UN NETWORKS
ಉಳ್ಳಾಲ: ಪ್ರಧಾನಿ ಮೋದಿ ರ್ಯಾಲಿಯಿಂದ ವಾಪಸ್ಸಾಗುತ್ತಿದ್ದ ಬಸ್ಸಿಗೆ ನುಗ್ಗಿ ದಾಂಧಲೆ, ವಾಹನಗಳಿಗೆ ಕಲ್ಲು ತೂರಾಟ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 50 ಕ್ಕೂ ಅಧಿಕ ಮಂದಿಯ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಬಾಲಾಪರಾಧಿಗಳು ಸೇರಿದಂತೆ ಏಳು ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕುಪ್ಪೆಪದವು ಕಿಲಿಂಜೂರು ನಿವಾಸಿ ಸಲ್ಮಾನ್ ಫಾರಿಷ್ (21), ಜೆಪ್ಪು ಎಂ. ಆರ್ ಭಟ್ ಲೇನಿನ ಮಹಮ್ಮದ್ ಸಿನಾನ್( 19), ಜೆಪ್ಪು ಮಹಾಂಕಾಳಿಪಡ್ಪುವಿನ ಮಹಮ್ಮದ್ ಅರ್ಫಾಝ್ (27), ಮದನಿನಗರ ಶಾಂತಿಬಾಗ್ ನ ನೌಫಾಲ್ ಯಾನೆ ಕಿಡ್ನಿ ನೌಫಾಲ್ (20), ಅಡ್ಯಾರು ಕೆಂಪುಗುಡ್ಡೆ ಕಣ್ಣೂರಿನ ಮಹಮ್ಮದ್ ರಫೀಜ್ ಯಾನೆ ಅಫ್ರೀದ್ (20) ಹಾಗೂ ಇಬ್ಬರು ಬಾಲಾಪರಾಧಿಗಳನ್ನು ಬಂಧಿಸಲಾಗಿದೆ.
ಆರೋಪಿಗಳ ವಿರುದ್ಧ ಬಂಧಿತ 7 ಮಂದಿ ಸೇರಿದಂತೆ 50ಕ್ಕೂ ಹೆಚ್ಚು ಗುಂಪಿನ ವಿರುದ್ ಪ್ರಕರಣ ದಾಖಲಾಗಿದೆ. ಬಸ್ಸಿನ ಒಳಗೆ ನುಗ್ಗಿ ದಾಂಧಲೆ, ಕಲ್ಲು ತೂರಾಟ, ಭಯದ ವಾತಾವರಣ, ಕೊಲೆ ಯತ್ನ, ಮಾನಭಂಗ ಯತ್ನ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ. ಮೂವರು ಯುವಕರು ಸೇರಿದಂತೆ 16 ಮಂದಿ ಮಹಿಳೆಯರ ತಂಡ ನೀಡಿದ ದೂರಿನ ಆಧಾರದಲ್ಲಿ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಕ್ಷುಲ್ಲಕ ವಿಚಾರ ಗಲಭೆಯನ್ನೇ ನಡೆಸಿತ್ತು:
ಮಂಗಳೂರಿನಿಂದ ಕೊಣಾಜೆ ಕಡೆಗೆ ವಾಪಾಸ್ಸು ಆಗುತ್ತಿದ್ದ ಕಾರು ಹಾಗೂ ಜಪ್ಪು ನಿವಾಸಿಗಳಿದ್ದ ಕಾರು ಓವರ್ ಟೇಕ್ ಮಾಡುವ ವಿಚಾರವಾಗಿ ಇತ್ತಂಡಗಳ ಮಧ್ಯೆ ವಾಗ್ವಾದ ನಡೆದಿತ್ತು. ಈ ಸಂದರ್ಭ ಹೊಡೆದಾಟವು ನಡೆದಿತ್ತು. ಇದನ್ನು ಗಮನಿಸಿದ ಮೋದಿ ರರ್ಯಾಲಿಯಿಂದ ವಾಪಾಸ್ಸಾಗುತ್ತಿದ್ದ ಬಸ್ಸಿನಲ್ಲಿದ್ದ ಯುವಕರ ತಂಡ ತಡೆಯಲು ಯತ್ನಿಸಿದಾಗ , ಗುಂಪೊಂದು ಬಸ್ಸು, ಕಾರಿಗೆ ಕಲ್ಲು ತೂರಾಟ ನಡೆಸಿ ಮಹಿಳೆಯರ ಮೇಲೆ ದಾಂಧಲೆ ನಡೆದಿತ್ತು. ಘಟನೆಯಲ್ಲಿ ನಾಲ್ವರು ಗಾಯಗೊಂಡು ಚಿಕಿತ್ಸೆ ಪಡೆದುಕೊಂಡು ಆಸ್ಪತ್ರೆಯಿಂದ ವಾಪಾಸ್ಸಾಗಿದ್ದಾರೆ. ಎರಡು ಬಸ್ಸು ಸೇರಿದಂತೆ ಒಂದು ಕಾರಿಗೆ ಹಾನಿಯಾಗಿತ್ತು.
ಮುಂದುವರಿದ ಬಂದೋಬಸ್ತು:
ಸೂಕ್ಷ್ಮ ಪ್ರದೇಶವಾಗಿರುವ ಮದನಿ ನಗರದಲ್ಲಿ ಹೆಚ್ಚು ವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಮೂವರು ಇನ್ಸ್ ಪ್ಟೆಕ್ಟರ್ ಗಳು , ಮೂರು ಪಿಸಿಆರ್ ವಾಹನಗಳು ಸ್ಥಳದಲ್ಲೇ ಠಿಕಾಣಿ ಹೂಡಿದೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.