UN NETWORKS
ತೊಕ್ಕೊಟ್ಟು: ರಾಜ್ಯದ ಮುಖ್ಯಮಂತ್ರಿ ಜಿಲ್ಲೆಯ ಮಹತ್ವಾಕಾಂಶೆ ಯೋಜನೆಯಾಗಿರುವ ಮಣಿಪಾಲದಿಂದ ಕೊಣಾಜೆಗೆ ಶೈಕ್ಷಣಿಕ ಕಾರಿಡಾರ್ ನಿರ್ಮಾಣಕ್ಕೆ ಬಜೆಟಿನಲ್ಲಿ ಅಸ್ತು ನೀಡಿರುವುದು ದೊಡ್ಡ ಸಾಧನೆ. ಈ ಮೂಲಕ ರಾಜ್ಯದ ಸಮ್ಮಿಶ್ರ ಸರಕಾರ ಅಭಿವೃದ್ಧಿಪರ ಕಾರ್ಯಸಾಧನೆಗಳಲ್ಲಿ ಮುಂಚೂಣಿಯಲ್ಲಿರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ಜಾತ್ಯಾತೀತ ಜನತಾದಳದ ರಾಜ್ಯ ಉಪಾಧ್ಯಕ್ಷ ಎಂ.ಬಿ ಸದಾಶಿವ ಹೇಳಿದರು.
` ಅಯೋಧ್ಯೆಯಲ್ಲಿ ದೇವಸ್ಥಾನ ಕಟ್ಟಬೇಡಿ ಎಂದು ಮುಸ್ಲಿಂ ಸಮಾಜ ಎಂದಿಗೂ ಹೇಳುವುದಿಲ್ಲ ‘
ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞ ಮಾತನಾಡಿ ರಾಜ್ಯದ ಸಮ್ಮಿಶ್ರ ಸರಕಾರದ ಎಂಟು ತಿಂಗಳ ಸಾಧನೆಯಿಂದ ಮತದಾರರಲ್ಲಿ ಮುಚ್ಚುಮರೆಯಿಲ್ಲದೆ ಮತಯಾಚನೆ ನಡೆಸಬಹುದು. ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸುವುದರ ಜೊತೆಗೆ ಹೆಚ್ಚಿನ ಅನುದಾನ ಒದಗಿಸುವುದರ ಮೂಲಕ ಮುಖ್ಯಮಂತ್ರಿ ಜನಪರವಾಗಿದ್ದಾರೆ ಅನ್ನುವುದು ಸಾಬೀತಾಗಿದೆ. ಜಿಲ್ಲೆಯಲ್ಲಿ ಕಡಬ, ಮೂಡಬಿದ್ರೆ, ಮುಲ್ಕಿ , ಉಳ್ಳಾಲ ಪ್ರದೇಶಗಳನ್ನು ತಾಲೂಕು ರಚನೆ ಘೋಷಿಸುವ ಮುಖೇನ ಜಿಲ್ಲೆಯ ಅಭಿವೃದ್ಧಿಯಲ್ಲಿ ಪರಿಣಾಮ ಬೀರಿದ್ದಾರೆ. ಜಿಲ್ಲೆಯ ಸಂಸದರು 10 ವರ್ಷಗಳ ಅವಧಿಯಲ್ಲಿ ಜಾತಿ ವಿಷಬೀಜ ಬಿತ್ತುವ ಮೂಲಕ ಯುವಕರ ನೆಮ್ಮದಿಯಾಗಿ ಮನೆಗಳಿಗೆ ಹೋಗದಂತಹ ವಾತಾವರಣ ನಿರ್ಮಿಸಿದ್ದರು. ಕೋಮುದ್ವೇಷ ಭಾವನೆಗಳನ್ನು ಸೃಷ್ಟಿಸಿ ಸಮಾಜದಲ್ಲಿ ಅಶಾಂತಿಯನ್ನೇ ಹುಟ್ಟುಹಾಕುತ್ತಾ ಬಂದಿದ್ದಾರೆ. ದೇಶದಲ್ಲಿಯೂ ಜಿಲ್ಲೆಯ ಸಂಸದರಿಗೆ ಬೆಲೆಯೇ ಇಲ್ಲದಂತಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹೆಸರಿನಲ್ಲಿ ಮತಯಾಚಿಸುತ್ತಾ ಗೆದ್ದರೂ, ಈವರೆಗೂ ಮಂದಿರ ನಿರ್ಮಿಸಲು ಅಸಾಧ್ಯವಾಗಿದೆ. ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ದೇವಸ್ಥಾನ ನಿರ್ಮಿಸದೆ , ದೇಶದ ಪ್ರಧಾನಿ ದುಬೈ, ಅಬುದಾಬಿಯಲ್ಲಿ ದೇವಸ್ಥಾನಗಳನ್ನು ಕಟ್ಟುತ್ತಿದ್ದಾರೆ. ಮುಸ್ಲಿಂ ಸಮಾಜ ಎಂದಿಗೂ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಬೇಡಿ ಎಂದು ಹೇಳಲಿಲ್ಲ ಎಂದರು.
ಸುದ್ಧಿಗೋಷ್ಠಿಯಲ್ಲಿ ಜೆಡಿಎಸ್ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಮೋಹನ್ ದಾಸ್ ಶೆಟ್ಟಿ , ಮುಖಂಡರುಗಳಾದ ಅಬೂಬಕರ್ ನಾಟೆಕಲ್, ನಝೀರ್ ಉಳ್ಳಾಲ್ , ಹೈದರ್ ಪರ್ತಿಪ್ಪಾಡಿ, ಯು.ಹೆಚ್ ಫಾರುಕ್, ವಸಂತ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.