UN NETWORKS
ಉಳ್ಳಾಲ : ಕರಾವಳಿ ಬಿಜೆಪಿಯನ್ನು ಎಂದಿಗೂ ಕೈಬಿಟ್ಟಿಲ್ಲ, ಮಂಗಳೂರಿನಲ್ಲಿ ಪೂರ್ಣ ಬಿಜೆಪಿ ಹವಾ ಇದೆ. ಎಲ್ಲಿ ಹೋದರೂ ಮೋದಿ ಯವರ ಗುಣಗಾನ ಕೇಳಿಬರುತ್ತಿದೆ ಎಂದು ವಿಧಾನಪರಿಷತ್ ಸದಸ್ಯೆ ಹಾಗೂ ಚಿತ್ರನಟಿ ತಾರಾ ಹೇಳಿದರು.
ಅವರು ಮಂಗಳೂರು ಕ್ಷೇತ್ರದ ಮಾಡೂರು ಸಮೀಪದ ಸೋವೂರು ತಿಂಡಿ ಕಾರ್ಖಾನೆಯ ಕಾರ್ಮಿಕರ ಜತೆಗೆ ಲೋಕಸಭಾ ಚುನಾವಣಾ ಪ್ರಚಾರಾರ್ಥವಾಗಿ ಗುರುವಾರ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲೆಯ ಸಂಸದರು ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ. ತೊಕ್ಕೊಟ್ಟು ಮತ್ತು ಪಂಪ್ ವೆಲ್ ಫ್ಲೈಓವರ್ ಅನುಷ್ಠಾನಗೊಳಿಸುವುದೇ ದೊಡ್ಡ ಸಾಧನೆಯಾಗಿತ್ತು. ಅದನ್ನು ಸಂಸದರು ಮಾಡಿ ತೋರಿಸಿದ್ದಾರೆ. ಆದರೆ ಕೆಲವು ತೊಂದರೆಗಳಿಂದ ಕಾಮಗಾರಿ ವಿಳಂಭಾವಾಗಿದೆ. ಕೈ ಎಂದರೆ ಕೈಕೊಟ್ಟು ಹೋಗುವ ಪಕ್ಷವಾಗಿದೆ. ಕಮಲ ಅಂದರೆ ಲಕ್ಷ್ಮೀ, ಲಕ್ಷ್ಮೀ ಮನೆಗೆ ಬರಬೇಕಾದರೆ ಬಿಜೆಪಿಯನ್ನು ಮತದಾರರು ಬೆಂಬಲಿಸಬೇಕಿದೆ. ಈ ಮೂಲಕ ದೇಶದ ಅಭಿವೃದ್ಧಿಯ ಹರಿಕಾರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಬೇಕಿದೆ ಎಂದ ಅವರು ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಗಳಿಸುವ ವಿಶ್ವಾಸ ಹೆಚ್ಚಿದೆ ಎಂದರು.
ಲೋಕಸಭಾ ಚುನಾವಣೆಯ ಜಿಲ್ಲಾ ಪ್ರಮುಖ್ ಸುಲೋಚನಾ ಭಟ್, ಸಹಪ್ರಮುಖ್ ಗಳಾದ ಜಿಲ್ಲಾ ಮಹಿಳಾ ಮೋರ್ಛಾ ಅಧ್ಯಕ್ಷೆ ಪೂಜಾ ಪೈ, ಮನಪಾ ಸದಸ್ಯೆ ರೂಪ, ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ತಾ.ಪಂ ಸದಸ್ಯ ರವಿಶಂಕರ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನರಾಜ್ ಕೆ.ಆರ್, ಕಾರ್ಖಾನೆ ಮಾಲೀಕ ವಿಜಯ , ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಉದಯ ಶೆಟ್ಟಿ ಸೊಳ್ಳೆಂಜೀರು, ಉಪಾಧ್ಯಕ್ಷೆ ಭಾರತಿ ರಾಘವ ಗಟ್ಟಿ, ಬಿಜೆಪಿ ಕ್ಷೇತ್ರ ಕಾರ್ಯಕಾರಿಣಿ ಸಮಿತಿ ಸದಸ್ಯ ರವಿ ಸೋವೂರು, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಹೇಮಂತ್ ಶೆಟ್ಟಿ ದೇರಳಕಟ್ಟೆ ಹಾಗೂ ಇತರರು ಉಪಸ್ಥಿತರಿದ್ದರು.
ಮತ್ತೊಮ್ಮೆ-ಮಗದೊಮ್ಮೆ ಮೋದಿ !
ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಭಾಷಣದುದ್ದಕ್ಕೂ ಬಳಸುವ ಪದ ಮತ್ತೊಮ್ಮೆ-ಮಗದೊಮ್ಮೆಯನ್ನು ಉಪಯೋಗಿಸಿದ ಚಿತ್ರನಟಿ ತಾರಾ ಮೋದಿಯವರಿಗೆ ಕಾರ್ಮಿಕರ ಮೂಲಕ ಘೋಷಣೆ ಕೂಗಿಸಿದರು. ಮತ್ತೊಮ್ಮೆ -ಮೋದಿ, ಮಗದೊಮ್ಮೆ – ಮೋದಿ, ಯಾರಿಗೋಸ್ಕರ-ಮೋದಿ ಅನ್ನುವ ಘೋಷಣೆಗೆ ಕಾರ್ಮಿಕರು ಪ್ರತಿಧ್ವನಿಸಿದ ಪ್ರಸಂಗವೂ ಜರಗಿತು