UN NETWORKS
ದುಬೈ : ದುಬೈ ಸರ್ಕಾರದ ಪ್ರಾಯೋಜಕತ್ವದಲ್ಲಿ ಪ್ರತಿ ವರ್ಷ ರಂಝಾನ್ ತಿಂಗಳಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಪವಿತ್ರ ಖುರ್ಆನ್ ಸ್ಪರ್ಧೆ ಹಾಗೂ ಅವಾರ್ಡ್ ದಾನದ ಅಂಗವಾಗಿ ನಡೆಯುವ ಉಪನ್ಯಾಸ ಕಾರ್ಯಕ್ರಮದಲ್ಲಿ ಈ ಬಾರಿಯ ಮುಖ್ಯ ಭಾಷಣಕಾರರಾಗಿ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಆಹ್ವಾನಿತರಾಗಿದ್ದಾರೆ.
ಮೇ 10 ರಂದು ಶುಕ್ರವಾರ ತರಾವೀಹ್ ನಮಾಝ್ ಬಳಿಕ ದುಬೈ ಊದ್ ಮೇತ ಅಲ್ ವಾಸಲ್ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ನಡೆಯುವ ಸದರಿ ಕಾರ್ಯದರ್ಶಿದಲ್ಲಿ
“ಸಹಿಷ್ಣುತೆಯ ಸೌಂದರ್ಯ” ಎಂಬ ವಿಷಯದಲ್ಲಿ ಅವರು ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಭಾಷಣ ಮಾಡಲಿದ್ದಾರೆ. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಶೈಖುನಾ ಎ.ಪಿ.ಮುಹಮ್ಮದ್ ಮುಸ್ಲಿಯಾರ್ ಕಾಂತಪುರಂ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ದುಬೈ ಸರ್ಕಾರದ ನೋಂದಣಿ ಹೊಂದಿರುವ ಮರ್ಕಝು ಸ್ಸಖಾಫತಿ ಸ್ಸುನ್ನಿಯ್ಯಃ ಈ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದು, ಕಾರ್ಯಕ್ರಮದಲ್ಲಿ ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ ಅವರನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ ವತಿಯಿಂದ ಗೌರವಿಸಲಾಗುವುದು. ಯು.ಎ.ಇ.ಸರಕಾರದ ಪ್ರತಿನಿಧಿಗಳ ಸಮೇತ ಹಲವು ಗಣ್ಯರು ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲಿದ್ದಾರೆ.ಮಹಿಳೆಯರಿಗೆ ಪ್ರತ್ಯೇಕ ಸ್ಥಳ ಸೌಕರ್ಯ ಏರ್ಪಡಿಸಲಾಗಿದ್ದು ದುಬೈ ನಗರದ ವಿವಿಧ ಕಡೆಗಳಿಂದ ಬಸ್ ಸೌಕರ್ಯವಿದೆ.
ಕಾರ್ಯಕ್ರಮ ವನ್ನು ಗರಿಷ್ಠ ಪ್ರಮಾಣದಲ್ಲಿ ಯಶಸ್ವಿ ಗೊಳಿಸಲು ಎಲ್ಲ ಸುನ್ನೀ ಕಾರ್ಯಕರ್ತರು ಶ್ರಮಿಸಬೇಕೆಂದು ದುಬೈ ಮರ್ಕಝು ಸ್ಸಖಾಫತಿ ಸ್ಸುನ್ನಿಯ್ಯ ಹಾಗೂ ಕೆಸಿಎಫ್ ಯು.ಎ.ಇ.ಸಮಿತಿ ವಿನಂತಿಸಿಕೊಂಡಿದೆ