UN NETWORKS
ಉಳ್ಳಾಲ : ಸರ್ಕಾರಿ, ಕನ್ನಡ ಮತ್ತು ಅನುದಾನಿತ ಶಾಲೆಗಳಿಗೆ ನೀಡುವ ಸಹಾತ ನೇರವಾಗಿ ಸಮಾಜದ ಬಡ, ಹಿಂದುಳಿದ ವರ್ಗದ ಸಮೂಹಕ್ಕೆ ನೀಡಿದಂತೆ. ಸಮಾಜದಿಂದ ಗಳಿಸಿಕೊಂಡದ್ದರಲ್ಲಿ ಸ್ವಲ್ಪ ಭಾಗವನ್ನು ತಿರುಗಿ ಸಮಾಜಕ್ಕೆ ನೀಡುವುದರ ಮೂಲಕ ಲಯನ್ಸ್ ಸಂಸ್ಥೆ ಆದರ್ಶಪ್ರಾಯವಾಗಿದೆ ಎಂದು ಲಯನ್ಸ್ ಜಿಲ್ಲೆ 317ಡಿ ಇದರ ರಾಜ್ಯಪಾಲ ದೇವದಾಸ ಭಂಡಾರಿ ಅಭಿಪ್ರಾಯಪಟ್ಟರು.
ಲಯನ್ಸ್ ಕ್ಲಬ್ ಕಂಕನಾಡಿ ಪಡೀಲ್ ಇದರ ಕೊಡುಗೆಯಾಗಿ ಉಳ್ಳಾಲದ ಭಾರತ್ ವಿದ್ಯಾಸಂಸ್ಥೆಗೆ ನೀಡಿದ ಹೆಣ್ಮಕ್ಕಳ ಸುಸಜ್ಜಿತ ಶೌಚಗೃಹ ಸೋಮವಾರ ಉದ್ಘಾಟಿಸಿ ಮಾತನಾಡಿದರು. ಪಡೀಲ್ ಲಯನ್ಸ್ ಕ್ಲಬ್ ಇದರ ಅಧ್ಯಕ್ಷೆ ಉಮಾ ಬಾಲಕೃಷ್ಣ ಹೆಗ್ಡೆ ಮಾತನಾಡಿ, ಒಳ್ಳೆಯ ಕೆಲಸಗಳನ್ನು ಮಾಡಿದಾಗ ಸಿಗುವ ಸನ್ಮಾನದ ಆತ್ಮತೃಪ್ತಿ ಕೆಲಸ ಮಾಡಿದಕ್ಕಿಂತಲೂ ಮಿಗಿಲು. ಲಯನ್ಸ್ ಕೊಡುಗೆಯಾಗಿ ನೀಡಿರುವ ಶೌಚಗೃಹ ಸ್ವಚ್ಛವಾಗಿಟ್ಟು ಮುಂದಿನ ವಿದ್ಯಾರ್ಥಿಗಳಿಗೂ ಬಳಕೆಯಾಗುವಂತೆ ಮಾಡಿದಾಗ ವಿದ್ಯಾರ್ಥಿಗಳಿಂದಲೂ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದು ಹೇಳಿದರು.
ಮುಖ್ಯಶಿಕ್ಷಕಿ ವಿನಯ ಕುಮಾರಿ ಮಾತನಾಡಿ, ಹಿಂದೆ ನಮ್ಮ ಶಿಕ್ಷಣ ಸಂಸ್ಥೆಗೆ ಲಯನ್ಸ್ ನೀಡಿರುವ ಸ್ಮಾರ್ಟ್‍ಕ್ಲಾಸನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಕೆ ಮಾಡಿದ್ದು ವಿದ್ಯಾರ್ಥಿಗಳ ಬೆಳವಣಿಗೆಗೆ ತುಂಬಾ ಸಹಕಾರಿಯಾಗಿದೆ. ಇಂದು ಉದ್ಘಾಟನೆಗೊಂಡಿರುವ ಶೌಚಗೃಹವೂ ಶಾಲೆಗೆ ಅವಶ್ಯಕವಾಗಿತ್ತು ಎಂದರು.
ಲಯನ್ಸ್ ಕ್ಲಬ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಬಾಲಕೃಷ್ಣ ಹೆಗ್ಡೆ, ಕೋಶಾಧಿಕಾರಿ ಶ್ರೀನಾಥ್ ಕೊಂಡೆ, ಕಾರ್ಯದರ್ಶಿ ಆಶಾ ಚಂದ್ರಮೋಹನ್, ಕೋಶಾಧಿಕಾರಿ ಮಾಧವ ಉಳ್ಳಾಲ್, ಪ್ರಾಂತೀಯ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಉಳ್ಳಾಲ ನಗರಸಭಾ ನಿಕಟಪೂರ್ವ ಆಯುಕ್ತೆ ವಾಣಿ ವಿ. ಆಳ್ವ, ಕೌನ್ಸಿಲರ್‍ಗಳಾದ ಜಬ್ಬಾರ್, ರೇಷ್ಮಾ, ಸುಖಲತಾ ಭಂಡಾರಿ, ಚಂದ್ರಮೋಹನ್ ಮುಂತಾದವರು ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ಯಶವಂತ ಪಿ.ಅಮಿನ್ ಸ್ವಾಗತಿಸಿದರು. ಶಿಕ್ಷಕ ತಿಪ್ಪೇಸ್ವಾಮಿ ವಂದಿಸಿದರು. ನಿವೃತ್ತ ಶಿಕ್ಷಕ ವಾಸು ದೇವರಾವ್ ಕಾರ್ಯಕ್ರಮ ನಿರೂಪಿಸಿದರು.