Site icon Ullalavani

ಕಣಚೂರು: ಉಚಿತ ಆರೋಗ್ಯ ತಪಾಸಣೆ ಶಿಬಿರ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ದೇರಳಕಟ್ಟೆ: ದೇವರು ಮನುಷ್ಯನಿಗೆ ಬಿಡುವು ಹಾಗೂ ಉತ್ತಮ ಆರೋಗ್ಯ ಕೊಟ್ಟಿದ್ದರೆ ಅದು ದೊಡ್ಡ ಸಂಪತ್ತು. ಆದರೆ ಮನುಷ್ಯ ಮಾತ್ರ ಅಂತಹ ಅವಕಾಶವನ್ನು ಉತ್ತಮ ಕಾರ್ಯಗಳಿಗೆ ವಿನಿಯೋಗಿಸಲು ವಿಫಲನಾಗುತ್ತಿದ್ದಾನೆ ಎಂದು ಮಂಜೇಶ್ವರ ಮಲ್ಹಾರ್ ಕ್ಯಾಂಪಸ್‍ನ ಕಾರ್ಯದರ್ಶಿ ಅಹ್ಮದ್ ಜಲಾಲುದ್ದಿನ್ ಅಲ್‍ಬುಖಾರಿ ಅಭಿಪ್ರಾಯಪಟ್ಟರು.

ಅವರು ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನೆ ಕೇಂದ್ರದ ನೇತೃತ್ವದಲ್ಲಿ ಮಂಜೇಶ್ವರ ಮಲ್ಹಾರ್ ಕ್ಯಾಂಪಸ್‍ನ ಆಶ್ರಯದಲ್ಲಿ ಮಂಜೇಶ್ವರದಲ್ಲಿ ಭಾನುವಾರ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ಎಲ್ಲದರಲ್ಲೂ ಸದೃಢನಾಗಬೇಕಾದರೆ ದೈಹಿಕವಾಗಿ, ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿಯೂ ಗಟ್ಟಿಯಾಗಿರಬೇಕು. ಹಾಗೆಯೇ ಬದುಕಿನಲ್ಲಿ ಉದ್ದೇಶಿತ ಗುರಿಯನ್ನು ಸಾಧಿಸಬೇಕಾದರೆ ಮಿಕ್ಕೆಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರುವುದು ಉತ್ತಮ ಆರೋಗ್ಯ. ಅಂತಹ ಆರೋಗ್ಯವನ್ನು ಕಾಪಾಡುವ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದನ್ನು ಜನತೆ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಣಚೂರು ಆಸ್ಪತ್ರೆ ಹಾಗೂ ಸಂಶೋಧನೆ ಕೇಂದ್ರದ ಹಣಕಾಸು ಹಾಗೂ ಆಡಳಿತ ನಿರ್ದೇಶಕ ಅಬ್ದುಲ್ ರಹಿಮಾನ್ ಅವರು ಕಣಚೂರು ಆಸ್ಪತ್ರೆ ಹಾಗೂ ಸೇವೆಯ ಕುರಿತಾಗಿ ಮಾಹಿತಿ ನೀಡಿದರು.

ಮಂಜೇಶ್ವರ ಆರೋಗ್ಯ ಅಧಿಕಾರಿ ಡಾ. ಮೋಹನ್ ಅವರು ಕಣಚೂರು ಆಸ್ಪತ್ರೆಗೆ ತಮ್ಮ ಮಿತಿಯಲ್ಲಿ ಎಲ್ಲ ಬಗೆಯಲ್ಲಿ ಸಹಕರಿಸುವುದಾಗಿ ಭರವಸೆ ನೀಡಿದರು.
ಆಸ್ಪತ್ರೆಯ ಡೀನ್ ಡಾ. ಖಾಜಾ ನಾಸಿರುದ್ದಿನ್ ಶಿಬಿರದ ಅಧ್ಯಕ್ಷತೆ ವಹಿಸಿದ್ದರು.

ಸರ್ಜರಿ ವಿಭಾಗದ ಡಾ. ಗೋಪಾಲ್ ಆಚಾರ್, ಖತರ್ ಬಾವಾ ಕೆದುಂಬಾಡಿ, ಕಣಚೂರು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದೇವಿಪ್ರಸಾದ್, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಹರ್ಷಾದ್ ವರ್ಕಾಡಿ, ಮಂಜೇಶ್ವರ ಪಂಚಾಯಿತಿಯ ಸದಸ್ಯ ಕಜೆ ಅಬ್ದಲ್ಲ ಉಪಸ್ಥಿತರಿದ್ದರು.

ಶಿಬಿರದಲ್ಲಿ ಸರ್ಜರಿ, ಜನರಲ್ ಮೆಡಿಸಿನ್, ಓರ್ಥೊಪೆಡಿಕ್ಸ್, ಪೀಡಿಯಾಟ್ರಿಕ್ಸ್, ದಂತ, ನೇತ್ರ, ಮಾನಸಿಕ, ಚರ್ಮರೋಗ ಸೇರಿದಂತೆ ವಿವಿಧ ವಿಭಾಗ ತಜ್ಞರು ತಪಾಸಣೆ ನಡೆಸಿದರು. ಶಿಬಿರದಲ್ಲಿ 470 ಜನರು ಪ್ರಯೋಜನ ಪಡೆದುಕೊಂಡರು.

ಹಸನ್ ಸೈದಿ ಪ್ರಾರ್ಥಿಸಿದಿರು. ಅನುಸ್ ಸಿದ್ದಿಕ್ ಸ್ವಾಗತಿಸಿದರು. ಝುಬೈರ್ ಸಖಾಫಿ ಅಲ್ ಕಾಮಿಲ್ ವಂದಿಸಿದರು. ಪ್ಯಾಟ್ರಿಕ್ ಕಾರ್ಯಕ್ರಮ ನಿರೂಪಿಸಿದರು.

Exit mobile version