ದೇರಳಕಟ್ಟೆ : ದೇರಳಕಟ್ಟೆ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರೌಢಶಾಲೆಯಲ್ಲೂ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳನ್ನು ಅಲಂಕೃತ ದ್ವಾರ ರಚಿಸಿ ಎರಡು ಗೊಂಬೆಗಳ ಮೂಲಕ ಪ್ರೀತಿಯಿಂದ ಸ್ವಾಗತಿಸಲಾಯಿತು. ವಿವಿಧಶಾಲೆಗಳಿಂದ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಶಾಲಾ ಹಳೇ ವಿದ್ಯಾರ್ಥಿ ಸಂಘ ಪೆನ್ ನೀಡಿ, ಶುಭಹಾರೈಸುವ ಮೂಲಕ ಪರೀಕ್ಷಾ ಹಬ್ಬ ವಿಶಿಷ್ಟವಾಗಿ ನಡೆಯಿತು.
ಈ ವೇಳೆ ಮಾತನಾಡಿದ ದೇರಳಕಟ್ಟೆ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಚಂಚಲಾಕ್ಷಿ , ಶಿಕ್ಷಣ ಇಲಾಖೆಯ ಉಪಉನಿರ್ದೇಶಕರ ಆದೇಶದಂತೆ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಲ್ಲಿ ಭಯವನ್ನು ಹೋಗಲಾಡಿಸುವ ಉದ್ದೇಶದಿಂದ ಪ್ರೀತಿ ಪೂರ್ವಕವಾಗಿ ಭಯಭೀತಿಯಿಲ್ಲದೆ ಆತ್ಮೀಯವಾಗಿ ಸ್ವಾಗತಿಸಲಾಗಿದೆ. ಹಳೇ ವಿದ್ಯಾರ್ಥಿಗಳ ಸಂಘದ ಸಹಕಾರದಿಂದ ಪ್ರಮುಖ ದ್ವಾರವನ್ನು ಶೃಂಗರಿಸಿ ಎರಡು ಗೊಂಬೆಗಳನ್ನು ಇರಿಸಿಕೊಂಡು ಸ್ವಾಗತಿಸಲಾಗಿದೆ. ವಿವಿಧ ಶಾಲೆಗಳಿಂದ 259 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಎಲ್ಲರೂ ಉತ್ಸಾಹದಿಂದ ಪರೀಕ್ಷಾ ಕೊಠಡಿಗೆ ತೆರಳಿದ್ದಾರೆ ಹೇಳಿದರು.
ಪರೀಕ್ಷೆ ಕುರಿತು ಅಳುಕು ಇರದಂತೆ ಸರಕಾರ ಕೈಗೊಂಡಿರುವ ಪರೀಕ್ಷಾ ಹಬ್ಬಕ್ಕೆ ಹಳೇ ವಿದ್ಯಾರ್ಥಿಗಳು ಪ್ರೋತ್ಸಾಹ ನೀಡಿದ್ದೇವೆ. ಇಂತಹ ಹಬ್ಬದ ವಾತಾವರಣದಿಂದಾಗಿ ಮಕ್ಕಳು ಖುಷಿಯಾಗಿ ಪರೀಕ್ಷೆ ಬರೆದಿದ್ದಾರೆ. ಈ ಮೂಲಕ ಕಾರ್ಯಕ್ರಮವೂ ಯಶಸ್ವಿಯಾಗಿದೆ ಎಂದು ಹಳೇ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಸಂದೀಪ್ ಪೂಜಾರಿ ಹೇಳಿದರು. ಈ ಸಂದರ್ಭ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿಯಾಬುದ್ದೀನ್ .ಡಿ ಉಪಸ್ಥಿತರಿದ್ದರು.
ಪರೀಕ್ಷೆ ಬರೆಯಲು ಬರುವ ಮುನ್ನ ಸ್ವಲ್ಪ ಹೆದರಿಕೆಯಿತ್ತು. ಆದರೆ ಶಾಲೆಯ ವಾತಾವರಣ ಕಂಡು ಅದೆಲ್ಲಾ ಹೋದಂತಾಗಿದೆ. ಆದರೂ ಶಾಲೆಯಲ್ಲಿ ಅಧಿಕಾರಿಗಳು ನೀಡಿದ ಪರೀಕ್ಷಾ ಪೂರ್ವ ಮಾಹಿತಿಗಳಿಂದ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗುವ ಭರವಸೆಯಿದೆ. ದೇರಳಕಟ್ಟೆ ಶಾಲೆಯ ನೇತಾಜಿ ಸುಭಾಶ್ ಚಂದ್ರ ಬೋಸ್ ಶಾಲೆಯ ಹಳೇ ವಿದ್ಯಾರ್ಥಿಗಳು ಪೆನ್ ನೀಡಿ, ಪರೀಕ್ಷೆಗೆ ಶುಭಹಾರೈಸುವವ ಮೂಲಕ ಇನ್ನಷ್ಟು ಭರವಸೆಯನ್ನು ಹೆಚ್ಚಿಸಿದ್ದಾರೆ . ಇಬ್ರಾಹಿಂ ಖಲೀಲ್ ಪರೀಕ್ಷೆ ವಿದ್ಯಾರ್ಥಿ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ದೇರಳಕಟ್ಟೆ