UN NETWORKS
ದೇರಳಕಟ್ಟೆ : ಪ್ರಸ್ತುತ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಬೆಲೆ ಕಳೆದುಕೊಂಡಿದೆ. ಮನುಷ್ಯ ತೃಪ್ತಿ ಹಾಗೂ ಮಾನವೀಯ ಮೌಲ್ಯಗಳಿಗೆ ಮಹತ್ವ ಕೊಡದಿದ್ದರೆ ಸೌಹಾರ್ದಯುತ ಸಮಾಜವನ್ನು ನಾವು ಖಂಡಿತ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ, ಕರ್ನಾಟಕ ಮಾಜಿ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಹಣದ ಅಡಚಣೆ ಇದ್ದರೆ ಕನ್ನಡ, ಇಲ್ದಿದ್ರೆ ಆಂಗ್ಲ ಮಾಧ್ಯಮ ಶಾಲೆ ಎಂಬ ಕಲ್ಪನೆ ಜನರಿಂದ ದೂರವಾಗಬೇಕು. ಮಾತೃಭಾಷೆ ಕನ್ನಡದಲ್ಲಿ ಕಲಿತವರು ಭಾಗ್ಯವಂತರು. ಯಾಕೆಂದರೆ ಇಂಗ್ಲಿಷ್ ಮಾತೃಭಾಷೆಯಲ್ಲ ಎಂದರು.
ಕಾಸರಗೋಡು ದಕ್ಷಿಣ ಕನ್ನಡ ಜಿಲ್ಲೆಯ ಭಾಗವೇ ಆಗಿದಿದ್ದರೆ ಕನ್ನಡ ಇನ್ನಷ್ಟು ಬೆಳೆಯಬಹುದಿತ್ತು. ಡಾ. ಗೋವಿಂದ ಪೈ, ಡಾ. ಕೈಯಾರ ಕಿಂಞಣ್ಣ ರೈ ಅವರಂತಹ ಶ್ರೇಷ್ಠ ಕವಿಗಳು ಹುಟ್ಟಿದ ನಾಡು ಅದು. ಹಾಗೆಯೇ ನಿಟ್ಟೆ ವಿದ್ಯಾಸಂಸ್ಥೆ ಮನವೀಯ ಮೌಲ್ಯಗಳನ್ನು ಪರಿಗಣಿಸಿಯೇ ಪ್ರಶಸ್ತಿ ನೀಡಿದೆ. ಕಳೆದ 20ವರ್ಷದಲ್ಲಿ 30ಲಕ್ಷ ರೋಗಿಗಳಿಗೆ ಉಚಿತ ಸೇವೆ ಹಾಗೂ ನಿಟ್ಟೆ ಶಿಕ್ಷಣ ಸಂಸ್ಥೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಟ್ಟಿದ್ದು ಆ ಸಾರ್ಥಕತೆ ನಿಟ್ಟೆ ಸಂಸ್ಥೆಗಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಅತ್ಯುತ್ತಮ ಶಾಲೆ ಆಯ್ಕೆ ಸಮಿತಿ ಸದಸ್ಯರುಗಳಾದ ಕುದಿ ವಸಂತ ಶೆಟ್ಟಿ, ಪ್ರವೀಣ ಕುಮಾರಿ ಹಾಗೂ ಶಂಕರ ನಾರಾಯಣ ಅವರನ್ನು ಗೌರವಿಸಲಾಯಿತು. ಬಳಿಕ ಪ್ರಶಸ್ತಿ ಪಡೆದ ಶಾಲಾ ಪ್ರತಿನಿಧಿಗಳು ಅನಿಸಿಕೆ ವ್ಯಕ್ತಪಡಿಸಿದರು.ಸಹ ಕುಲಾಧಿಪತಿ ಪ್ರೊ. ಡಾ. ಎಂ. ಶಾಂತಾರಾಮ ಶೆಟ್ಟಿ ಹಾಗೂ ವಿವಿಯ ಆರ್ಥಿಕ ಹಾಗೂ ಅಭಿವೃದ್ಧಿ ನಿರ್ದೇಶಕ ಡಾ. ರಾಜೇಂದ್ರ ಎಂ. ಉಪಸ್ಥಿತರಿದ್ದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ನಿಟ್ಟೆ ವಿಶ್ವವಿದ್ಯಾಲಯದ ಅಡಳಿತ ಸಹ ಕುಲಾಧಿಪತಿ ಎನ್. ವಿಶಾಲ್ ಹೆಗ್ಡೆ ನಿಟ್ಟೆ ಶಾಲೆ ಕನ್ನಡ ಮಾಧ್ಯಮದ ಮೂಲಕ ಆರಂಭಗೊಂಡು ಇದೀಗ ನಿಟ್ಟೆ, ಮಂಗಳೂರು ಹಾಗೂ ಬೆಂಗಳೂರಿನ ಕ್ಯಾಂಪಸ್‍ನಲ್ಲಿ 20ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.ಗ್ರಾಮೀಣ ಶಾಲೆಗಳನ್ನು ಗುರುತಿಸುವ ನಿಟ್ಟಿನಲ್ಲಿ ನಿಟ್ಟೆ ವಿದ್ಯಾ ಸಂಸ್ಥೆ ಹಾಗೂ ನಿಟ್ಟೆ ವಿಶ್ವವಿದ್ಯಾಲಯ ಜಂಟಿಯಾಗಿ ದಕ್ಷಿಣ ಕನ್ನಡ, ಕಾಸರಗೋಡು ಹಾಗೂ ಉಡುಪಿ ಜಿಲ್ಲೆಗಳ ಅರ್ಹ ಶಾಲೆಗಳನ್ನು ಗುರುತಿಸುವ ಕಾರ್ಯ ನಡೆದಿದೆ ಎಂದರು.ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ 15ಲಕ್ಷ ರೂ. ನಗದು ಹಾಗೂ ಪ್ರಥಮ ಪ್ರಶಸ್ತಿ, ಪುತ್ತೂರಿನ ಶ್ರೀ ರಾಮಕುಂಜ ಪ್ರೌಢಶಾಲೆ 10ಲಕ್ಷ ರೂ. ನಗದು ಹಾಗೂ ದ್ವಿತೀಯ ಪ್ರಶಸ್ತಿ ಹಾಗೂ ಗಡಿನಾಡ ಅತ್ಯುತ್ತಮ ಶಾಲೆಯಾಗಿ ಕಾಸರಗೋಡು ಅಗಲ್ಪಾಡಿಯ ಶ್ರೀ ಅನ್ನಪೂರ್ಣೇಶ್ವರಿ ಕನ್ನಡ ಮಾಧ್ಯಮ ಪ್ರೌಢಶಾಲೆ 3ಲಕ್ಷ ರೂ. ನಗದು ಹಾಗೂ ವಿಶೇಷ ಪ್ರಶಸ್ತಿಗೆ ಭಾಜನವಾಯಿತು. ನಿಟ್ಟೆ ವಿವಿ ಸಹ ಕುಲಪತಿ ಡಾ. ಎಂ.ಎಸ್. ಮೂಡಿತ್ತಾಯ ವರದಿ ಮಂಡಿಸಿದರು. ಕುಲಪತಿ ಪ್ರೊ. ಡಾ. ಕೆ. ಸತೀಶ್ ಕುಮಾರ್ ಭಂಡಾರಿ ವಂದಿಸಿದರು. ನಿಟ್ಟೆ ವಿವಿಯ ತುಳು ಭಾಷಾ ವಿಭಾಗದ ಡಾ. ಸಾಯಿಗೀತಾ ಕಾರ್ಯಕ್ರಮ ನಿರೂಪಿಸಿದರು.
ವಿಶ್ವವಿದ್ಯಾಲಯಗಳು ಕನ್ನಡ ಮಾಧ್ಯಮ ಶಾಲೆಯ ಕುರಿತು ಆಲೋಚಿಸುವುದು ವಿರಳ. ನಿಟ್ಟೆ ವಿವಿ ಕುಲಾಧಿಪತಿ ವಿನಯ್ ಹೆಗ್ಡೆ ಅವರ ದೂರದೃಷ್ಟಿಯ ಫಲದಿಂದ ಹಳ್ಳಿಗಳ ಕನ್ನಡ ಶಾಲೆಗಳನ್ನು ಗುರುತಿಸುವ ಕೆಲಸ ನಡೆದಿದೆ. 85ವರ್ಷದ ಹಿಂದೆ ಎಂಬಿಬಿಎಸ್ ಪದವೀಧರರಾದರೂ ನಗರದಲ್ಲಿ ನೆಲೆ ನಿಲ್ಲದೆ ನಿಟ್ಟೆಯಂತಹ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿದವರು ಡಾ. ಅಡ್ಯಂತಾಯರು. ಅವರ ಹೆಸರಿನಲ್ಲಿ ಉತ್ತಮ ಕಾರ್ಯ ನಡೆಯುತ್ತಿದೆ. ಹಾಗೆಯೇ ಶಿಕ್ಷಕರು ಆಯಾ ಕಲಘಟ್ಟಕ್ಕೆ ಹೊಮದಿಕೊಂಡು ಮುನ್ನಡೆಯಬೇಕು. ಬದಲಾವಣೆಗೆ ಹೊಂದಿಕೊಂಡು ಹೋಗದವರು ಶಿಕ್ಷಕರೇ ಅಲ್ಲ. ಯಾಕೆಂದರೆ ನಾವು ಇವತ್ತು ಕೊಟ್ಟ ಶಿಕ್ಷಣ 10ವರ್ಷದ ಬಳಿಕ ಇತಿಹಾಸ ಸೇರುತ್ತದೆ ಎಂಬುದನ್ನು ಶಿಕ್ಷಕರು ಮನಗಾಣಬೇಕು.
ಪ್ರೊ. ಡಾ.ಎಂ. ಶಾಂತಾರಾಮ ಶೆಟ್ಟಿ
ಸಹ ಕುಲಾಧಿಪತಿ
ಪ್ರಶಸ್ತಿ ವಿವಿರ:
1. ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ ಅಳಿಕೆ, 15ಲಕ್ಷ ರೂ. ನಗದು ಹಾಗೂ ಪ್ರಶಸ್ತಿ
2. ಶ್ರೀ ರಾಮಕುಂಜ ಪ್ರೌಢಶಾಲೆ ಪುತ್ತೂರು, 10ಲಕ್ಷ ರೂ. ನಗದು ಹಾಗೂ ಪ್ರಶಸ್ತಿ
ವಿಶೇಷ ಪ್ರಶಸ್ತಿ: ಗಡಿನಾಡ ಅತ್ಯುತ್ತಮ ಶಾಲೆ- ಶ್ರೀ ಅನ್ನಪೂರ್ಣೇಶ್ವರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಅಗಲ್ಪಾಡಿ, ಕಾಸರಗೋಡು, 3ಲಕ್ಷ ರೂ. ನಗದು ಹಾಗೂ ವಿಶೇಷ ಪ್ರಶಸ್ತಿ