ದ್ವಿತೀಯ ಪಿಯು ಮೌಲ್ಯಮಾಪನ ಬಹಿಷ್ಕಾರ ಹಿನ್ನೆಲೆ ` ದ.ಕ ಜಿಲ್ಲಾ ಪ್ರಾಚಾರ್ಯರ ಸಂಘಗಳಿಂದ ಬೆಂಬಲವಿಲ್ಲ ‘
UllalaVani
UN NETWORKS
ಮಂಗಳೂರು: ಬೇಸಿಗೆ ರಜೆ ಕಡಿತ ಕೈ ಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಮಾ.21 ರಂದು ಕೈಗೊಂಡಿರುವ ಅನಿರ್ದಿಷ್ಟ ಕಾಲ ಅಹೋರಾತ್ರಿ ಧರಣಿಗೆ ದಕ್ಷಿಣ ಕನ್ನಡ ಜಿಲ್ಲಾ ಪಿಯು ಕಾಲೇಜುಗಳ ಪ್ರಾಚಾರ್ಯರ ಸಂಘ ಹಾಗೂ ಸರಕಾರಿ ಕಾಲೇಜುಗಳ ಉಪನ್ಯಾಸಕರ ಸಂಘ ಯಾವುದೇ ರೀತಿಯ ಬೆಂಬಲ ನೀಡುವುದಿಲ್ಲ ಹಾಗೂ ಉತ್ತರಪತ್ರಿಕೆಯನ್ನು ತಿದ್ದುವ ಸಂದರ್ಭದಲ್ಲಿ ಯಾರದರೂ ಅಡ್ಡಿಪಡಿಸಿದಲ್ಲಿ ಅದಕ್ಕೆ ಸರಕಾರವೇ ನೇರ ಹೊಣೆ ಎಂದು ಸ್ಪಷ್ಟಪಡಿಸಿದೆ.
ಪ್ರತಿಬಾರಿಯೂ ಮೌಲ್ಯ ಮಾಪನ ಸಮಯದಲ್ಲೇ ಬೇಡಿಕೆಗಳನ್ನು ಇಟ್ಟು ಪ್ರತಿಭಟನೆ ನಡೆಸುವ ಮೂಲಕ ವಿದ್ಯಾರ್ಥಿಗಳ ಹಾಗೂ ಹೆತ್ತವರ ಜೀವನದಲ್ಲಿ ಆಟವಾಡುವ ಕೆಲಸವಾಗುತ್ತಿದೆ. ಶಿಕ್ಷಕರ ಸಮಸ್ಯೆ ಪರಿಹಾರಕ್ಕಾಗಿ ಹಿಂದೆ ಪ್ರಾಂಶುಪಾಲರ ಸಂಘದ ಅಧ್ಯಕ್ಷರೇ ಆಗಿದ್ದಂತಹ ಶ್ರೀಕಂಠೇಗೌಡ ಹಾಗೂ ಬೋಜೇ ಗೌಡ ಅವರನ್ನು ವಿಧಾನಪರಿಷತ್ ಸದಸ್ಯರಾಗಿ ಆಯ್ಕೆ ಮಾಡಿ ಕಳುಹಿಸಲಾಗಿದೆ. ಭೋಜೇಗೌಡ ಅವರು ವರ್ಷವಿಡೀ ಮುಖ್ಯಮಂತ್ರಿಗಳ ಜತೆಗೆ ಇರುವವರು. ಆದರೂ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಮಸ್ಯೆಗಳನ್ನು ಸರಕಾರದ, ಮುಖ್ಯಮಂತ್ರಿಗಳ ಗಮನಕ್ಕೆ ತರಲು ಸಾಧ್ಯವಾಗದೇ ಇದ್ದಲ್ಲಿ ಈ ಕೂಡಲೇ ರಾಜೀನಾಮೆ ನೀಡಲಿ. ವೇತನ ತಾರತಮ್ಯಕ್ಕೆ ಸಂಬಂಧಿಸಿ ಹಿಂದಿನ ಪ್ರತಿಭಟನೆಗೆ ಮಣಿದ ಸರಕಾರ ಹೆಚ್ಚುವರಿ ಯಾಗಿ ಇಂಕ್ರಿಮೆಂಟ್ ಮಾಡಿದೆ. ಪೇ ಕಮೀಷನ್ನಿನಲ್ಲಿಯೂ ಜಾಸ್ತಿ ಮಾಡಲಾಗಿದೆ. ತಿದ್ದುವ ಒಂದು ಪೇಪರಿಗೆ ಹಿಂದೆ ರೂ. 5 ಇದ್ದರೆ, ಅದನ್ನು ರೂ.27 ಕ್ಕೆ ಜಾಸ್ತಿಯನ್ನು ಮಾಡಲಾಗಿದೆ. ಆದರೂ ಇಂತಹ ಸಂದರ್ಭದಲ್ಲಿ ಪ್ರತಿಭಟನೆ ಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳ ಮತ್ತು ಹೆತ್ತವರಲ್ಲಿ ಆತಂಕವನ್ನು ಹೆಚ್ಚಿಸುವ ಕಾರ್ಯವಾಗುತ್ತಿದೆ. ಜಿಲ್ಲೆಯ ಉಪನ್ಯಾಸಕರು ಪೇಪರ್ ತಿದ್ದುವುದರಿಂದ ಹಿಂದೆ ಸರಿಯುವುದಿಲ್ಲ, ಯಾರಾದರೂ ಅಡ್ಡಿಪಡಿಸಲು ಮುಂದಾದಲ್ಲಿ ಅದಕ್ಕೆ ಸರಕಾರವೇ ನೇರ ಹೊಣೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಿಯು ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಕೆ.ಕೆ ಉಪಾಧ್ಯಾಯ, ಸರಕಾರಿ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಚೆರಿಯನ್ ಜೆ.ಪಿಎಂ ತಿಳಿಸಿದ್ದಾರೆ.