Site icon Ullalavani

ಸಂಸ್ಥೆಗಳು ನಿಯಮ ಉಲ್ಲಂಘಿಸಿದರೆ ದೂರು ಕೊಡಿ : ವಿಲ್ಮಾ ತಾವ್ರೋ

UN NETWORKS

ಪಾನೀರ್ : ಯಾವುದೇ ಸಂಸ್ಥೆಯಲ್ಲಿ ಕಾರ್ಮಿಕರು ಎಂಟು ಗಂಟೆ ಕೆಲಸ ಮಾಡಿದರೆ ಕನಿಷ್ಠ ವೇತನ ನೀಡಬೇಕಿದ್ದು, ಹೆಚ್ಚು ಅವಧಿ ಕೆಲಸ ಮಾಡಿದರೆ ಹೆಚ್ಚು ವೇತನ ಹಾಗೂ ವಾರಕ್ಕೊಂದು ರಜೆ ವೇತನ ಸಹಿತ ನೀಡದಿದ್ದರೆ ಕಾರ್ಮಿಕ ಇಲಾಖೆಗೆ ದೂರು ನೀಡಬಹುದು ಎಂದು ಮಂಗಳೂರು ಉಪವಿಭಾಗದ ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬೆತ್ ತಾವ್ರೋ ಹೇಳಿದರು.

ಪಾನೀರ್ ಮೆರ್ಸಿಯಮ್ಮನವರ ದೇವಾಲಯ ಹಾಗೂ ಕೆಥೊಲಿಕ್ ಸಭಾ ಪಾನೀರ್ ಘಟಕದ ಜಂಟಿ ಆಶ್ರಯದಲ್ಲಿ ಕಾರ್ಮಿಕ ದಿನದ ಪ್ರಯುಕ್ತ ಭಾನುವಾರ ಪಾನೀರ್ ಚರ್ಚ್ ಸಭಾಂಗಣದಲ್ಲಿ ನಡೆದ ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು‌.
ಲಾಭಾಂಶದಲ್ಲಿ 8.33 ಬೋನಸ್, 50 ಕಾರ್ಮಿಕರಿದ್ದರೆ ಸ್ಕಾಲರ್ ಶಿಪ್, ಮತದಾನ,‌ ಕಾರ್ಮಿಕರ ದಿನ, ರಾಷ್ಟ್ರೀಯ ಹಬ್ಬಗಳ ಸಂದರ್ಭ ರಜೆ ನೀಡದಿದ್ದರೆ ದುಪ್ಪಟ್ಟು ವೇತನ ನೀಡಬೇಕಿದೆ. ಅಸಂಘಟಿತ ಕಾರ್ಮಿಕರಿಗೆ‌ ಇರುವ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಯೋಜನೆ ರಾಜ್ಯದಲ್ಲೇ ಉತ್ತಮ ಹೆಸರು ಪಡೆದಿದೆ. ಒಂದು ಕಟ್ಟಡದಲ್ಲಿ ಎಷ್ಟು‌‌ ಮಂದಿ ಕೆಲಸ ಮಾಡ್ತಾರೋ ಅವರೆಲ್ಲಾ ಕಟ್ಟಡ ಕಾರ್ಮಿಕರಾಗಿ ಗುರುತಿಸಲಾಗುತ್ತದೆ. ಸಂಪನ್ಮೂಲ ವ್ಯಕ್ತಿ 58,600 ಕಟ್ಟಡ ಕಾರ್ಮಿಕರು ಮಂಗಳೂರಿನಲ್ಲಿ‌ ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು.

ಪಾನೀರ್ ಚರ್ಚ್ ಧರ್ಮಗುರು ರೆ.ಫಾ.ಡೆನ್ನಿಸ್ ಸುವಾರಿಸ್ ಅಧ್ಯಕ್ಷತೆ ವಹಿಸಿ, ಸರ್ಕಾರದಿಂದ ಹಲವಾರು ಯೋಜನೆ, ಸವಲತ್ತುಗಳು ಇದ್ದರೂ ಅದನ್ನು ಪಡೆಯುವಲ್ಲಿ ಕ್ರೈಸ್ತ ಸಮುದಾಯ ಹಿಂದೆ ಬಿದ್ದಿದೆ. ನಾವು ದುಡಿದಿರುವುದರಲ್ಲೇ ಸಿಕ್ಕಿದ್ದು ಸಾಕು ಎನ್ನುವ ಭಾವನೆ ಇದಕ್ಕೆ ಕಾರಣ. ಅದನ್ನೆಲ್ಲಾ ಮನಸ್ಸಿನಿಂದ ತೊರೆದು ಒಂದಷ್ಟು ಶ್ರಮಪಟ್ಟು ಸರ್ಕಾರದ ಸವಲತ್ತುಗಳನ್ನು ಪಡೆಯಲು ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿ ವಿರೇಂದ್ರ ಕುಮಾರ್, ಕಾರ್ಮಿಕ ಅಧಿಕಾರಿ ಹರೀಶ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.‌ ಪಾನೀರ್ ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಡಿಸೋಜ, ಎಸ್ ವಿಪಿ ಸಭೆಯ ಅಧ್ಯಕ್ಷ ಜಾನ್ ಪಾಯ್ಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪಿಲಿಪ್ ಡಿಸೋಜ, ಮೈಕಲ್ ಡಿಸೋಜ, ಉರ್ಬನ್ ಫೆರಾವೋ‌, ಸ್ಟೀವನ್ ವಾಸ್, ಸಿಂತಿಯಾ ನೊರೊನ್ಹ ಮೊದಲಾದವರು ಉಪಸ್ಥಿತರಿದ್ದರು. ಕೆಥೊಲಿಕ್ ಸಭಾ ಪಾನೀರ್ ಘಟಕಾಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಸ್ವಾಗತಿಸಿದರು. ಕಾರ್ಯದರ್ಶಿ ರುವಿತಾ ಮೆನೇಜಸ್ ವಂದಿಸಿದರು. ರೇಶ್ಮಾ ಸಂತನೇಜ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು

‘ಎಲ್ಲಾ ಕಟ್ಟಡ ಕಾರ್ಮಿಕರು ತಮ್ಮ ಹೆಸರನ್ನು ಇಲಾಖೆಯಲ್ಲಿ ನೊಂದಾಯಿಸಿಕೊಳ್ಳಿ, ಇತರರಿಗೂ ಮಾಹಿತಿ ನೀಡಿ ನೊಂದಾಯಿಸುವಂತೆ ಮಾಡಿದರೆ ಅದೊಂದು ಪುಣ್ಯದ‌ ಕಾರ್ಯ ಎನಿಸಲಿದೆ, ಸರಕು ಸಾಗಾಟ ವಾಹನದಲ್ಲಿ ಕಾರ್ಮಿಕರನ್ನು ಸಾಗಿಸುವುದು ಕಾನೂನು ಬಾಹಿರವಾಗಿದ್ದು ಇಂತಹ ಪ್ರಕರಣ ಕಂಡು ಬಂದರೆ ಕೇಸು‌ ದಾಖಲಿಸಲಾಗುತ್ತದೆ’
ವಿಲ್ಮಾ ಎಲಿಜಬೆತ್ ತಾವ್ರೋ, ಮಂಗಳೂರು ಉಪವಿಭಾಗದ ಕಾರ್ಮಿಕ ಅಧಿಕಾರಿ

Exit mobile version