UN NETWORKS
ಕುಂಪಲ : ಜೀವನದಲ್ಲಿ ಎಲ್ಲವೂ ಗೆಲುವು, ಆಗಬೇಕೆಂದೇನೂ ಇಲ್ಲ, ಕಡಿಮೆ ಅಂಕ ಪಡೆದವರು ಧೈರ್ಯಗುಂದಬೇಕಿಲ್ಲ, ಹೆಚ್ಚು ಅಂಕ ಪಡೆದವರು ಅತಿಯಾಗಿ ಬೀಗದೆ ಕಡಿಮೆ ಅಂಕ ಪಡೆದವರಿಗೆ ಸಲಹೆ, ಸಹಕಾರ ನೀಡಿ ಎಂದು ಬಂಟ್ವಾಳ ತಾಲೂಕು ವಿಶೇಷ ಅಗತ್ಯವುಳ್ಳ ಮಕ್ಕಳ ನೋಡೆಲ್ ಅಧಿಕಾರಿ ಸುರೇಖಾ ಕಿವಿಮಾತು ಹೇಳಿದರು.
ಕುಂಪಲ ಸರ್ಕಾರಿ ಪ್ರೌಢಶಾಲೆ (ಅರ್.ಎಂ.ಎಸ್.ಎ)ಯಲ್ಲಿ ಗುರುವಾರ ಶಾಲಾಭಿವೃದ್ಧಿ ಸಮಿತಿಯಿಂದ ನಡೆದ ಎಸ್ಸೆಸ್ಸೆಎಲ್ಸಿ ಪರೀಕ್ಷೆಯಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಎಸ್ಸೆಸ್ಸೆಎಲ್ಸಿಯಾದ ಕೂಡಲೇ ಶಿಕ್ಷಣ ಮುಗಿಯಿತು ಎಂದೇನೂ ಇಲ್ಲ. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಸಹಕಾರಿಯಾಗುವಂತಹ ರೀತಿಯ ಉದ್ಯೋಗ ಪಡೆದು ಉತ್ತಮ ಪ್ರಜೆಯಾಗಿ ಜೀವನ ಸಾಗಿಸಿ. ಉಪಕಾರ ಮಾಡಲು ಸಾಧ್ಯವಾಗದಿದ್ದರೆ ತೊಂದರೆಯನ್ನಂತೂ ಮಾಡದೆ ಜೀವನ ಸಾಗಿಸುವುದು ಮುಖ್ಯ ಎಂದು ಹೇಳಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕುಂಪಲ ಮಾತನಾಡಿ, ಇಂದು ಸರ್ಕಾರಿ ಶಾಲೆಗಳಲ್ಲೂ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಕುಂಪಲ ಶಾಲೆಯೂ ವರ್ಷವೂ ಉತ್ತಮ ಸಾಧನೆ ಮಾಡುತ್ತಿದ್ದು ಮುಂದೆ ಜಿಲ್ಲೆಯಲ್ಲೇ ಮಾದರಿ ಶಾಲೆಯನ್ನಾಗಿಸಲು ಎಲ್ಲರ ಸಹಕಾರ ಅಗತ್ಯ ಎಂದರು.
ಶಿಕ್ಷಣ ಪ್ರೇಮಿ ಸದಾಶಿವ ಉಳ್ಳಾಲ್ ಅಧ್ಯಕ್ಷತೆ ವಹಿಸಿ, ಅನುತ್ತೀರ್ಣರಾದರೆ ಹತಾಶ ಭಾವನೆ ಬೇಡ. ಅನುತ್ತೀರ್ಣ ಎಂದರೆ ಮುಂದಿನ ಜೀವನಕ್ಕೆ ಹುಮ್ಮಸ್ಸು ತರುವಂತಾಗಬೇಕಿದೆ. ಮುಂದಿನ ಶಿಕ್ಷಣದ ಆಯ್ಕೆ ಅಭಿರುಚಿಗೆ ತಕ್ಕಂತೆ ಇರಲಿ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಲಿಖಿತ್ ಕುಮಾರ್, ಪವನ್ ಕುಮಾರ್, ಭಾಗ್ಯಶ್ರೀ, ಕರಕಪ್ಪ, ಪ್ರಥಮ್ ಹಾಗೂ ಯಕ್ಷಿತಾ ಅವರನ್ನು ಅಭಿನಂದಿಸಲಾಯಿತು. ಕೆಎಸ್‍ಆರ್‍ಟಿಸಿ ಸಿಬ್ಬಂದಿ ದಿನೇಶ್ ಕುಂಪಲ, ಶಾಲಾಭಿವೃದ್ಧಿ ಸಮಿತಿ ಸದಸ್ಯ ವೆಂಕಪ್ಪ ಮುಖ್ಯ ಅತಿಥಿಗಳಾಗಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ರಾಧಿಕಾ ಸ್ವಾಗತಿಸಿದರು. ನವಚೇತನ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ವಿನೋದ್ ಕುಂಪಲ ಶಿಕ್ಷಕಿ ತೆರೆಸಾ ಲೀಲಾ ಲೋಬೋ ಕಾರ್ಯಕ್ರಮ ನಿರೂಪಿಸಿದರು.
`ತಂದೆ, ತಾಯಿ ಹಾಗೂ ಗುರುಗಳು ನೀಡಿದ ಹೆಚ್ಚಿನ ಪ್ರೋತ್ಸಾಹದ ಫಲವಾಗಿ ನಾನು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣ ಆಗಿದ್ದೇನೆ, ನಿಜವಾಗಿಯೂ ಇದು ಮರೆಯಲಾಗದ ಅನುಭವ ಆಗಿದೆ’
ಲಿಖಿತ್ ಕುಮಾರ್, ಡಿಸ್ಟಿಂಕ್ಷನ್ ವಿದ್ಯಾರ್ಥಿ