ಉಳ್ಳಾಲ: ಎ.18 ರಂದು ತಪ್ಪದೇ ಮತದಾನ ಮಾಡಬನ್ನಿ ಅನ್ನುವ ಘೋಷ ವಾಕ್ಯದಡಿ ಜಿಲ್ಲಾಡಳಿತ ವತಿಯಿಂದ, ಉಳ್ಳಾಲ ನಗರಸಭೆ ನೇತೃತ್ವದಲ್ಲಿ ಉಳ್ಳಾಲದ ಸಮುದ್ರ ತೀರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಳೊಂದಿಗೆ ಮತಾದನ ಜಾಗೃತಿ ಕುರಿತ ಹಬ್ಬ ನಡೆಯಿತು.
ಕಿನ್ಯಾ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಲದ ಆಶ್ರಯದಲ್ಲಿ ಮತದಾನ ಜಾಗೃತಿಯ ಯಕ್ಷಗಾನ , ಜಯಪ್ರಸಾದ್ ಆಚಾರ್ಯ ಇವರ ನೇತೃತ್ವದ ಸ್ಪರ್ಶ ಕಲಾವಿದರಿಂದ ಮರಳು ಶಿಲ್ಪಕಲೆ, ಉಳ್ಳಾಲ ಕಡಲ ಕಿನಾರೆಯಲ್ಲಿ ಬಲೆಬೀಸಿ ಮೀನು ಹಿಡಿಯುವ ಸ್ಪರ್ಧೆ , ರೋಷನಿ ನಿಲಯ ಕಾಲೇಜಿನ ವಿದ್ಯಾರ್ಥಿಗಳಿಂದ ಸ್ವಚ್ಛತೆ ಜಾಗೃತಿಗಾಗಿ ಬೀದಿ ನಾಟಕ ಹಾಗೂ ಉಳ್ಳಾಲದಿಂದ ಮುಕ್ಕಚ್ಚೇರಿವರೆಗಿನ ಸಮುದ್ರ ತೀರದಲ್ಲಿ ಸಾರ್ವಜನಿಕರಿಂದ ಮಾನವ ಸರಪಳಿ ನಡೆಯಿತು.
ಸಹಾಯಕ ಆಯುಕ್ತ ರವಿಚಂದ್ರ ನಾಯಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ನಗರಸಭೆ ಆಯುಕ್ತ ಶ್ರೀನಿವಾಸ ಮೂರ್ತಿ, ಮೊಗವೀರ ಮುಖಂಡರುಗಳಾದ ದಯಾನಂದ, ಮನೋಜ್ ಸಾಲ್ಯಾನ್, ವಾಸುದೇವ ರಾವ್ ಉಪಸ್ಥಿತರಿದ್ದರು. ಉಳ್ಳಾಲ ಪೊಲೀಸರು, ಕರಾವಳಿ ಕಾವಲು ಪೊಲೀಸ್ ಹಾಗೂ ಕರಾವಳಿ ನಿಯಂತ್ರಣ ದಳದ ಸಿಬ್ಬಂದಿ ಬಂದೋಬಸ್ತ್ ಏರ್ಪಡಿಸಿದ್ದರು.
ಮತದಾನ ಕಡ್ಡಾಯವಾಗಬೇಕು, ಹೆಚ್ಚಿನ ಮತದಾನ ಆಗಬೇಕು ಅನ್ನುವ ಉದ್ದೇಶದಿಂದ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾಡಳಿತದ ನಿರ್ದೇಶನದಂತೆ ಆಯೋಜಿಸಲಾಗಿದೆ. ಹೆಚ್ಚಿನ ಜನ ಸೇರುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಅದರಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಜನ ಬೃಹತ್ ಮಾನವ ಸರಪಳಿಯಲ್ಲಿ ಕೈಜೋಡಿಸಿಕೊಂಡಿದ್ದಾರೆ. ಹಕ್ಕುಗಳನ್ನು ಚಲಾವಣೆ ಮಾಡಬೇಕು ಅನ್ನುವ ಉದ್ದೇಶದ ಜತೆಗೆ ಯಕ್ಷಗಾನ, ಬೀದಿ ನಾಟಕಗಳು , ಮರಳು ಕಲಾಕೃತಿಯನ್ನು ನಡೆಸಲಾಗಿದೆ. ಸ್ಥಳೀಯ ಸಂಘ, ಸಂಸ್ಥೆಗಳಿಂದ ಕಾರ್ಯಕ್ರಮ ಯಶಸ್ವಿಯಾಗಿದೆ .
ಉಳ್ಳಾಲ ನಗರಸಭೆ ಆಯುಕ್ತ ಶ್ರೀನಿವಾಸ ಮೂರ್ತಿ