Site icon Ullalavani

ಕಾರು-ರಿಕ್ಷಾ ಢಿಕ್ಕಿ:ಮಹಿಳೆಯರಿಬ್ಬರು ದುರ್ಮರಣ

UN NETWORKS

ಸಜೀಪ : ಕಾರು-ರಿಕ್ಷಾ ಪರಸ್ಪರ ಢಿಕ್ಕಿಯಾಗಿ ರಿಕ್ಷಾದಲ್ಲಿದ್ದ ಮಹಿಳೆಯರಿಬ್ಬರು ಮೃತಪಟ್ಟ ಘಟನೆ ಸೋಮವಾರ ಸಂಜೆ ಸಜೀಪ ಸಮೀಪದ ಚೇಳೂರು ಎಂಬಲ್ಲಿ ನಡೆದಿದೆ.ಮೃತಪಟ್ಟ ಸಹೋದರಿತರಿಬ್ಬರನ್ನು ಮಂಚಿ ನಿವಾಸಿ ಝೈನಬಾ(45) ಹಾಗೂ ಝೊಹರಾ (55) ಎಂದು ಗುರುತಿಸಲಾಗಿದೆ. ಅವರು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಹೋಗುವ ವೇಳೆ ಈ ಅಪಘಾತ ಸಂಭವಿಸಿದೆ.

ಝೊಹರಾರಿಗೆ ಅಸೌಖ್ಯದ ಹಿನ್ನೆಲೆಯಲ್ಲಿ ಝೈನಬಾ ಅವರು ಮಂಚಿಯಿಂದ ರಿಕ್ಷಾ ಬಾಡಿಗೆಗೆ ಗೊತ್ತು ಮಾಡಿ ವೈದ್ಯರ ಬಳಿ ತೆರಳುತ್ತಿದ್ದರು. ಸಜೀಪ ಪಡು ಗ್ರಾಮದ ಕಂಚಿಲ ಎಂಬಲ್ಲಿ ಕಾರೊಂದು ಅತೀ ವೇಗವಾಗಿ ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಿಂದ ನಿಯಂತ್ರಣ ತಪ್ಪಿ ಸಜೀಪ ಕಡೆಯಿಂದ ಬರುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದಾಗ ರಿಕ್ಷಾ ಪಲ್ಟಿಯಾಗಿದೆ. ಈ ಸಂದರ್ಭ ತೀವ್ರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಇವರನ್ನು ಮಂಗಳೂರು ಆಸ್ಪತ್ರೆಗೆ ಕೊಂಡುಹೋಗುವ ದಾರಿ ಮಧ್ಯೆ ಇವರು ಮೃತಪಟ್ಟರು ಎಂದು ತಿಳಿದುಬಂದಿದೆ.

ರಿಕ್ಷಾ ಚಾಲಕ ಆಶ್ರಫ್ ಹಾಗೂ ಕಾರು ಚಾಲಕ ಮುಹಮ್ಮದ್ ಸಿರಾಜ್ ಗಂಭೀರ ಗಾಯಗೊಂಡು ‌ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್ಸೈ ಮಂಜುನಾಥ್ ಭೇಟಿ ನೀಡಿದ್ದಾರೆ.

Exit mobile version