Site icon Ullalavani

ಕರ್ನಾಟಕದಲ್ಲಿ ಬಿಜೆಪಿ 22 ಸ್ಥಾನಗಳು ನಿಶ್ಚಿತ

ತೊಕ್ಕೊಟ್ಟು : ಅಮೆರಿಕಾದಲ್ಲಿ ಕರ್ತವ್ಯ ನಿರ್ವಹಿಸುವವರು ಮತ ಚಲಾವಣೆಗೆ ಲಕ್ಷಾಂತರ ಖರ್ಚು ಮಾಡಿ ಭಾರತಕ್ಕೆ ಬರುತ್ತಾರೆ ಎಂದರೆ ಅದು ಮೋದಿ ಭಾರತದಿಂದ ಮಾತ್ರ ಸಾಧ್ಯ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಬಿಜೆಪಿ ಮಂಗಳೂರು ಕ್ಷೇತ್ರದ ವತಿಯಿಂದ ತೊಕ್ಕೊಟ್ಟುವಿನಿಂದ ಕೋಟೆಕಾರುವರೆಗೆ ನಡೆಸಿದ ರೋಡ್ ಷೋ ನಲ್ಲಿ ಭಾಗವಹಿಸಿ ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮೋದಿ ಮತ್ತೊಮ್ಮೆ ಪ್ರಧಾನಿಯಾದಲ್ಲಿ ಮಾತ್ರ ದೇಶಕ್ಕೆ ಭವಿಷ್ಯವಿದೆ. ಅಮೆರಿಕಾದ ಇಂಜಿನಿಯರ್ ಆಗಿರುವ ಯುವತಿ ಜಾಲತಾಣದ ಮೂಲಕ ಮೋದಿಗೆ ಮತ ಚಲಾಯಿಸಲು ದೇಶಕ್ಕೆ ಬರುವುದಾಗಿ ಹೇಳಿಕೊಂಡಿದ್ದಾಳೆ. ಇದು ಪ್ರಧಾನಿ ಮೋದಿ ಮೇಲೆ ಇಟ್ಟಿರುವ ಗೌರವ ಹಾಗೂ ಅವರ ಕಾರ್ಯವೈಖರಿ ಇಂತಹ ನಿಲುವಿಗೆ ಕಾರಣವಾಗಿದೆ. ಭಾರತೀಯರೆಂದರೆ ವಿಮಾನ ನಿಲ್ದಾಣಗಳಲ್ಲಿ ತಾತ್ಸಾರ ಭಾವನೆಗಳಿತ್ತು. ಆದರೆ ಕಳೆದ ಐದು ವರ್ಷಗಳಿಂದ ಭಾರತೀಯರಿಗೆ ವಿಶೇಷ ಗೌರವ ಸಿಗುವಂತಹ ಕೆಲಸವಾಗುತ್ತಿದೆ. ಮಹಾಘಟಬಂಧನದಲ್ಲಿ ಪ್ರಧಾನಿ ಆಗುವುದು ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗಾಗದ ಸ್ಥಿತಿ ಘಟಬಂಧನದಲ್ಲಿದೆ.

ಮಹಾಭಾರತದ ದೃತರಾಷ್ಟ್ರಲಿಂಗನದ ಸ್ಥಿತಿ ರಾಹುಲ್ ಗಾಂಧಿಯ ಮಹಾಘಟಬಂಧನದಲ್ಲಾಗಿದೆ. ದುರಾದೃಷ್ಟವೆಂದರೆ ದೇಶವನ್ನು ವರ್ಷಗಳಿಂದ ಆಳಿದ ಕಾಂಗ್ರೆಸ್ಸಿಗೆ ಉಡುಪಿಯಲ್ಲಿ ಚಿಹ್ನೆಯೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಡ್ಯದಲ್ಲಿ ನಿಖಿಲ್ ನ ನೋಟಿಗೆ ಸುಮಲತಾ ಗೆ ಓಟು ಖಚಿತ. ತುಮಕೂರಿನಲ್ಲಿಯೂ ದೇವೇಗೌಡರಿಂದಾಗಿ ನಿರ್ಮಾಣವಾದ ಭಿನ್ನಾಭಿಪ್ರಾಯದಿಂದ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ. ಕರ್ನಾಟಕದಲ್ಲಿ ಬಿಜೆಪಿ 22 ಸ್ಥಾನಗಳನ್ನು ಪಡೆಯಲಿದೆ ಅನ್ನುವ ವರದಿಯನ್ನು ಇಂಟೆಲಿಜೆನ್ಸ್ ನೀಡಿದೆ. ನೋಟು ರದ್ಧತಿಯಿಂದ ಬಡ,ಮಧ್ಯಮ, ಕೂಲಿಕಾರ್ಮಿಕರಿಗೆ ಸೇರಿದಂತೆ ನಿಷ್ಠಾವಂತರಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ ಸಮಾಜವನ್ನು ಲೂಟಿಗೈದವರಿಗೆ ತೊಂದರೆಯಾಗಿದೆ. ಸಚಿವ ಡಿಕೆಶಿಯವರಿಗೆ ಅಂದು ಚಾಲಕನಿಗೆ ನೀಡಲು ರೂ.100 ಇರಲಿಲ್ಲವಂತೆ. ಅದೇ ಆಸ್ತಿ ಘೋಷಣೆ ವೇಳೆ ದ್ವಿಗುಣವಾಗಿರುವುದು ವಿಪರ್ಯಾಸ. ಇದು ರಾಷ್ಟ್ರಭಕ್ತರ ಮತ್ತು ಅರಾಷ್ಟ್ರರ ನಡುವೆ ನಡೆಯುವ ಚುನಾವಣೆಯಾಗಿದೆ ಎಂದರು.

ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಮಾತನಾಡಿ, ಜಿಲ್ಲೆಯ ಅಭ್ಯರ್ಥಿ 3 ಲಕ್ಷ ಮತಗಳ ಅಂತರದಲ್ಲಿ ಈ ಬಾರಿ ಜಯಗಳಿಸಲಿದ್ದಾರೆ. ಜಗತ್ತೇ ಕೊಂಡಾಡುವಂತಹ ಪ್ರಧಾನಿ ದೇಶದಲ್ಲಿದ್ದಾರೆ. ಅವರು ಜಾರಿಗೆ ತಂದಿರುವ ಯೋಜನೆಗಳು ತಳಮಟ್ಟದ ಕಾರ್ಯಕರ್ತರಿಗೆ ತಲುಪಿದೆ ಎಂದರು.

ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ , ದೇಶದಲ್ಲಿ ತಾಯಿ ಮಗನಿಗೋಸ್ಕರ ನಡೆಸುವ ಪಾರ್ಟಿ ಒಂದು, ಅಪ್ಪ-ಮಕ್ಕಳು ಕುಟುಂಬಸ್ಥರಿಗೆ ನಡೆಸುವ ಪಾರ್ಟಿ ಇನ್ನೊಂದು. ಅದೇ ದೇಶದ ಅಖಂಡತೆ, ಅಭಿವೃದ್ಧಿಗಾಗಿ ತ್ಯಾಗದ ಜೀವನವನ್ನು ನಡೆಸುತ್ತಿರುವ ಪ್ರಧಾನಿ ಮೋದಿಯವ ಪಕ್ಷಕ್ಕೆ ಜನ ಬೆಂಬಲಿಸಬೇಕಿದೆ ಎಂದರು.

ಈ ಸಂದರ್ಭ ಮುಖಂಡರುಗಳಾದ ಚಂದ್ರಶೇಖರ್ ಉಚ್ಚಿಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂಪಲ, ಚಂದ್ರಹಾಸ್ ಉಳ್ಳಾಲ್, ಕ್ಷೇತ್ರ ಚುನಾವಣಾ ಉಸ್ತುವಾರಿ ರಾಧಾಕೃಷ್ಣ ಬೂಡಿಯಾರು, ನಮಿತಾ ಶ್ಯಾಂ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟುಗುತ್ತು ಉಪಸ್ಥಿತರಿದ್ದರು

Exit mobile version