UN NETWORKS
ಕೆ.ಸಿ.ರೋಡು : ದೂರದೂರಿನಿಂದ ಆಗಮಿಸುವ ಪ್ರವಾಸಿಗರನ್ನು ಸ್ವಾಗತಿಸಿ ಆತ್ಮೀಯ ಸೇವೆ ನೀಡುವ ಆಟೋ ಚಾಲಕರು ಸಮಯಪ್ರಜ್ಞೆಯೊಂದಿಗೆ ಅತ್ಯಂತ ಮಹತ್ವದ್ದಾಗಿರುವ ರಕ್ತದಾನ ಶಿಬಿರ ಹಮ್ಮಿಕೊಳ್ಳುವ ಮೂಲಕ ಮಾನವೀಯ ಸೇವೆಗೆ ಮುಂದಾಗಿರುವುದು ಶ್ಲಾಘನೀಯ ಎಂದು ಎಸ್‍ವೈಎಸ್ ಕೆ.ಸಿ.ರೋಡು ಘಟಕಾಧ್ಯಕ್ಷ ಉಮರಬ್ಬ ಮಾಸ್ಟರ್ ಅಭಿಪ್ರಾಯಪಟ್ಟರು.
ಕೆ.ಸಿ.ರೋಡು ಅಟೋ ಚಾಲಕ-ಮಾಲಕರ ಸಂಘ ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಭಾಗಿತ್ವದಲ್ಲಿ ಭಾನುವಾರ ಕೆ.ಸಿ.ರೋಡ್‍ನಲ್ಲಿ ನಡೆದ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾನವನಾಗಿ ಹುಟ್ಟಿದ ಬಳಿಕ ಯಾವುದಾದರೂ ರೀತಿಯಲ್ಲಿ ಸೇವೆ ನೀಡದಿದ್ದರೆ ಮನುಷ್ಯ ಜೀವನವೇ ನಿಷ್ಪ್ರಯೋಜಕ ಎನಿಸುತ್ತದೆ. ರಕ್ತಕ್ಕೆ ಪರ್ಯಾಯ ಎನಿಸುವಂತದ್ದು ಯಾವುದೂ ಇಲ್ಲ. ಇದನ್ನು ಅರಿತುಕೊಂಡು ಅಟೋ ಚಾಲಕರು ಶಿಬಿರ ಹಮ್ಮಿಕೊಳ್ಳುವ ಮೂಲಕ ಸಹೋದರತೆಯನ್ನು ತೋರಿಸಿದ್ದಾರೆ ಎಂದು ಹೇಳಿದರು.
ಎ.ಜೆ.ಆಸ್ಪತ್ರೆಯ ಡಾ.ನಿತಿನ್ ಆಚಾರ್ಯ ಉದ್ಘಾಟಿಸಿದರು. ಯುಎಸ್‍ಡಬ್ಲ್ಯುಓ ಅಧ್ಯಕ್ಷ ರಹೀಂ ಯು.ಬಿ.ಎಂ., ಬ್ಲಡ್ ಹೆಲ್ಪ್‍ಲೈನ್ ಪ್ರಯೋಜಕ ನವಾಝ್ ದೇರಳಕಟ್ಟೆ, ಗೌರವಾಧ್ಯಕ್ಷ ನಝೀರ್ ಹುಸೈನ್, ಸಮಾಜ ಸೇವಕರಾದ ಅಬ್ಬಾಸ್ ಉಚ್ಚಿಲ್, ಯಾಹ್ಯಾ ಕೆ.ಬಿ., ಎ.ಜೆ.ಆಸ್ಪತ್ರೆಯ ರಕ್ತ ಪೂರೈಕೆ ವಿಭಾಗದ ವ್ಯವಸ್ಥಾಪಕ ಗೋಪಾಲಕೃಷ್ಣ, ಫಯಾಝ್ ಅಲಿ ಬೈಂದೂರು, ಲತೀಫ್ ಕೈರಳಿ, ರವೂಫ್ ಬಂದರ್, ಕೆ.ಎಸ್.ಮುಹಮ್ಮದ್, ಸಂಚಾಲಕ ಸಂಶುದ್ದೀನ್ ಉಚ್ಚಿಲ್, ಮುಸ್ತಫಾ ಕೆ.ಸಿ.ರೋಡು ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಅಟೋ ಚಾಲಕರಾದ ಕೆ.ಎಚ್.ಮುಹಮ್ಮದ್, ಅಹ್ಮದ್ ಬಾವ, ಮಂಜಪ್ಪ, ಇಸ್ಮಾಯಿಲ್ ಹಾಗೂ ಅತಿಹೆಚ್ಚು ರಕ್ತದಾನ ಮಾಡಿದ ಹೈದರಾಲಿ, ಶರೀಫ್ ಮಾಡೂರು, ಮುಸ್ತಫಾ ಹಿದಾಯತ್ ನಗರ, ಜಾವೇದ್ ಕೆ.ಸಿ.ನಗರ ಸನ್ಮಾನಿಸಲಾಯಿತು.
ಕೆ.ಸಿ.ನಗರ ಮಸೀದಿಯ ಖತೀಬ್ ಮೌಲಾನ ಹನೀಫ್ ಸಖಾಫಿ ದುವಾ ನೆರವೇರಿಸಿದರು.
ಉಚ್ಚಿಲ ಜುಮಾ ಮಸೀದಿಯ ಕಾರ್ಯದರ್ಶಿ ಸಲಾಂ ಉಚ್ಚಿಲ್ ಕಾರ್ಯಕ್ರಮ ನಿರೂಪಿಸಿದರು.