Site icon Ullalavani

ಮಂಗಳೂರು ವಿವಿ 37ನೇ ವಾರ್ಷಿಕ ಘಟಿಕೋತ್ಸವ

UN NETWORKS

ಕೊಣಾಜೆ : ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬದುಕುವ ಜತೆಗೆ ಸಮಾಜ ಸುಧಾರಣೆಯ ಕೆಲಸ ಮಾಡಿದ ಮಹಾತ್ಮರ ಜೀವನ ಹಾದಿಯಿಂದ ಸ್ಫೂರ್ತಿಯನ್ನು ಪದವೀಧರರು ಪಡೆಯುವ ಅಗತ್ಯವಿದೆ ಎಂದು ಕೇರಳ ಸರಕಾರದ ಮಾಜಿ ಮುಖ್ಯ ಕಾರ‍್ಯದರ್ಶಿ ಹಾಗೂ ಬರೋಡಾದ ಎಂ.ಎಸ್.ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪದ್ಮ ರಾಮಚಂದ್ರನ್ ಹೇಳಿದರು.

ಅವರು ಮಂಗಳಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ನಡೆದ ಮಂಗಳೂರು ವಿವಿಯ 37ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಸಮಾಜದಲ್ಲಿ ಸಾಕಷ್ಟು ಮಂದಿಗೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಆದರೆ ಇಂತಹ ಶಿಕ್ಷಣ ಪಡೆದವರು ಇತರರಿಗೆ ಆದರ್ಶರೂಪದಲ್ಲಿ ಬದುಕುವ ಜತೆಯಲ್ಲಿ ತಾವು ಕಲಿತ ಶಿಕ್ಷಣವನ್ನು ಮತ್ತೊಬ್ಬರಿಗೆ ಹಂಚುವ ಕೆಲಸದಿಂದ ಸಮಾಜದಲ್ಲಿ ಸಾಕಷ್ಟು ಸುಧಾರಣೆ, ಬದಲಾವಣೆಗೆ ಅವಕಾಶ ಸಿಗಲಿದೆ ಎಂದರು. ಈ ಸಂದರ್ಭ ಕುಲಸಚಿವ .ಎ.ಎಂ.ಖಾನ್ ಅವರು ಮಂಗಳೂರು ವಿವಿಯ ಸಾಧನೆಯನ್ನು ವಾಚಿಸಿದರು.

149 ಮಂದಿಗೆ ಪಿಎಚ್‌ಡಿ ಪದವಿ:

ಈ ಘಟಿಕೋತ್ಸವದಲ್ಲಿ ಮಂಗಳೂರು ವಿವಿಯಿಂದ ಒಬ್ಬರಿಗೆ ಡಾಕ್ಟರ್ ಆಫ್ ಸಯನ್ಸ್, ಕಲೆ ನಿಕಾಯದಲ್ಲಿ 27, ವಿಜ್ಞಾನ ನಿಕಾಯದಲ್ಲಿ -99, ವಾಣಿಜ್ಯ ನಿಕಾಯದಲ್ಲಿ 14 ಹಾಗೂ ಶಿಕ್ಷಣ ನಿಕಾಯದಲ್ಲಿ9 ಮಂದಿಗೆ ಸೇರಿದಂತೆ 149 ಮಂದಿಗೆ ಪಿಎಚ್‌ಡಿ ಡಾಕ್ಟರೇಟ್ ಪದವಿಯನ್ನು ನೀಡಲಾಯಿತು. 34 ಮಂದಿಗೆ ಚಿನ್ನದ ಪದಕ ಹಾಗೂ 98 ಮಂದಿಗೆ ನಗದು ಬಹುಮಾನ ನೀಡಲಾಯಿತು. ನಾನಾ ಕೋರ್ಸ್‌ಗಳಲ್ಲಿ ಪ್ರಥಮ ರ‍್ಯಾಂಕ್ ಪಡೆದ 70 ಮಂದಿಗೆ ರ‍್ಯಾಂಕ್ ಪ್ರಮಾಣ ಪತ್ರ ನೀಡಲಾಯಿತು. ಈ ಸಂದರ್ಭ ಮಂಗಳೂರು ವಿವಿಯ ಪ್ರಭಾರ ಕುಲಪತಿ ಪ್ರೊ. ಕಿಶೋರಿ ನಾಯಕ್ ಕೆ, ಪರೀಕ್ಷಾಂಗ ಕುಲಸಚಿವ ಡಾ. ವಿ.ರವೀಂದ್ರ ಆಚಾರ್, ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್‌ನ ಸದಸ್ಯರು ಭಾಗವಹಿಸಿದ್ದರು.

ರುವಾಂಡ ಉಪನ್ಯಾಸಕರಿಗೆ ಪಿಎಚ್‌ಡಿ:

ವಿಶೇಷವಾಗಿ ರುವಾಂಡ ದೇಶದ ಆರು ಮಂದಿಗೆ ಈ ಬಾರಿಯ ಘಟಿಕೋತ್ಸವದಲ್ಲಿ ಪಿಎಚ್‌ಡಿ ಪದವಿಯನ್ನು ನೀಡುವ ಮೂಲಕ ಮಂಗಳೂರು ವಿವಿ ಮೊದಲ ಬಾರಿಗೆ ವಿಶಿಷ್ಟವಾದ ಸಾಧನೆಯನ್ನು ಮಾಡಿದೆ. ರುವಾಂಡ ವಿವಿಯ ಆರು ಮಂದಿ ಉಪನ್ಯಾಸಕರು 2014ರಲ್ಲಿ ಅಕ್ಟೋಬರ್‌ನಲ್ಲಿ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ವಿದ್ಯಾರ್ಥಿ ವೇತನ ಪಡೆಯುವ ಮೂಲಕ 2018ರ ಜೂನ್‌ನಲ್ಲಿ ರುವಾಂಡದ ದುಸೈದಿ ಒಡೆಟ್ಟಿ ಗ್ಯಾಸೆಂಗೈರೆ( ಕಲಾ), ರುಸಗರ ಜೀನ್ ಬೊಸ್ಕೋ(ಕಲಾ), ಮುತಾ ಮಿರಿಜಾ ಯುರಾರಿ(ವಾಣಿಜ್ಯ), ಲುಬೆರಾನಾ ಅಲೆಕ್ಸ್(ಕಲಾ), ಅವೆರೂವೆಂಚುರ್ ಮಿರಿ( ಬಯೋ ಸೈನ್ಸ್), ನಾಕುವೆರ್‌ಝಾ ಜೀನ್(ಕೆಮೆಸ್ಟ್ರಿ) ವಿಚಾರದಲ್ಲಿ ಪಿಎಚ್‌ಡಿಯನ್ನು ಪಡೆದುಕೊಂಡರು. ರುವಾಂಡದ ವಿವಿಯಲ್ಲಿ ಉಪನ್ಯಾಸಕರಾಗಿರುವ ಇವರು ಪೂರ್ಣ ಅವಧಿಯ ಲೆಕ್ಕಚಾರದಲ್ಲಿ ಪಿಎಚ್‌ಡಿಯನ್ನು ಪಡೆದುಕೊಂಡಿದ್ದಾರೆ. ಪದವಿ ಪಡೆದುಕೊಂಡ ಬಳಿಕ ವಿಕದ ಜತೆಗೆ ಮಾತನಾಡಿದ ರುವಾಂಡದ ಉಪನ್ಯಾಸಕ ದುಸೈದಿ ಒಡೆಟ್ಟಿ ಗ್ಯಾಸೆಂಗೈರೆ ರುವಾಂಡದಿಂದ ಆರು ಮಂದಿ ಪಿಎಚ್‌ಡಿಗೆ ಬಂದಿದ್ದೇವು ನಾನಾ ವಿಚಾರದಲ್ಲಿ ಪಿಎಚ್‌ಡಿ ಮಾಡಿ ಮುಗಿಸಿದ್ದೇವೆ. ಇನ್ನು ರುವಾಂಡ ವಿವಿಯಲ್ಲಿ ಉಪನ್ಯಾಸ ವೃತ್ತಿಯನ್ನು ಮುಂದುವರಿಸುತ್ತೇವೆ. ಭಾರತದ ಶಿಕ್ಷಣ ವ್ಯವಸ್ಥೆಗೂ ರುವಾಂಡದ ಶಿಕ್ಷಣ ವ್ಯವಸ್ಥೆಗೂ ಸಾಕಷ್ಟು ವ್ಯತ್ಯಾಸವಿದೆ. ಇಲ್ಲಿ ತುಂಬಾನೇ ಉತ್ತಮ ಶಿಕ್ಷಣ ವ್ಯವಸ್ಥೆಯಿದೆ ಎಂದರು.

ಆರು ಪದಕ ಪಡೆದ ಅತಿಥಿ ಉಪನ್ಯಾಸಕಿ:

ಮಡಿಕೇರಿ ನಾಪೊಕ್ಲುವಿನ ಸೌಮ್ಯ ಕೆ.ಎ ಅವರು ಮಂಗಳೂರು ಘಟಿಕೋತ್ಸವದಲ್ಲಿ ಎಂಎ ಕನ್ನಡದಲ್ಲಿ ಆರು ಪದಕಗಳನ್ನು ಪಡೆದುಕೊಂಡಿದ್ದಾರೆ. ಅವರು ಮಂಗಳೂರು ವಿವಿಯ ಚಿಕ್ಕಕಳವಾರದಲ್ಲಿ ಕನ್ನಡದಲ್ಲಿ ಎಂಎ ಮಾಡಿದ್ದರು. ಕೃಷಿ ಕುಟುಂಬದಿಂದ ಬಂದ ಸೌಮ್ಯರ ತಂದೆ ಅನಂತ್ ಕೆ.ಸಿ 15 ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ತಾಯಿ ರಾಣಿ ಕೆ.ಎ ಹಾಗೂ ಸಹೋದರ ಗೌತಮ್ ಅವರ ಜತೆಯಲ್ಲಿರುವ ಸೌಮ್ಯ ಈಗಾಗಲೇ ನೆಟ್ ಪರೀಕ್ಷೆ ಪೂರ್ಣಗೊಳಿಸಿದ್ದಾರೆ. ಕನ್ನಡದಲ್ಲಿ ಪಿಎಚ್‌ಡಿ ಮಾಡಬೇಕು ಎನ್ನುವ ಕನಸ್ಸನ್ನು ಕಾಣುತ್ತಿದ್ದಾರೆ. ಮಡಿಕೇರಿಯ ಎಫ್‌ಎಂಸಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ‍್ಯ ನಿರ್ವಹಿಸುತ್ತಿದ್ದಾರೆ.

Exit mobile version