UN NETWORKS
ಕೊಣಾಜೆ: ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಶಿಕ್ಷಣ ಸೇರಿದಂತೆ ಹಲವಾರು ಅವಕಾಶಗಳನ್ನು ಮಹಿಳೆಯರು ಬಳಸಿಕೊಂಡು ಮುನ್ನಡೆದರೆ ಸ್ವಾವಲಂಬೀ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಮಂಗಳೂರು ವಿವಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾದ ಪ್ರೊ.ಮರಿಯಾ ಸಿ.ಡಿ.ಕಾಸ್ಟ ಅವರು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಪ್ರಭಾರ ಕುಲಪತಿ ಪ್ರೊ.ಕಿಶೋರಿ ನಾಯಕ್ ಅವರು, ಇಂದು ಜಗ್ತತು ಮುಂದುವರಿದಿದ್ದರೂ ಅಸಮಾನತೆಯು ಸಂಪೂರ್ಣ ಕಡಿಮೆಯಾಗಿಲ್ಲ. ಇಂದಿಗೂ ವಿವಿಯಂತಹ ಪ್ರತಿಷ್ಟಿತ ಔದ್ಯೋಗಿಕ ರಂಗದಲ್ಲಿ ಮಹಿಳೆಯರ ಸಂಖ್ಯೆ ಬೆರಳೆಣಿಕೆಯಷ್ಟು ಇದ್ದು ಪುರುಷರ ಸಂಖ್ಯೆಯೇ ಹೆಚ್ಚಾಗಿದೆ. ಇಂತಹ ತಾರತಮ್ಯಗಳು ಕಡಿಮೆಯಾಗಿ ಸಮಾನತೆಯ ಸಮಾಜ ನಿರ್ಮಾಣವಾಗಬೇಕಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಅಪಘಾತದಲ್ಲಿ ಕಾಲು ಕಳೆದುಕೊಂಡರೂ ಶೈಕ್ಷಣಿಕ ಸಾಧನೆ ಮಾಡಿದ ಫಾತಿಮಾ ಸುಜ್ಞ ಹಾಗೂ ನಿವೃತ ಅಂಗನವಾಡಿ ಶಿಕ್ಷಕಿ ಮಿನಿ ಸುರೇಂದ್ರ ನಾಯರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಅಧ್ಯಯನ ಕೇಂದ್ರದ ನಿರ್ಧೇಶಕಿ ಡಾ.ಅನಿತಾ ರವಿಶಂಕರ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಪ್ರಾಧ್ಯಾಪಕಿ ಸಬಿತಾ ಅವರು ವಂದಿಸಿದರು. ಪ್ರೀತಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಮಂಗಳೂರು ವಿವಿಯ ಬೋಧಕ ಮತ್ತು ಬೋಧಕೇತರ ಮಹಿಳಾ ಸಿಬ್ಬಂದಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.