Site icon Ullalavani

ತೊಕ್ಕೊಟ್ಟು : ಸಾಮಾಜಿಕ ಸುರಕ್ಷಾ ಸಂಹಿತಿ ಮಸೂದೆ ವಿರುದ್ಧ ಕಾರ್ಮಿಕರ ಪ್ರತಿಭಟನೆ

UN NETWORKS

ತೊಕ್ಕೊಟ್ಟು: ಸರಕಾರ ಜಾರಿಗೊಳಿಸಿರುವ ಸಾಮಾಜಿಕ ಸುರಕ್ಷಾ ಸಂಹಿತಿ ಮಸೂದೆ ಜಾರಿಗೊಂಡರೆ ಕಟ್ಟಡ ಮತ್ತು ಇತರೆ ಕಾರ್ಮಿಕರು ಹಲವು ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ. ಈ ಕೂಡಲೇ ಮಸೂದೆಯನ್ನು ಸರಕಾರ ಹಿಂಪಡೆಯಬೇಕು ಎಂದು ಸಿಐಟಿಯು ಉಳ್ಳಾಲ ವಲಯ ಅಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್ ಹೇಳಿದರು.

ಸಾಮಾಜಿಕ ಸುರಕ್ಷಾ ಮಸೂದೆ ಕರಡು ಹಿಂಪಡೆಯುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿ ತೊಕ್ಕೊಟ್ಟುವಿನಲ್ಲಿ ಇತ್ತೀಚೆಗೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಉಳ್ಳಾಲ ವಲಯ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದಲ್ಲಿ 2006ರಲ್ಲಿ ರಚನೆಯಾದ ಕಲ್ಯಾಣ ಮಂಡಳಿಯಲ್ಲಿ ಸುಮಾರು 3 ಲಕ್ಷಕ್ಕಿಂತ ಅಧಿಕ ಕಾರ್ಮಿಕರು ಫಲಾನುಭವಿಗಳಾಗಿ ಸೇರ್ಪಡೆಗೊಂಡಿದ್ದಾರೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸೆಸ್ ಕಾಯ್ದೆ 1996ರ ಅಡಿಯಲ್ಲಿ ಸಂಗ್ರಹವಾಗಿರುವ 7500 ಕೋಟಿ ಹಣದಲ್ಲಿ ಪಿಂಚಣಿ, ಮದುವೆ, ಶೈಕ್ಷಣಿಕ, ವೈದ್ಯಕೀಯ ಹಾಗೂ ಹೆರಿಗೆ ಸೇರಿ ಸುಮಾರು 10 ಸೌಲಭ್ಯಗಳನ್ನು ಪಡೆಯುವ ಮೂಲಕ ಕುಟುಂಬದ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಸರಕಾರ ಸಂಘಟಿತ ಹಾಗೂ ಅಸಮಘಟಿತ ಕಾರ್ಮಿಕರನ್ನು ಒಳಗೊಂಡ ಕಾರ್ಮಿಕರಿಗಾಗಿ ಸಾಮಾಜಿಕ ಸುರಕ್ಷಾ ಸಂಹಿತಿ ಕರಡು ಸಿದ್ಧಪಡಿಸಿದೆ. ಇದು ಕಾರ್ಮಿಕರ ಉದ್ಯೋಗ ಹಾಗೂ ಸೇವಾ ಷರತ್ತುಗಳ ಕ್ರಮೀಕರಣ 1996ರ ಕಾಯ್ದೆ ಹಾಗೂ ಕಾರ್ಮಿಕರ ಕಲ್ಯಾಣ ಸೆಸ್ ಕಾಯ್ದೆ ಸೇರಿಸಿಕೊಂಡು ಮಾಡಿರುವ ಕಾಯ್ದೆಯಾಗಿದೆ. ಈ ಕಾಯ್ದೆ ಜಾರಿಗೊಂಡಲ್ಲಿ ಇದುವರೆಗೆ ಸಿಗುತ್ತಿದ್ದ ಸೌಲಭ್ಯಗಳಿಂದ ಕಾರ್ಮಿಕರು ವಂಚಿತರಾಗಲಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಿಡಬ್ಲ್ಯುಎಫ್ ಐ ಪ್ರಧಾನ ಕಾರ್ಯದರ್ಶಿ ಯೊಗೀಶ್ ಜೆಪ್ಪಿನಮೊಗರು, ಸಿಐಟಿಯು ರಾಜ್ಯ ಸಮಿತಿ ಸದಸ್ಯ ಬಾಬು ಪಿಲಾರ್, ಸಿಡಬ್ಲ್ಯುಎಫ್ ಐ ರಾಜ್ಯ ಸಮಿತಿ ಸದಸ್ಯ ಯು.ಜಯಂತ್ ನಾೈಕ್, ಉಳ್ಳಾಲ ವಲಯ ಅಧ್ಯಕ್ಷ ಜನಾರ್ಧನ ಕುತ್ತಾರ್, ರಾಮಚಂದ್ರ ಪಜೀರು, ರೋಹಿದಾಸ್ ಬಟ್ನಗರ, ಇಬ್ರಾಹಿಂ ಮದಕ, ಮಾಧವ ತೊಕ್ಕೊಟ್ಟು, ನಾಗೇಶ್ ತೊಕ್ಕೊಟ್ಟು, ಕುಂಞರಾಮ ಕುಂಪಲ, ಶ್ರೀಧರ್ ಕುಂಪಲ, ರಮೇಶ್ ಅಸೈಗೋಳಿ, ಚಂದ್ರಶೇಖರ್ ಪಿಲಾರ್, ಜಯರಾಮ ತೇವುಲ, ಲಕ್ಷ್ಮಣ ಮಂಜನಾಡಿ, ಅಬ್ದುಲ್ ಅಝೀಝ್ ಪಜೀರು, ಉಮೇಶ್ ಆಚಾರ್ಯ ಪಜೀರು ಉಪಸ್ಥಿತರಿದ್ದರು.ಚಂದ್ರಹಾಸ್ ಪಿಲಾರ್ ಸ್ವಾಗತಿಸಿದರು. ರಾಮಚಂದ್ರ ಪಜೀರು ವಂದಿಸಿದರು.

Exit mobile version