UN NETWORKS
ಮುಡಿಪು : ಕುರ್ನಾಡು ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಅಷ್ಪಾಕ್ ಅಹ್ಮದ್ ಎ. ಮ್ಯಾಗೇರಿ ಅವರಿಗೆ ಕಾಲೇಜು ಅಭಿವೃದ್ಧಿ ಸಮಿತಿ, ಉಪನ್ಯಾಸಕ ವರ್ಗ, ಬೋಧಕೇತರ ವೃಂದ ಮತ್ತು ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭ ಬುಧವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎ.ಎಂ. ಖಾನ್ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ವಿಭಾಗದಲ್ಲಿ ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿ ವೃತ್ತಿಯಿಂದ ನಿವೃತ್ತರಾಗುತ್ತಿರುವ ಸನ್ಮಾನಿತರ ವ್ಯಕ್ತಿತ್ವ, ಆದರ್ಶಗಳು ಇಂದಿನ ವಿದ್ಯಾರ್ಥಿಗಳಿಗೆ ಆದರ್ಶಪ್ರಾಯವಾದುದು ಎಂದರು.
ಗ್ರಾಮೀಣ ಪ್ರದೇಶದಲ್ಲಿರುವ ಆ ಸರಕಾರಿ ಪದವಿಪೂರ್ವ ಕಾಲೇಜನ್ನು ತಮ್ಮ ದೂರದೃಷ್ಟಿ, ಸಂಘಟನಾತ್ಮಕ ಶಕ್ತಿ, ಬದ್ಧತೆ, ಪರಿಶ್ರಮದ ಮೂಲಕ ಮಾದರಿ ಶಿಕ್ಷಣ ಸಂಸ್ಥೆಯಾಗಿ ರೂಪಿಸಿದ ಅವರ ಈ ಪರಿಶ್ರಮ ಶ್ಲಾಘನೀಯ ಎಂದರು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಮೂಲ್ಯ ಸಮಯವನ್ನು ಕಳೆಯುತ್ತಿರುವ ಇಂದಿನ ವಿದ್ಯಾರ್ಥಿಗಳು ಬದಲಿಗೆ ಮಾನವೀಯ ಸಂಬಂಧಗಳನ್ನು, ಉನ್ನತ ಮೌಲ್ಯಗಳನ್ನು, ಗುರು ಹಿರಿಯರನ್ನು ಗೌರವಿಸುವ ಮನೋಭಾವನೆಯನ್ನು ರೂಡಿಸಿಕೊಳ್ಳಬೇಕು. ವೃತ್ತಿ ರಂಗಕ್ಕೆ ಬೇಕಾದ ಅಗತ್ಯ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಲ್ಲರಮಜಲು ಶಂಕರಭಟ್ ಒಂದು ಪೆನ್ನು, ಒಬ್ಬ ಶಿಕ್ಷಕ, ಒಂದು ಪುಸ್ತಕ ಜಗತ್ತನ್ನೇ ಬದಲಿಸಬಹುದು. ಮೌಲ್ಯಗಳು ಪತನಗೊಳ್ಳುತ್ತಿರುವ ಇಂದಿನ ಸನ್ನಿವೇಶದಲ್ಲಿ ಅಷ್ಪಾಕ್ ಅಹ್ಮದ್ ಎ ಮ್ಯಾಗೇರಿ ಇವರ ಮೌಲ್ಯಗಳು ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕು ಎಂದು ಅಭಿಪ್ರಾಯಪಟ್ಟರು. ಸರಕಾರಿ ಪದವಿ ಪೂರ್ವ ಕಾಲೇಜು ಬೆಂಜನಪದವಿನ ಆಂಗ್ಲಭಾಷಾ ಉಪನ್ಯಾಸಕ ಶ್ರೀಧರ ಅಡಿಗ ಅಭಿನಂದನಾ ಭಾಷಣ ಮಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅಷ್ಪಾಕ್ ಅಹ್ಮದ್ ಎ ಮ್ಯಾಗೇರಿ ಅವರು, ಕಲಿಕೆಗೆ ವಯಸ್ಸಿನ ಹಂಗಿಲ್ಲ. ತಾವು ಹಿರಿಯರಿಂದಷ್ಟೇ ಅಲ್ಲ ಕಿರಿಯರಿಂದಲೂ ಹಲವು ವಿಚಾರಗಳನ್ನು ಕಲಿತಿರುವುದಾಗಿ ಹೇಳಿದರು. ತಮ್ಮ ಸೇವಾ ಅವಧಿಯಲ್ಲಿ ಬೆಂಬಲ ನೀಡಿದ ಕಾಲೇಜು ಅಭಿವೃದ್ದಿ ಸಮಿತಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವೃಂದ, ವಿದ್ಯಾರ್ಥಿಗಳಿಗೂ ಊರ ಗಣ್ಯರಿಗೂ ಕೃತಜ್ಞತೆ ಸಲ್ಲಿಸಿದರು. ಶಾಹಿನ್, ದಕ್ಷಿಣ ಕನ್ನಡ ಜಿಲ್ಲಾ ಪ್ರಾಂಶುಪಾಲರ ಸಂಘದ ಕೋಶಾಧಿಕಾರಿ ವಿಠ್ಠಲ್, ಶಾಲಾ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಉಮ್ಮರ್ ಪಜೀರು, ಲಯನ್ಸ್ ರಾಜ್ಯಪಾಲ ದೇವದಾಸ ಭಂಡಾರಿ, ಶೀನಶೆಟ್ಟಿ, ಪ್ರಶಾಂತ್ ಕಾಜವ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಗಿರಿಧರ ರಾವ್, ಉಪ ಪ್ರಾಂಶುಪಾಲ ಪ್ರೇಮಪ್ರಭ, ನಿವೃತ್ತ ಉಪ ಪ್ರಾಂಶುಪಾಲ ಬಸವರಾಜ ಪಲ್ಲಕ್ಕಿ, ಮಮತಾ ಡಿ.ಎಸ್. ಗಟ್ಟಿ, ಚಂದ್ರಹಾಸ ಕರ್ಕೇರ, ಸಂತೋಷ್ ಕುಮಾರ್ ರೈ ಬೋಳಿಯಾರು, ಅಬ್ದುಲ್ ಜಲೀಲ್, ಮೂಸ ಕುಂಞ, ಅಂದು ಕುಂಞ, ನಾಸೀರ್ ಹಾಗೂ ಇಬ್ರಾಹಿಂ ನಡುಪದವು ಉಪಸ್ಥಿತರಿದ್ದರು.