Site icon Ullalavani

ಮೊಂಟೆಪದವು : ಎಸ್‍ಎಸ್‍ಎಲ್‍ಸಿ ಪರೀಕ್ಷಾ ಭಯ ತಡೆಗಟ್ಟಲು “ಪರೀಕ್ಷಾ ಹಬ್ಬ’

UN NETWORKS

ಮೊಂಟೆಪದವು : ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಎದುರಿಸುವ ಪರೀಕ್ಷಾರ್ಥಿಗಳ ದುಗುಡ, ಆತಂಕ, ಆವರಿಸುವ ಭಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಕೆಲವು ಪ್ರೌಢಶಾಲೆಗಳಲ್ಲಿ ಹೊಸ ಕಾರ್ಯಕ್ರಮವೊಂದನ್ನು ಅಳವಡಿಸಿಕೊಂಡಿದ್ದು ಅದರಂತೆ ಗುರುವಾರ ಬೆಳಗ್ಗೆ 2019ರ ಎರ್ಸ ಎರ್ಸ ಎಲ್‍ಸಿ ಪರೀಕ್ಷೆಗೆ ಹಾಜರಾಗುತ್ತಿದ್ದ ಮುನ್ನೂರು ಪರೀಕ್ಷಾರ್ಥಿಗಳನ್ನು ಪರೀಕ್ಷೆ ನಡೆಯುವ ಶಾಲೆಗಳಿಗೆ ಸ್ವಾಗತಿಸುವ ವಿನೂತನ ಕಾರ್ಯಕ್ರಮ “ಪರೀಕ್ಷಾ ಹಬ್ಬ” ಮಂಗಳೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ವ್ಯಾಪ್ತಿಯ ನರಿಂಗಾನ ಗ್ರಾಮದ ಮೊಂಟೆಪದವು ಸರಕಾರಿ ಪ್ರೌಢಶಾಲೆ ಹಾಗೂ ದೇರಳಕಟ್ಟೆಯ ನೇತಾಜಿ ಸುಭಾಸ್ ಚಂದ್ರ ಭೋಸ್ ಪ್ರೌಢಶಾಲೆಯಲ್ಲಿ ನಡೆಯಿತು.

ಮೊದಲ ದಿನದ ಕನ್ನಡ ಪರೀಕ್ಷೆ ಆಗಿರುವುದರಿಂದ ಪರೀಕ್ಷಾರ್ಥಿಗಳು ಬೆಳಗ್ಗೆ 8.15ಕ್ಕೆ ಮೊಂಟೆಪದವು ಪ್ರೌಢಶಾಲೆ ದ್ವಾರದ ಬಳಿ ಜಮಾಯಿಸಿದ್ದರು. ಮೊಂಟೆಪದವು ಸರಕಾರಿ ಪ್ರೌಢಶಾಲಾ ಆವರಣದ ದ್ವಾರದ ಸಮೀಪ ಮಾವಿನ ಎಲೆಯ ತಳಿರು ತೋರಣ, ಬಲೂನ್ ಹಾಗೂ ಬಣ್ಣದ ಕಾಗದಗಳನ್ನು ಹಗ್ಗಕ್ಕೆ ಕಟ್ಟಿ ಅಲಂಕರಿಸಲಾಗಿತ್ತು. ಪರೀಕ್ಷಾರ್ಥಿಗಳು ಹಾಗೂ ಪರೀಕ್ಷಾ ಹಬ್ಬಕ್ಕೆ ಸ್ವಾಗತ ಎಂಬ ಸಣ್ಣ ಫ್ಲೆಕ್ಸ್ ಅಳವಡಿಸಲಾಗಿತ್ತು. ಉಪ ಪ್ರಾಂಶುಪಾಲ ಸಂತೋಷ್ ಕುಮಾರ್ ಟಿ.ಎನ್, ಸಹ ಶಿಕ್ಷಕ, ಶಿಕ್ಷಕರು, ಪ್ರೌಢ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಸದಸ್ಯರು, ಕಾಲೇಜು ಪ್ರಿನ್ಸಿಪಾಲ್, ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸರ್ವ ಸದಸ್ಯರು, ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಮಠ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಪ್ರಧಾನ ಅರ್ಚಕರು, ಬೋಳ ಸಂತ ಲಾರೆನ್ಸ್ ಚರ್ಚ್ ಧರ್ಮಗುರು ಹಾಗೂ ಮರಿಕ್ಕಳ ಜುಮಾ ಮಸೀದಿಯ ಧರ್ಮಗುರು ಪರೀಕ್ಷಾರ್ಥಿಗಳನ್ನು ಕಳುಹಿಸುವುದಕ್ಕೂ ಮುನ್ನ ಹಿತವಚನ ಹಾಗೂ ಶುಭಾಶೀರ್ವಾದದ ನುಡಿಗಳನ್ನಾಡಿದರು. ವಿದ್ಯಾರ್ಥಿಗಳ ತಂಡ ಪರೀಕ್ಷೆ ಬರೆಯಲು ಬಂದ ಪ್ರತಿ ವಿದ್ಯಾರ್ಥಿಗಳಿಗೆ ಕೆಂಪು ಗುಲಾಬಿ ಕೊಟ್ಟು ಸ್ವಾಗತಿಸಿ, ಉತ್ತಮ ಅಂಕ ಗಳಿಸುವಂತೆ ಆಶಿಸಿದರು. ಪರೀಕ್ಷೆ ಸಮಯ ಸಮೀಪಿಸುತ್ತಿದ್ದಂತೆಯೇ ಆತಂಕ ಹೆಚ್ಚಾಗುತ್ತಿದೆಯೇ ಎಂಬ ಪ್ರಶ್ನೆಗೆ ಯಾವ ವಿದ್ಯಾರ್ಥಿಯೂ ನಕಾರಾತ್ಮಕವಾಗಿ ಚಿಂತಿಸದೆ ಇದುವರೆಗೆ ಕೇಳದ ಕಾಣದ ಹೊಸ ಅನುಭವ ನಮದಾಗಿದೆ ಎಂದು ತಿಳಿಸಿದ್ದಾರೆ.

*ಮೊಂಟೆಪದವು ಸರಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಬ್ದುಲ್ ಜಲೀಲ್ ಮೋಂಟುಗೋಳಿ ಉಪಹಾರ ವ್ಯವಸ್ಥೆ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹನೀಫ್ ಚಂದಹಿತ್ಲು ಮುನ್ನೂರು ಮಕ್ಕಳಿಗೆ ಪರೀಕ್ಷೆ ಬರೆಯಲು ಲೇಖನಿ ಕೊಡುಗೆಯಾಗಿ ನೀಡಿದರು.
*ಸರಕಾರಿ ಪ್ರೌಢಶಾಲೆ ಮೊಂಟೆಪದವು, ಅಲ್ ಮದೀನಾ ಕನ್ನಡ ಮತ್ತು ಆಂಗ್ಲಮಾದ್ಯಮ ಪ್ರೌಢಶಾಲೆ ಮಂಜನಾಡಿ ನರಿಂಗಾನ, ಸರಕಾರಿ ಪ್ರೌಢಶಾಲೆ ಕಲ್ಲರಕೋಡಿ ಹಾಗೂ ಕೈರಂಗಳ ಪುಣ್ಯಕೋಟಿ ನಗರದ ಶಾರದಾಗಣಪತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಮುನ್ನೂರು ಪರೀಕ್ಷಾರ್ಥಿಗಳನ್ನು ಬ್ಯಾಂಡ್ ಬಾರಿಸುವ ಮೂಲಕ ಸ್ವಾಗತಿಸಲಾಯಿತು.
*ಸಮರ್ಪಕ ವ್ಯವಸ್ಥೆಗೆ ಮೊಂಟೆಪದವು ಪ್ರೌಢಶಾಲೆಯ ಒಂಬತ್ತನೆಯ ತರಗತಿಯ ವಿದ್ಯಾರ್ಥಿಗಳು ಸಣ್ಣಪುಟ್ಟ ಕಾರ್ಯ ಮಾಡುತ್ತಿದ್ದಾರೆ.
*ಸ್ಥಳೀಯ ಮಠ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಪ್ರಧಾನ ಅರ್ಚಕ ಶಂಕರ ಭಟ್ ಮಠ, ಬೋಳ ಸಂತ ಲಾರೆನ್ಸ್ ಚರ್ಚ್ ಧರ್ಮಗುರು ಮೈಕೆಲ್ ಡಿಸೋಜ, ಮರಿಕ್ಕಳ ಜುಮಾ ಮಸೀದಿ ಧರ್ಮಗುರು ಸಿದ್ದಿಕ್ ಸಅದಿ, ಪರೀಕ್ಷಾರ್ಥಿಗಳಿಗೆ ಹಿತವಚನ ಹಾಗೂ ಶುಭಾಶೀರ್ವಾದದ ಮಾತುಗಳನ್ನಾಡಿದರು.
ಪ್ರೌಢಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮುರಳೀಧರ ಶೆಟ್ಟಿ ಮೋರ್ಲ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್ ಮೊಂಟುಗೋಳಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹನೀಫ್ ಚಂದಹಿತ್ಲು, ಕಾಲೇಜು ಪ್ರಿನ್ಸಿಪಾಲ್ ವನಿತಾ ದೇವಾಡಿಗ, ನರಿಂಗಾನ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಅಬ್ದುಲ್ಲ ಕೆ. ಕೊಡಂಚಿಲ್, ಜೋಸೆಫ್ ಕುಟ್ಟಿನ್ಹ, ಸದಸ್ಯರುಗಳಾದ ಅಬ್ದುಲ್ ರಹಿಮಾನ್ ಚಂದಹಿತ್ಲು, ಉಮ್ಮರ್, ಎಡಂಬಲೆ ಗೋಪಾಲ ಭಟ್, ಸಹ ಶಿಕ್ಷಕ ರಾಜಪ್ಪ ಹಾಗೂ ಲಕ್ಷ್ಮಣ್ ಪಿ.ಎಸ್. ಉಪಸ್ಥಿತರಿದ್ದರು.

ಪರೀಕ್ಷೆ ಸಮಯದಲ್ಲಿ ಪರೀಕ್ಷಾರ್ಥಿಗಳ ಮನಸ್ಸಿನಲ್ಲಿಒಂಥರಾ ಹೊಟ್ಟೆಯಲ್ಲಿಇಲಿ ಓಡಾಡಿದಂತಹ ಅನುಭವ, ಮೈ ಬಿಸಿ ಆಗುವುದು, ಕೈ ನೋಯುವುದು, ನಡುಗುವುದು, ತಣ್ಣಗಾಗುವುದು ಎಲ್ಲವೂ ಪರೀಕ್ಷೆಯನ್ನು ಎದುರಿಸುವ ಸಂದರ್ಭದಲ್ಲಿ ಭಯದ ಲಕ್ಷಣಗಳು. ಅಂತಹ ಭಯ, ಆತಂಕ ದೂರಮಾಡಿ ನಿರಾತಂಕವಾಗಿ ಉಲ್ಲಾಸದಿಂದ ಪರೀಕ್ಷೆ ಬರೆಯುವಂತಾಗಬೇಕು ಎಂಬ ನೆಲೆಯಲ್ಲಿ ನೂತನ ಕಾರ್ಯಕ್ರಮ “ಪರೀಕ್ಷಾ ಹಬ್ಬ’ ಪರೀಕ್ಷಾರ್ಥಿಗಳಿಗೆ ಸಹಾಯವಾಗಲಿದೆ. ಶಿಕ್ಷಣ ಇಲಾಖೆ, ಎಸ್‍ಡಿಎಂಸಿ, ಶಿಕ್ಷಕರು ಎಲ್ಲರ ಸಹಕಾರ ಪಡೆದು ಕಿರು ಪ್ರಯತ್ನ ಮಾಡಿದ್ದೇವೆ. ಉದ್ಯಮಿ ಚಂದುಹಿತ್ಲು ಹನೀಫ್ ಅವರು ಮುನ್ನೂರು ಮಕ್ಕಳಿಗೆ ಮುನ್ನೂರು ಪೆನ್ ಕೊಡುಗೆಯ ರೂಪದಲ್ಲಿ ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಬ್ದುಲ್ ಜಲೀಲ್ ಮೋಂಟುಗೋಳಿ ಉಪಹಾರ ವ್ಯವಸ್ಥೆ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿಸ್ಫೂರ್ತಿಯನ್ನು ತುಂಬುವ ಕಾರ್ಯ ಮಾಡಿದ್ದಾರೆ. ಹಾಗೆಯೇ ಮೂರು ಧರ್ಮದ ಧರ್ಮಗುರುಗಳನ್ನು ಬರಮಾಡಿಸಿ ಅವರಿಂದ ಹಿತವಚನದ ಮಾತುಗಳನ್ನು ವಿದ್ಯಾರ್ಥಿಗಳಿಗೆ ಆಲಿಸಿದ್ದಾರೆ. ವಿದ್ಯಾರ್ಥಿಗಳು ಸಖತ್ ಖುಷಿಯಲ್ಲಿದ್ದಾರೆ.
ಸಂತೋಷ್ ಕುಮಾರ್ ಟಿ.ಎನ್.,
ಉಪ ಪ್ರಾಂಶುಪಾಲರು

*ಹೊಸ ಅನುಭವ, ಪರೀಕ್ಷೆ ಅಂದ್ರೆ ಭಯ ಸಹಜ. ಇಲ್ಲಿಗೆ ಬಂದಾಗ ಪ್ರತಿಯೊಬ್ಬರನ್ನು ಸ್ವಾಗತಿಸಿದ್ದು ತುಂಬ ಖುಷಿ ಆಗಿದೆ.
ಶ್ರವಣ್ ಕೈರಂಗಳ
ಪರೀಕ್ಷಾರ್ಥಿ
ಶಾರದಾಗಣಪತಿ ವಿದ್ಯಾಕೇಂದ್ರ ಪುಣ್ಯಕೋಟಿನಗರ ಕೈರಂಗಳ

Exit mobile version