UN NETWORKS
ಕುಂಪಲ : ಕುಂಪಲ ಪ್ರದೇಶಕ್ಕೆ ಖಾಸಗಿ ಬಸ್ಸುಗಳ ಅವ್ಯವಸ್ಥೆ ವಿರುದ್ಧ ಗ್ರಾಮಸ್ಥರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರದೇಶಕ್ಕೆ ಖಾಸಗಿ ಬಸ್ಸು ಮಾಲೀಕರ ಸಂಘದ ಅಧ್ಯಕ್ಷರು ಹಾಗೂ ವಲಯ ಅಧ್ಯಕ್ಷರ ನಿಯೋಗ ಭೇಟಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.
ಕುಂಪಲ ಬಾಲಕೃಷ್ಣ ಮಂದಿರದಲ್ಲಿ ನಡೆಸಿದ ಸಭೆಯಲ್ಲಿ , ಮಂಗಳೂರಿನಿಂದ ಕುಂಪಲಕ್ಕೆ ಖಾಸಗಿ ಬಸ್ಸುಗಳ ಆರು ಪರ್ಮಿಟ್ ಇವೆ. ಆದರೆ ಇದರಲ್ಲಿ ಕೇವಲ ಮೂರು ಬಸ್ಸುಗಳು ಮಾತ್ರ ವಾರದ ಆರು ದಿನದಲ್ಲಿ ಸಂಚರಿಸಿದರೆ, ಭಾನುವಾರ ಎರಡು ಬಸ್ಸುಗಳು ಮಾತ್ರ ಸೇವೆ ನೀಡುತ್ತಿದೆ. ಇದರಿಂದ ಈ ಭಾಗದ ಜನರಿಗೆ ಬಹಳಷ್ಟು ತೊಂದರೆಯಾಗಿದೆ. ಈ ಹಿಂದೆ ಪ್ರದೇಶಕ್ಕೆ ಕೆಎಸ್ ಆರ್ ಟಿಸಿ ಬಸ್ಸು ಹಾಕುವಂತೆ ಒತ್ತಾಯ ಕೇಳಿಬಂದಿದ್ದರೂ, ಪರ್ಮಿಟ್ ಹೊಂದಿರುವ ಮಾಲೀಕರು ತಡೆಯಾಜ್ಞೆ ತಂದಿರುವುದರಿಂದ ಅದು ಸಾಧ್ಯವಾಗಿರಲಿಲ್ಲ. ಇದೀಗ ಪರ್ಮಿಟ್ ಇದ್ದರೂ, ಎರಡು ಗಂಟೆಗೊಮ್ಮೆ ಮೂರು ಬಸ್ಸುಗಳು ಕಾರ್ಯಾಚರಿಸುತ್ತಿರುವುದು ಗ್ರಾಮದ ಜನರಿಗೆ ಬಹಳಷ್ಟು ತೊಂದರೆಯಾಗಿದೆ ಅನ್ನುವ ಆರೋಪ ಕೇಳಿಬಂದಿತು.
ಇದಕ್ಕೆ ಪ್ರತಿಕ್ರಿಯಿಸಿದ ದ.ಕ ಖಾಸಗಿ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ, ಖಾಸಗಿ ಬಸ್ಸುಗಳು ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ. ಆದರೆ ಇದೀಗ ಕುಂಪಲ ಭಾಗದ ಖಾಸಗಿ ಬಸ್ಸುಗಳಿಂದ ಜನರಿಗೆ ತೊಂದರೆಯಾಗಿರುವುದು ಗಮನಕ್ಕೆ ಬಂದಿದೆ. ಎರಡು ದಿನಗಳ ಒಳಗೆ ಪರ್ಮಿಟ್ ಮಾಲೀಕರು ಎಸಿಪಿ ಕಚೇರಿಗೆ ಬರುವಂತೆ ಸೂಚಿಸುತ್ತೇವೆ. ಅವರಿಂದ ಬಸ್ಸುಗಳನ್ನು ರಸ್ತೆಗೆ ಇಳಿಸಲು ಸಾಧ್ಯವಾಗದೇ ಇದ್ದಲ್ಲಿ, ಕೆಎಸ್ ಆರ್ ಟಿಸಿ ಬಸ್ಸು ಹಾಕುವಂತೆ ಅವರಿಂದಲೇ ಒಪ್ಪಿಗೆ ಸಹಿಯನ್ನು ಪಡೆದುಕೊಳ್ಳುವಂತೆ ಮಾಡುತ್ತೇವೆ. ಬಸ್ಸು ಅವ್ಯವಸ್ಥೆ ವಿರುದ್ಧ ಜನ ಗಲಭೆ ಏಳದಂತೆ ಮನವಿ ಮಾಡಿಕೊಂಡರು.
ಬಸ್ಸು ಮಾಲೀಕರ ಸಂಘದ ವಲಯ ಅಧ್ಯಕ್ಷ ಕೆ.ಎನ್.ಆರ್ ಕರೀಂ, ಮಂಗಳೂರು ದಕ್ಷಿಣಾ ಸಂಚಾರಿ ಠಾಣಾ ಎಎಸ್ ಐ ಜೀವರಾಜ್, ಜಿ.ಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ . ಸೋಮೇಶ್ವರ ಪಂಚಾಯಿತಿ ಸದಸ್ಯರಾದ ಹರೀಶ್ ಕುಂಪಲ, ಶಶಿಕಲಾ, ಕುಮುದಾ ಅಡಪ, ಕಿಶೋರ್, ಹೇಮಲತಾ, ದೇವಾನಂದ ಶೆಟ್ಟಿ ಹಾಗೂ ಕೆಎಸ್ ಆರ್ ಟಿಸಿ ಬಸ್ಸಿಗೆ ಹೋರಾಡುತ್ತಿರುವ ಶಿವಾನಂದ ಟೈಲರ್, ಎಎಸ್.ಎಸ್ ನಾಯಕ್ ಉಪಸ್ಥಿತರಿದ್ದರು.