UN NETWORKS
ಉಳ್ಳಾಲ : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್, ಶ್ರೀಮತಿ ಟಿ.ವಿಮಲಾ ವಿ. ಪೈ ಪ್ರಾಯೋಜಿತ, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಈ ಸಾಲಿನ ಪ್ರಶಸ್ತಿಯನ್ನು ಜನಪದ ವಿದ್ವಾಂಸ , ಯಕ್ಷಗಾನ ಸಂಶೋಧಕ , ಸಾಹಿತಿ ಡಾ. ಅಮೃತ್ ಸೋಮೇಶ್ವರ್ ಅವರಿಗೆ ತಮ್ಮ ಸ್ವಗೃಹ ಸೋಮೇಶ್ವರದ `ಒಲುಮೆ’ಯಲ್ಲಿ ಶನಿವಾರ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿ, ರಾಷ್ಟ್ರಕವಿ ಗೋವಿಂದ ಪೈಯವರ ಲೇಖನದ ಸಂಪುಟವೊಂದನ್ನು ಎಂಜಿಎಂ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೆರವಣಿಗೆಯಲ್ಲಿ ಪಲ್ಲಕ್ಕಿಯಲ್ಲಿ ಇರಿಸಿ ತಂದು ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಲೋಕಾರ್ಪಣೆಗೊಳಿಸಲಾಗಿತ್ತು. ಅಂತಹ ಮಹಾನ್ ಸಾಹಿತಿಯ ಹೆಸರನ್ನು ಚಿರಸ್ಮರಣೀಯ ಮಾಡುವ ನಿಟ್ಟಿನಲ್ಲಿ ಮಾಹೆ ಶ್ಲಾಘನೀಯ ಕಾರ್ಯ ಮಾಡಿದೆ. ಹಾಗೆಯೇ ಮಂಜೇಶ್ವರದಲ್ಲಿರುವ ರಾಷ್ಟ್ರಕವಿ ಗೋವಿಂದ ಪೈ ಅವರ ಗಿಳಿವಿಂಡಿನಲ್ಲಿ ಸಾಹಿತ್ಯದ ಗಂಧಗಾಳಿ ಇಲ್ಲದವರೇ ಸದಸ್ಯರಾಗಿದ್ದಾರೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಅಮೃತ ಸೋಮೇಶ್ವರ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿಗಳನ್ನು ಅಪೇಕ್ಷಿಸಿಲ್ಲ. ಈ ಪ್ರಶಸ್ತಿ ಘನತೆ ಗಾಂಭೀರ್ಯ ಹೆಚ್ಚಿಸಿಲ್ಲ. ಹಿಂದಿನಂತೆಯೇ ವಿನಯಶೀಲನಾಗಿ ಎಲ್ಲರ ಜತೆಗೆ ಬೆರೆಯುತ್ತೇನೆ. ವರ್ಚಸ್ಸು ಮೀರಿ ಬದುಕುವ ಜಾಯಮಾನ ನನ್ನದಲ್ಲ. ಮೈಸೂರು ವಿಶ್ವವಿದ್ಯಾನಿಲಯ ಆ ಕಾಲದಲ್ಲಿ ಗೌರವ ಡಾಕ್ಟರೇಟ್ ಕೊಟ್ಟಿರುವುದನ್ನು ನಯವಾಗಿ ತಿರಸ್ಕರಿಸಿದ ಶ್ರೇಷ್ಟ ಸಾಹಿತಿ ಗೋವಿಂದ ಪೈ ಅವರ ಹೆಸರಿನಲ್ಲಿ ಸ್ವೀಕರಿಸಿದ ಪ್ರಶಸ್ತಿ ಅಭಿಮಾನ ಹೆಚ್ಚಿಸಿದೆ, ಹೆಮ್ಮೆಯ ಸಂಗತಿ ಎಂದರು.
ಅಭಿನಂದನಾ ಭಾಷಣ ಮಾಡಿದ ಯಕ್ಷಗಾನ ವಿಧ್ವಾಂಸ ಡಾ. ಪ್ರಭಾಕರ ಜೋಷಿ ಮಾತನಾಡಿ, ಕಾರಂತ, ಮಾಸ್ತಿ, ಕುವೆಂಪುರವರ ನಂತರದ ತಲೆಮಾರಿನಲ್ಲಿ ಶ್ರೇಷ್ಟ ಐದು ಸಾಹಿತಿಗಳಲ್ಲಿ ಅಗ್ರಪಂತಿಯಲ್ಲಿರುವ ಅಮೃತ ಸೋಮೇಶ್ವರ, ಪ್ರಾದೇಶಿಕವಾಗಿ ಗುರುತಿಸಿಕೊಂಡಿರುವುದು ದುರಂತ. ಸಾಹಿತ್ಯ ಲೋಕಕ್ಕೆ ಅವರು ಸಲ್ಲಿಸಿದ ಸೇವೆಗೆ ರಾಷ್ಟ್ರಮನ್ನಣೆ ದೊರಕಬೇಕಿದ್ದರೂ ಅದರ ಹಿಂದೆ ಬೆನ್ನತ್ತಿ ಹೋದವರಲ್ಲ ಅಮೃತರು. ಕನ್ನಡದ ಸಾಹಿತ್ಯ ಕೃತಿಗಳಿಗಿಂತ ಕಡಿಮೆಯಿಲ್ಲದ ಸಾಹಿತ್ಯವನ್ನು ಕನ್ನಡ ಕ್ಷೇತ್ರಕ್ಕೆ ಒದಗಿಸಿಕೊಟ್ಟ ಮಹಾನ್ ಮೇಧಾವಿ. ಅನುವಾದ ಕೃತಿಗಳಲ್ಲಿ ಆಂಗ್ಲ ಸಾಹಿತ್ಯ ಲೋಕಕ್ಕಿಂತಲೂ ಮಿಗಿಲಾಗಿರುವುದನ್ನು ಕೊಟ್ಟಿರುವ ನೆಲೆಯಲ್ಲಿ ಗೋವಿಂದ ಪೈ ಅರ್ಹವಾಗಿ ಸಂದಿದೆ ಎಂದರು.
