UN NETWORKS
ಕುಂಪಲ : ನಾವು ಮಾಡುವ ಪೂಜೆ , ಕೆಲಸ ಧರ್ಮದ ದಾರಿಯಲ್ಲಿರಬೇಕು. ಮನುಷ್ಯ ತನ್ನ ಇಷ್ಟಾರ್ಥ ಈಡೇರಿಸುವಂತೆ ದೇವರನ್ನು ಮೆಚ್ಚಿಸಲು ನೋಡುತ್ತಾನೆ. ಆದರೆ ನಿಜವಾದ ಭಕ್ತಿಯಲ್ಲಿ ಪ್ರತಿಫಲಾಪೇಕ್ಷೆ ಇರಲೇಬಾರದು ಎಂದು ಉಚ್ಚಿಲ ಬೋವಿ ಶಿಕ್ಷಣ ಸಂಸ್ಥೆಯ ಸಂಚಾಲಕ ದೇವದಾಸ ಉಚ್ಚಿಲ್ ಹೇಳಿದರು.
ಕುಂಪಲ ಶ್ರೀ ಬಾಲಕೃಷ್ಣ ಮಂದಿರದ 12ನೇ ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು ನಾವು ಮಾಡುವ ಎಲ್ಲ ಸೇವೆ ದೇವರು ಕೊಟ್ಟ ಸೇವೆ ಎಂದು ಪರಿಗಣಿಸಿ ಮೋಕ್ಷದ ದಾರಿ ಕಂಡುಕೊಳ್ಳಬೇಕು. ಪ್ರಾಪಂಚಿಕ ಬದುಕಿನಲ್ಲಿ ಮೋಕ್ಷದ ಗುರಿಯನ್ನು ಇಟ್ಟುಕೊಂಡು ಬದುಕಬೇಕಾದುದನ್ನು ಭಗವದ್ಗೀತೆಯಲ್ಲಿ ವಿವರಿಸಿದಂತೆ ಧರ್ಮದಲ್ಲಿ ಬದುಕಿದರೆ ಮಾತ್ರ ಮೋಕ್ಷ ಸಾಧ್ಯ ಎಂದು ನುಡಿದರು. ಮಂಗಳೂರಿನ ಖ್ಯಾತ ನ್ಯಾಯವಾದಿ ಅರುಣ್ ಬಂಗೇರ ಮಾತನಾಡಿ ಭಜನೆ ಮನುಷ್ಯನಲ್ಲಿ ಶಾಂತಿ ನೆಮ್ಮದಿ ಕರುಣಿಸುತ್ತದೆ. ನಿರಂತರ 22ವರ್ಷ ಭಜನೆ ಸಂಸ್ಕಾರ ಕೊಟ್ಟಿರುವ ಶ್ರೀ ಬಾಲಕೃಷ್ಣ ಮಂದಿರದ ಸೇವಾಕಾರ್ಯ ವೈಖರಿ ಶ್ಲಾಘನೀಯ ಎಂದರು.
ಜನರು ದೇವರು ಬಡವ ಎಂದು ಭಾವಿಸಿದ್ದರೆ ಅದು ತಪ್ಪು. ಹಿಂದು ಧರ್ಮ ಶ್ರೇಷ್ಠ ಧರ್ಮವಾವಾಗಿದ್ದು ಹಿಂದು ಧರ್ಮಕ್ಕೆ ಕಾನೂನಿನಲ್ಲೇ ವ್ಯಾಖ್ಯಾನವಿಲ್ಲ. ಅದೊಂದು ಬದುಕುವ ಧರ್ಮ. ಗಂಡು ಸರಿದಾರಿಯಲ್ಲಿ ನಡೆಯಬೇಕಾದರೆ ಹೆಂಡತಿ ಸ್ವಲ್ಪ ಹುಷಾರು ಇರಬೇಕು. ಇತ್ತೀಚೆಗೆ ಸಣ್ಣಪುಟ್ಟ ಕಾರಣಕ್ಕೆ ವಿಚ್ಛೇದನ ಹಂತ ಹೋಗುತ್ತಿದ್ದು ಹೆಣ್ಣು ತೀರ ಸಾಧುಸ್ವಭಾವ ಹೊಂದಿದರೆ ಗಂಡನ ಏಳಿಗೆ ಸಾಧ್ಯವಿಲ್ಲ ಎಂದರು. ಹೆಣ್ಣು ಪ್ರಪಂಚವನ್ನು ಬೆಳಗಿಸೋ ಮಾತೆ. ಗಂಡ ಹೆಂಡತಿ ಹೊಂದಿಕೊಂಡು ಬದುಕು ಸಾಗಿಸಬೇಕು. ಕುಟುಂಬ ಜೀವಿಗಳಾಗಿರುವ ನಾವು ತಾಳ್ಮೆಯನ್ನು ಕಳೆದುಕೊಳ್ಳಬಾರದು. ನಮ್ಮ ಚಿಂತನೆ ಯೋಚನೆಗಳು ಸಕಾರಾತ್ಮಕವಾಗಿರಬೇಕು. ಅದಕ್ಕಾಗಿ ಉತ್ತಮ ಯೋಚನೆ ಚಿಂತನೆ ತರುವ ಭಜನೆ ಮಾಡುವುದು ಬಲು ಶ್ರೇಷ್ಠ ಎಂದರು. ಅಧ್ಯಕ್ಷತೆ ವಹಿಸಿದ ಮಂಗಳೂರು ಹಾಗೂ ಕಾಸರಗೋಡು ಆರ್ಯ ಯಾನೆ ಮರಾಠ ಸಂಘದ ಅಧ್ಯಕ್ಷ ಯತೀಂದ್ರ ಎ. ಬಹುಮಾನ್ ಸಮಾಜದಲ್ಲಿ ಸೇವೆ ಸಲ್ಲಿದವರನ್ನು ಗುರುತಿಸುವುದು ಶ್ರೇಷ್ಠ ಕಾರ್ಯವಾಗಿದ್ದು ಇಂತಹ ಕಾರ್ಯಕ್ರಮ ಮುಂದುವರಿಯಲಿ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸೋಮೇಶ್ವರ ಪಶ್ಚಿಮ್ ಪುನರ್ವಸತಿ ಕೇಂದ್ರ ನಿರ್ದೇಶಕ ರೋಹಿತ್ ಸಾಂಕುಸ್ತ ಹಾಗು ಭಜನೆ ಸೇವೆಯ ಮೂಲಕ ಧರ್ಮ ಜಾಗೃತಿ ಮೂಡಿಸುತ್ತಿರುವ ಸಂಜೀವ ಕುಲಾಲ್ ಕೈರಂಗಳ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಅಶ್ವಿತ್ ಕೊಠಾರಿ, ಉದ್ಯಮಿ ಸತೀಶ್ ಕುಂದರ್ ಬ್ರಹ್ಮಾವರ , ಉದ್ಯಮಿ ಅಶ್ವಿನ್ ಕುತ್ತಾರು, ಶ್ರೀ ಬಾಲಕೃಷ್ಣ ಮಂದಿರದ ಗೌರವಾಧ್ಯಕ್ಷ ಕೇಶವದಾಸ್ ಬಗಂಬಿಲ, ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಂಪಲ, ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಕುಂಪಲ ಹಾಗೂ ಸೋಮೇಶ್ವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಶೀಲಾ ನಾಯಕ್ ಉಪಸ್ಥಿತರಿದ್ದರು. ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಸನ್ಮಾನಿತರನ್ನು ಪರಿಚಯಿಸಿದರು. ನಿವೃತ್ತ ಸೇನಾನಿ ವೆಂಕಟೇಶ್ ಕುಂಪಲ ಸ್ವಾಗತಿಸಿದರು. ಪ್ರವೀಣ್.ಎಸ್.ಕುಂಪಲ ಹಾಗೂ ಕೃಷ್ಣ ಪೊನ್ನತೋಡು ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ನೃತ್ಯ ಪ್ರದರ್ಶನ ನಡೆಯಿತು.