UN NETWORKS
ಕೊಣಾಜೆ : ಮಂಗಳೂರು ವಿವಿ ಸಂಯೋಜಿತ 10ಕಾಲೇಜುಗಳಲ್ಲಿಈ ಸಾಲಿನಲ್ಲಿ 14ಕಾಲೇಜಿನಿಂದ ಮರು ಸಂಯೋಜನೆಗೆ ಅರ್ಜಿ ಬಂದಿಲ್ಲವಾದರೂ 13ನೂತನ ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ. ಆ ಮೂಲಕ ಸರಕಾರಿ 37, ಖಾಸಗಿ 138, ಶಾಶ್ವತ 11, ಅಟೋನೋಮಸ್ 5, ಸಂಯೋಜಿತ 5 ಹಾಗೂ 13ನೂತನ ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಆಡಳಿತ ಸೌಧದ ಹೊಸ ಸೆನೆಟ್ ಸಭಾಂಗಣದಲ್ಲಿಮಂಗಳವಾರ ನಡೆದ ವಿವಿಯ ಶೈಕ್ಷಣಿಕ ಮಂಡಳಿಯ 2018-19ನೇ ಸಾಲಿನ ನಾಲ್ಕನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಭಾರ ಕುಲಪತಿ ಡಾ. ಕಿಶೋರಿ ನಾಯಕ್ ಹೇಳಿದರು.
ಮಂಗಳೂರು ವಿವಿಯಲ್ಲಿ ಘಟಿಕೋತ್ಸವ ಕುರಿತಾಗಿ ರಾಜ್ಯಪಾಲರಿಗೆ ಪತ್ರ ಬರೆದಿದ್ದೇವೆ. ಯುಜಿಸಿ ಎರಡು ಬಾರಿ ಘಟಿಕೋತ್ಸವಕ್ಕೆ ಅವಕಾಶ ಕೊಟ್ಟಿದ್ದು ಇನ್ನೂ ಚರ್ಚೆಯಲ್ಲಿದೆ. ಯಾಕೆಂದರೆ ವಿದೇಶಕ್ಕೆ ಹೋಗುವ ಪದವೀಧರರಿಗೆ ಪ್ರೊವಿಸನ್ ಸರ್ಟಿಫಿಕೇಟ್ ಉಪಯೋಗಕ್ಕೆ ಬರುವುದಿಲ್ಲ, ಒರಿಜಿನಲ್‍ಗೆ ಮಾತ್ರ ಅಲ್ಲಿ ಅವಕಾಶ ಕೊಡುತ್ತಾರೆ. ಎರಡು ಬಾರಿ ಘಟಿಕೋತ್ಸವ ನಡೆಸುವ ಈ ಪ್ರಸ್ತಾಪ ಚರ್ಚೆ ನಡೆಯುತ್ತಿದ್ದು ವಿದ್ಯಾರ್ಥಿಗಳಿಗೆ ತುಂಬ ಉಪಕಾರವಾಗಲಿದೆ ಎಂದು ನುಡಿದರು.
*ಮಂಗಳೂರು ವಿಶ್ವವಿದ್ಯಾಲಯದ ಸಂಯೋಜಿತ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಕ್ರೀಡಾ ಶುಲ್ಕ ಪರಿಷ್ಕರಣೆಗೆ ಅನುಮೋದನೆ ನೀಡಲಾಯಿತು. ಅದರಂತೆ ಇದುವರೆಗೆ ವಿವಿಗೆ 260ರೂ. ಕ್ರೀಡಾ ಶುಲ್ಕ ಪಾವತಿಸುವ ನಿಯಮದ ಜೊತೆಗೆ ವಿವಿ ಸಂಯೋಜಿತ 37ಸರಕಾರಿ ಶಾಲೆಗಳಿಗೆ ಕೇವಲ 70ರೂ. ಕ್ರೀಡಾ ಶುಲ್ಕವಾಗಿ ದೊರಕುತ್ತಿತ್ತು. ಇಷ್ಟು ಕಡಿಮೆ ಮೊತ್ತದಲ್ಲಿ ಸರಕಾರಿ ಕಾಲೇಜು ಅಂತರ್ ಕಾಲೇಜು ಸಂಬಂಧಿಸಿದಂತೆ 48ಕ್ರೀಡಾಕೂಟ, ಸಾರಿಗೆ ಮೊತ್ತ, ಖರ್ಚು ವೆಚ್ಚ, ಕಾಲೇಜಿನ ಒಳಗೆ ಕ್ರೀಡಾಕೂಟ, ವಾರ್ಷಿಕ ಕ್ರೀಡಾಕೂಟ, ಸ್ಪರ್ಧೆಯಲ್ಲಿ ವಿಜೇತರಿಗೆ ಟ್ರೋಫಿ, ಸರ್ಟಿಫಿಕೇಟ್ ಕೊಡಲು ಮೊತ್ತ ಭರಿಸುವುದು ಕಷ್ಟಸಾಧ್ಯವಾಗಿತ್ತು. ಪರಿಷ್ಕರಣೆಯಿಂದ ಪ್ರತಿ ವಿದ್ಯಾರ್ಥಿಯಿಂದ ವಿವಿ ಸಂಯೋಜಿತ ಸರಕಾರಿ ಕಾಲೇಜು ಕ್ರೀಡಾ ಶುಲ್ಕವಾಗಿ 260ರೂ. ತೆಗೆದುಕೊಳ್ಳಲು ತೀರ್ಮಾನಿಸಲಾಯಿತು. ಅದಕ್ಕಾಗಿ ಶುಲ್ಕ 520ರೂ. ಆಶುಲಕ್ಕ ನಿಗದಿ ಪಡಿಸಲಾಗಿದ್ದು 260ರೂ. ವಿವಿಗೆ ಹಾಗೂ 260ರೂ. ಕಾಲೇಜಿಗೆ ಸಂದಾಯವಾಗಲಿದೆ.
ಆಯ್ಕೆ ಆಧಾರಿತ ಶ್ರೇಯಾಂಕ ಪದ್ಧತಿಯ ಪದವಿ ಮಟ್ಟದ ರಾಜ್ಯಶಸ್ತ್ರ, ಹೋಂ ಸಾಯನ್ಸ್, ಬಿಕಾಂ ಟ್ಯಾಕ್ಸ್ ಪ್ರೊಸಿಜರ್ ಆ್ಯಂಡ್ ಪ್ರಾಕ್ಟೀಸ್, ಸೂಕ್ಷ್ಮಾಣು ಜೀವಾಣು ಪಠ್ಯಕ್ರಮ ಹಾಗೂ ಪದವಿ ಮಟ್ಟದ ಕಾರ್ಯಕ್ರಮಗಳಿಗೆ ಆಯ್ಕೆ ಆಧಾರಿತ ಶ್ರೇಯಾಂಕ ಪದ್ಧತಿಯಲ್ಲಿ ರಚಿಸಲಾದ ಕೋರ್ಸುಗಳ ಪರೀಕ್ಷಿತ ಕಾರ್ಯ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.
*ನಿಟ್ಟೆ ಇನ್‍ಸ್ಟಿಟ್ಯೂಟ್ ಆಫ್ ಟೂರಿಸಂ ಆ್ಯಂಡ್ ಹಾಸ್ಪಿಟಾಲಿಟಿ ಸ್ಟಡೀಸ್, ಮಂಗಳೂರು ಕುಡುಪುವಿನ ತೇಜಸ್ವಿನಿ ಕಾಲೇಜ್ ಆಫ್ ಯೋಗಿಕ್ ಸೈನ್ಸಸ್, ಪುತ್ತೂರಿನ ಬಪ್ಪಳಿಕೆಯ ಅಂಬಿಕಾ ಮಹಾ ವಿದ್ಯಾಲಯ, ಸೋಮವಾರಪೇಟೆ ಕುಶಾಲನಗರದ ಎಂ.ಎಸ್. ಪದವಿ ಕಾಲೇಜು, ಸೋಮವಾರಪೇಟೆಯ ಚೌಡ್ಲು ಗ್ರಾಮದ ಚಾಣಕ್ಯ ಕಾಲೇಜು, ಪಂಪವೆಲ್‍ನ ಇನ್‍ಸ್ಟಿಟ್ಯೂಟ್ ಆಫ್ ಆಂಕಾಲಜಿ, ಕುಂದಾಪುರ ಕೆರಾಡಿ ವರಸಿದ್ಧಿ ವಿನಾಯಕ ಪ್ರಥಮ ದರ್ಜೆ ಕಾಲೇಜು, ಬ್ರಹ್ಮಾವರ ವಿದ್ಯಾಲಕ್ಷ್ಮಿ ಗ್ರೂಪ್ ಆಫ್ ಎಜ್ಯುಕೇಶನ್, ನೀರುಮಾರ್ಗ ಪದಮಾಲೆ ವಿದ್ಯಾನಗರ ಮಂಗಳ ಕಾಲೇಜು ಆಫ್ ಸ್ಪೀಚ್ ಅಂಡ್ ಹಿಯರಿಂಗ್, ಅತ್ತಾವರ ಎಸ್.ಎಲ್. ಮಥಾಯಿಸ್ ರೋಡ್‍ನ ಇಂಡಿಯನ್ ಡಿಸೈನ್ ಸ್ಕೂಲ್, ಜೋಕಟ್ಟೆ ಅಂಜುಮಾನ್ ಪ್ರಥಮ ದರ್ಜೆ ಕಾಲೇಜು, ಹಾಗೂ ಪುತ್ತೂರು ದರ್ಬೆಯ ಗ್ಲೋರಿಯಾ ಪ್ರಥಮ ದರ್ಜೆ ಕಾಲೇಜಿಗೆ ಹೊಸ ಸಂಯೋಜನೆಗೆ ಮಂಜೂರಾತಿ ನೀಡಲಾಯಿತು.
ಕುಲಸಚಿವ ಡಾ. ಎ.ಎಂ. ಖಾನ್, ಹಣಕಾಸು ಅಧಿಕಾರಿ ಡಾ. ದಯಾನಂದ ನಾಯಕ್ ಹಾಗೂ ಪರೀಕ್ಷಾಂಗ ಕುಲಸಚಿವ ಡಾ. ರವೀಂದ್ರ ಆಚಾರ್ ಉಪಸ್ಥಿತರಿದ್ದರು.