Site icon Ullalavani

ದೇವಭಯದಿಂದ ಜೀವನದಲ್ಲಿ ಯಶಸ್ಸು: ಜಿಫ್ರೀ ಮುತ್ತುಕೋಯ ತಂಙಳ್

UN NETWORKS

ಉಳ್ಳಾಲ : ಎಲ್ಲಾ ಸಮಯದಲ್ಲೂ ತಾನು ದೇವನ ಮುಂದೆ ಇದ್ದೇನೆ ಎನ್ನುವ ಭಯದಲ್ಲಿ ಜೀವನ ಸಾಗಿಸಿದಾಗ ಭೂಲೋಕದಲ್ಲಿನ ಜೀವನ ಯಶಸ್ವಿಯಾಗಿ ನಿಭಾಯಿಸಲು ಸಾಧ್ಯ ಎಂದು ಸಮಸ್ತ ಕೇರಳ ಜಂಇಯತುಲ್ ಉಲಮಾ ಅಧ್ಯಕ್ಷ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ಅಭಿಪ್ರಾಯಪಟ್ಟರು.

ಸೋಮೇಶ್ವರ ಉಚ್ಚಿಲ 407 ಜುಮಾ ಮಸೀದಿ ಅಸ್ಸಯ್ಯಿದ್ ಶರೀಫ್ ಅಲ್ ಅರಬಿ ವಲಿಯುಲ್ಲಾಹಿ(ಖ.ಸ) ಉರೂಸ್ ನೇರ್ಚೆ ಹಾಗೂ ಧಾರ್ಮಿಕ ಕಾರ್ಯಕ್ರಮದ ಪ್ರಯುಕ್ತ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ತನ್ನದೆಲ್ಲವನ್ನೂ ದೇವನಿಗೆ ಅರ್ಪಿಸಿ ಜೀವನ ನಡೆಸಿದ ಮಹಾತ್ಮರ ಹೆಸರಲ್ಲಿ ಎರಡು, ಮೂರು ಅಥವಾ ಐದು ವರ್ಷಗಳ ಬಳಿಕ ನಡೆಯುವ ಉರೂಸ್ ಕಾರ್ಯಕ್ರಮದಲ್ಲಿ ಸಾಮೂಹಿಕ ಪ್ರಾರ್ಥನೆಗಳು, ಅನ್ನದಾನ, ಧಾರ್ಮಿಕ ಪ್ರವಚನಗಳು ನಡೆಯಬೇಕು. ಈ ಮೂಲಕ ನಮ್ಮಲ್ಲಿ ಧಾರ್ಮಿಕ ಭಾವನೆ ಇನ್ನಷ್ಟು ಹೆಚ್ಚಾಗಿ ಅಂತರರಂಗ ಮತ್ತು ಬಹಿರಂಗ ಶುದ್ಧಿಯಾಗಬೇಕಿದೆ ಎಂದು ಹೇಳಿದರು.
ಮುಖ್ಯ ಭಾಷಣ ಮಾಡಿದ ಯಾಸೀನ್ ಜೌಹರಿ ಕೊಲ್ಲಂ, ಇಹಲೋಕ ಜೀವನ ಶಾಶ್ವತವಲ್ಲ, ರಾಜಕಾರಣಿಗಳು ಅಧಿಕಾರಕ್ಕಾಗಿ ಪ್ರತಿಸ್ಪರ್ಧಿ ಉತ್ತಮ ವ್ಯಕ್ತಿಯಾಗಿದ್ದರೂ ಆತನ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡುವುದು ಸರಿಯಲ್ಲ. ದೇವನು ಇಚ್ಛಿಸಿದವರಿಗೆ ಅಧಿಕಾರ ನೀಡುತ್ತಾನೆ, ಅದನ್ನು ತಪ್ಪಿಸಲು ಯಾರಿಂದಲೂ ಅಸಾಧ್ಯ ಎಂದರು.

ಮಸೀದಿಯ ಮುದರ್ರಿಸ್ ಅಲ್-ಹಾಜ್ ಎಂ.ಪಿ.ಇಬ್ರಾಹಿಮುಲ್ ಫೈಝಿ ಉದ್ಯಾವರ ಉದ್ಘಾಟಿಸಿದರು. ಎಸ್ಕೆಐಎಂ ವಿದ್ಯಾಭ್ಯಾಸ ಬೋರ್ಡ್ ಕಾರ್ಯದರ್ಶಿ ಎಂ.ಎ.ಖಾಸಿಂ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಕೇಂದ್ರ ಜುಮಾ ಮಸೀದಿಯ ಖತೀಬ್ ಸ್ವದಕತ್ತುಲ್ಲಾ ಫೈಝಿ, ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡು, ಉರೂಸ್ ಸಮಿತಿಯ ಅಧ್ಯಕ್ಷ ಪಿ.ಎ.ಅಬ್ಬಾಸ್ ಪೆರಿಬೈಲ್, ಕಾರ್ಯಾಧ್ಯಕ್ಷ ಅಬ್ದುಸ್ಸಲಾಂ ಯು., ಅಜ್ಜಿನಡ್ಕ ಮಸೀದಿ ಖತೀಬ್ ಬಶೀರ್ ರಹ್ಮಾನಿ, ಅಧ್ಯಕ್ಷ ಸುಲೈಮಾನ್, ಕೋಟೆಕಾರ್ ಮಸೀದಿ ಅಧ್ಯಕ್ಷ ಅಬ್ದುರ್ರಹ್ಮಾನ್, ಫೈಸಲ್ ಬಿ.ಎಸ್.ಎಂ., ಫಲಾಹ್ ಸಂಸ್ಥೆಯ ಮಾಜಿ ಅಧ್ಯಕ್ಷ ಯು.ಅಬೂಬಕ್ಕರ್, ಸುಲೈಮಾನ್, ಕೆ.ಸಿ.ರೋಡು ಮಸೀದಿಯ ಅಧ್ಯಕ್ಷ ಅಬ್ಬಾಸ್ ಕೊಳಂಗೆರೆ, ಯು.ಎನ್.ಅಬ್ದುಲ್ಲಾ ಹಾಜಿ ಮೊದಲಾದವರು ಉಪಸ್ಥಿತರಿದ್ದರು.
ಸಹ ಮುದರ್ರಿಸ್ ಜಅïಫರ್ ಸಖಾಫಿ ಸ್ವಾಗತಿಸಿದರು. ಉಚ್ಚಿಲ ಮಸೀದಿಯ ಉಪಾಧ್ಯಕ್ಷ ಸಿ.ಎ.ಅಬ್ದುಲ್ ಮಜೀದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಯು.ಎಂ.ಅಬ್ಬಾಸ್ ವಂದಿಸಿದರು. ಉರೂಸ್ ಸಮಿತಿಯ ಪ್ರ.ಕಾ.ಅಬ್ದುಲ್ ಸಲಾಂ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು.

`ನೀವು ಒಳ್ಳೆಯ ಮನುಷ್ಯರಾಗಿ, ಇಲ್ಲವೇ ಒಳ್ಳೆಯ ಜನರ ಜೊತೆ ಬೆರೆಯಿರಿ, ಇತರರನ್ನು ಪ್ರೀತಿಸಿ, ಗೌರವಿಸಿ. ಯಾವುದೇ ಸಮಯದಲ್ಲೂ ಸಂಪರ್ಕ ಬೆಳೆಸಿಕೊಳ್ಳಿ. ವಿರೋಧಿಗಳನ್ನು ಹಿಯಾಳಿಸಬೇಡಿ, ಕೆಟ್ಟ ದೃಷ್ಟಿಯಿಂದ ನೋಡಬೇಡಿ. ಪ್ರವಾದಿ ಸ್ನೇಹ ಕೇವಲ ಇನ್ನೊಬ್ಬರ ಮುಂದೆ ತೋರಿಕೆಗೆ ಸೀಮಿತವಾಗದಿರಲಿ’
ಎಂ.ಎ.ಖಾಸಿಂ ಮುಸ್ಲಿಯಾರ್, ಕಾರ್ಯದರ್ಶಿ, ಎಸ್ಕೆಐಎಂ ವಿದ್ಯಾಭ್ಯಾಸ ಬೋರ್ಡ್

Exit mobile version