ ಅಂಗವಾಗಿ ಕ್ಷೇತ್ರದಲ್ಲಿ ಶುಕ್ರವಾರ ಶಿಲಾನ್ಯಾಸವನ್ನು ಕುಡುಪು ಅನಂತ ಪದ್ಮನಾಭ ಕ್ಷೇತ್ರದ ಕೃಷ್ಣರಾಜ ತಂತ್ರಿ ನೆರವೇರಿಸಿದರು.
ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ತುಳುನಾಡು ನಾಗಾರಾಧನೆ, ದೈವ-ದೇವಾರಾಧನೆಯ ಮೂಲಕ ವಿಭಿನ್ನ ಸಂಸ್ಕೃತಿಯನ್ನು ಬೆಳೆಸಿಕೊಂಡಿರುವ ಪ್ರದೇಶವಾಗಿದೆ ಪ್ರಾಚೀನ ಕಾಲದಿಂದ ಇರುವ ನಾಗಬ್ರಹ್ಮರ ಆರಾಧನೆಯೂ ತುಳುನಾಡಿನಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ ಎಂದು ಅವರು ಹೇಳಿದರು.
ನಮ್ಮ ತುಳುನಾಡಿನಲ್ಲಿ ಈಗಾಗಲೇ ಸಾವಿರಾರು ದೈವ ದೇವಸ್ಥಾನಗಳಿವೆ. ಹೊಸದಾಗಿ ನಿರ್ಮಿಸುವ ದೇವಸ್ಥಾನ, ದೈವಸ್ಥಾನದ ಬದಲು ಹಳೆಯ ದೈವ-ದೇವಸ್ಥಾನಗಳನ್ನು ಜೀರ್ಣೋದ್ದಾರಗೊಳಿಸಿದರೆ ಪುಣ್ಯ ಜಾಸ್ತಿ ಇರುತ್ತದೆ. ಹಾಗೆಯೇ ಕೊಣಾಜೆ ಕೆಳಗಿನ ಮನೆಯ ನಾಗಪರಿವಾರ ಕ್ಷೇತ್ರದ ಬ್ರಹ್ಮ ಸನ್ನಿಧಿ ಕ್ಷೇತ್ರವು ಕೂಡಾ ಪುರಾತನ ಕ್ಷೇತ್ರವಾಗಿದ್ದು ಜೀರ್ಣೋದ್ದಾರ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಅವರು, ಕೊಣಾಜೆಯ ಬ್ರಹ್ಮ ಸನ್ನಿಧಿ ನಾಗಪರಿವಾರ ಕ್ಷೇತ್ರವು ಇತಿಹಾಸ ಪ್ರಸಿದ್ದ ಕ್ಷೇತ್ರವಾಗಿದ್ದು ಎಲ್ಲ ಧರ್ಮದವರು ಕ್ಷೇತ್ರದ ಅಭಿವೃದ್ಧಿಗಾಗಿ ಸಹಕಾರ ನೀಡುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ನಾವು ಮನಪೂರ್ವಕವಾಗಿ ತೊಡಗಿಸಿಕೊಳ್ಳೋಣ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬೊಳ್ಮ ಉಳ್ಳಾಲ್ತಿ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಅವರು ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅರ್ಚಕರಾದ ಜಗದೀಶ್ ಭಟ್, ಗಟ್ಟಿ ಸಮಾಜದ ಮುಖಂಡರಾದ ಪದ್ಮನಾಭ ಗಟ್ಟಿ, ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಯ ಸದಸು ಪದ್ಮನಾಭ ಕೋಟ್ಯಾನ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷ ಸಂತೋಷ್ ಶೆಟ್ಟಿ ಪುಲ್ಲು, ಶ್ರೀ ಸಾಯಿ ಟ್ರಸ್ಟ್‍ನ ಸೂರಜ್ ಮಂಗಳಾದೇವಿ, ರವೀಂದ್ರ ರೈ ಹರೇಕಳ, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಎಸ್‍ಕೆಡಿಆರ್‍ಪಿ ಯ ರೇಷ್ಮಾ, ರವೀಂದ್ರ ಬಂಗೇರ, ಉಪನ್ಯಾಸಕರಾದ ಸತೀಶ್ ಗಟ್ಟಿ, ಗಣೇಶ್ ಗಟ್ಟಿ ತುಂಬೆ, ಸೀತಾರಾಮ ಗಟ್ಟಿ, ಮಹಾಬಲ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಜೀರ್ಣೋದ್ದಾರ ಸಮಿತಿಯ ಅಚ್ಯುತ ಗಟ್ಟಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವರದರಾಜ್ ಅವರು ಕಾರ್ಯಕ್ರಮ ನಿರೂಪಿಸಿದರು.