ಕೈರಂಗಳ ಆಶ್ರಮದಿಂದ ಗೋ ಕಳವು ಪ್ರಕರಣ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
UllalaVani
UN NETWORKS
ಉಳ್ಳಾಲ: ಕೈರಂಗಳದ ಅಮೃತಧಾರೆ ಗೋಶಾಲೆಯಿಂದ ತಲವಾರು ತೋರಿಸಿ ದನ ಕಳವು ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ದಕ್ಷಿಣ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಆದೇಶದಂತೆ ರೌಡಿ ನಿಗ್ರಹದ ದಳದ ಪೊಲೀಸರು ನಿನ್ನೆ ಬಂಧಿಸಿದ್ದಾರೆ.
ಮಂಜೇಶ್ವರ ಪೈವಳಿಕೆಯ ಅಬ್ದುಲ್ ಸಲಾಂ ಯಾನೆ ತುಡ್ವ ಸಲಾಂ ಬಂಧಿತ. ಈತ 2018ರ ಮಾರ್ಚ್ ತಿಂಗಳಲ್ಲಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಾರಾಂ ಭಟ್ ಅವರಿಗೆ ಸೇರಿದ ಪುಣ್ಯಕೋಟಿ ಗೋ ಆಶ್ರಮದಿಂದ ದನ ಕಳವು ನಡೆಸಿದ್ದ. ಘಟನೆ ಸಂಬಂಧ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಆಶ್ರಮದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆದಿತ್ತು. ಜಿಲ್ಲೆಯ ಘಟಾನುಘಟಿಗಳು ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಆರೋಪಿಗಳ ಪತ್ತೆಗೆ ಆಗ್ರಹಿಸಿದ್ದರು. ಬಳಿಕ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸುವ ಮೂಲಕ ಆಶ್ರಮದ ರೂವಾರಿ ಭಟ್ ಉಪವಾಸ ಕೈಬಿಡುವ ಮೂಲಕ ಪರಿಸ್ಥಿತಿ ಹತೋಟಿಗೆ ಬಂದಿತ್ತು. ಇದೀಗ ಅದೇ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯ ಬಂಧಿಸುವ ಮೂಲಕ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿ ಸಲಾಂ ವಿರುದ್ಧ ಉಳ್ಳಾಲದಲ್ಲಿ ಮೂರು, ಕೊಣಾಜೆಯಲ್ಲಿ ಎರಡು ಹಾಗೂ ವಿಟ್ಲದಲ್ಲಿ ಒಂದು ಪ್ರಕರಣ ಇದೆ. ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರಿಗೆ ಬೇಕಾಗಿದ್ದ. ಭಾನುವಾರ ಕೊಣಾಜೆ ಠಾಣಾ ವ್ಯಾಪ್ತಿಯ ಗ್ರಾಮಚಾವಡಿ ಎಂಬಲ್ಲಿಂದ ವಶಪಡಿಸಿಕೊಳ್ಳಲಾಗಿದೆ.