ಮಾ.29,30,31 ಮಂಗಳೂರಿನಲ್ಲಿ “ವಿಶ್ವ ತೌಳವ ಉಚ್ಚಯ ಪ್ರಯುಕ್ತ ಮಾ.14 ರಂದು ಕಾಪಿಕಾಡಿನಲ್ಲಿ ಸಮಾಲೋಚನಾ ಸಭೆ
UllalaVani
UN NETWORKS
ತೊಕ್ಕೊಟ್ಟು : ತುಳುನಾಡ ರಕ್ಷಣಾ ವೇದಿಕೆಯ ದಶ ಸಂಭ್ರಮವನ್ನು ಅವಿಸ್ಮರಣೀಯಗೊಳಿಸಲು “ವಿಶ್ವ ತೌಳವ ಉಚ್ಚಯ” (ವಿಶ್ವ ತುಳುವರ ಸಮ್ಮಿಲನ) ಕಾರ್ಯಕ್ರಮ ಮಾ.29,30,31 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಆ ಪ್ರಯುಕ್ತ ಮಾ.14 ರಂದು ಕಾಪಿಕಾಡು ಗಟ್ಟಿ ಸಮಾಜ ಭವನದಲ್ಲಿ ಸಾರ್ವಜನಿಕ ಸಮಾಲೋಚನ ಸಭೆ ನಡೆಯಲಿದೆ ಎಂದು ತುಳುನಾಡು ರಕ್ಷಣಾ ವೇದಿಕೆಯ
ಮಂಗಳೂರು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಎಂ ಸಿರಾಜ್ ಅಡ್ಕರೆ ಹೇಳಿದರು. ತೊಕ್ಕೊಟ್ಟುವಿನಲ್ಲಿ ಶನಿವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ತು.ರ.ವೇ ಆರಂಭಗೊಂಡು 10 ವರ್ಷಗಳಾದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾರ್ಯಕ್ರಮ ಆಯೋಜಿಸಲಾಗಿದೆ. ಬಹುಭಾಷಾ ಕವಿಗೋಷ್ಟಿ, ತುಳುನಾಡು ನಡೆದು ಬಂದುದರ ಬಗೆಗೆ ವಿಚಾರ ಗೋಷ್ಠಿಗಳು, ಜಾನಪದ ಸಾಂಸ್ಕೃತಿಕ ಪ್ರದರ್ಶನ, ಗುಡಿಕೈಗಾರಿಕೆ, ಕರಕುಶಲ, ಪುಸ್ತಕ ಪ್ರದರ್ಶನಗಳು, ತುಳುನಾಡ ದಿಬ್ಬಣ, ತುಳುನಾಡಿನ ಆಹಾರೋತ್ಸವ, ತುಳುನಾಡ ರಾಜದರ್ಬಾರ್, ಜನಮೈತ್ರಿಸಂಗಮ, ದೇಹದಾಡ್ಯ ಪ್ರದರ್ಶನ, ತುಳುಹಾಸ್ಯ ಕಾರ್ಯಕ್ರಮಗಳು, ಯಕ್ಷಗಾನ, ನಾಟಕ, ನೃತ್ಯ, ಕೋಸ್ಟಲ್‍ವುಡ್ ಸಿನೇಮಾ ಪರ್ಬ(ರಂಗಭೂಮಿಯಿಂದ ಬೆಳ್ಳಿ ಪರದೆಯವರೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಚಿತ್ರ ನಿರ್ಮಾಪಕರು, ನಿರ್ದೇಶಕರು, ನಟ-ನಟಿಯರು ಮತ್ತು ತಂತ್ರಜ್ಞರಿಗೆ ಗೌರವಿಸುವ ಕಾರ್ಯಕ್ರಮ) ಮಹಿಳಾ, ಯುವಜನ, ಮಕ್ಕಳ ಉತ್ಸವ ಮತ್ತು ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ಹಾಗೂ ಸನ್ಮಾನ, ವಿವಿಧ ತೌಳವ ಪ್ರಶಸ್ತಿಗಳು (ತೌಳವ ರತ್ನ, ತೌಳವ ಶ್ರೀ, ತೌಳವ ಸಿರಿ) ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ವಿರೋಧ ಪಕ್ಷ ನಾಯಕ ಯಡ್ಯೂರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ. ಜಯಮಾಲಾ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ಸಣ್ಣ ನೀರಾವರಿ ಸಚಿವ ಪುಟ್ಟರಾಜು, ಡಿ.ಕೆ.ಶಿವಕುಮಾರ್, ಮುಂತಾದವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಗಳ ರೂಪುರೇಷೆ ಸಿದ್ಧ ಪಡಿಸಲು ಸಾರ್ವಜನಿಕರ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ. ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಲಾಗಿದೆ ಎಂದರು.
ಉಳ್ಳಾಲ ತಾಲೂಕು ರಚನೆ ಕ್ಷೇತ್ರದ ಜನರಿಗೆ ಸಂತಸ ತಂದಿದೆ, ಇಲ್ಲಿ ಸ್ಥಾಪನೆಯಾಗುವ ಎಲ್ಲಾ ಸರಕಾರಿ ಕಛೇರಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಡಬೇಕು ಮತ್ತು ತುಳು ಭಾಷೆಯಲ್ಲೇ ಕಛೇರಿಯ ವ್ಯವಹಾರ ನಡೆಯಬೇಕೆಂದು ಆಗ್ರಹಿಸಿದರು. ಪಂಚ ದ್ರಾವಿಡ ಭಾಷಡಗಳಲ್ಲಿ ಒಂದಾದ ತುಳು ಭಾಷೆನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯೆಂದು ಘೋಷಿಸಬೇಕು ಹಾಗೂ ಸಂವಿಧಾನದ ಎಂಟನೇ ಪರಿಛ್ಛೇದನಕ್ಕೆ ಸೇರಿಸಲು ಕೇಂದ್ರ ಸರಕಾರಕ್ಕೆ ಒತ್ತಡ ಹೇರಬೇಕೆಂದು ಹಾಗೂ ಉಳ್ಳಾಲ ತಾಲೂಕಿಗೊಂದು ಮಾಧ್ಯಮ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಬೇಕೆಂದು ಹೇಳಿದರು. ಪತ್ರಿಕಾ ಗೋಷ್ಟಿಯಲ್ಲಿ ತುರವೇ ಜಿಲ್ಲಾಧ್ಯಕ್ಷ ಹಮೀದ್ ಹಸನ್ ಮಾಡೂರು, ಕೇಂದ್ರೀಯ ಕೋಶಾಧಿಕಾರಿ ಅಬ್ದುಲ್ ರಶೀದ್ ಜೆಪ್ಪು, ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಆನಂದ್ ಅಮೀನ್ ಅಡ್ಯಾರ್ ಮುಂತಾದವರು ಉಪಸ್ಥಿತರಿದ್ದರು.