ಕುರ್ನಾಡು: ಗ್ರಾಮಾಭಿವೃದ್ಧಿಗೆ ಪೂರಕವಾದ ಸೇವೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಸ್ವಚ್ಛತಾ ಅಂದೋಲನದಂತಹ ಪ್ರಮುಖ ಕಾರ್ಯಕ್ರಮಗಳಿಗೆ ಉತ್ತೇಜನ ಪಂಚಾಯಿತಿ ವತಿಯಿಂದ ನೀಡುತ್ತೇವೆ. ಆದರೆ ಈ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗದೇ ದೈನಂದಿನ ಕಾರ್ಯಚಟುವಟಿಕೆಯಾಗಿ ಮಾಡಿಕೊಳ್ಳಬೇಕಾಗಿದೆ ಎಂದು ಕುರ್ನಾಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇಶವ ಅಭಿಪ್ರಾಯಪಟ್ಟರು.
ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ ಮಂಗಳೂರು (ಸಿಒಡಿಪಿ) ಆಶ್ರಯದಲ್ಲಿ ಕುರ್ನಾಡು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಪ್ರಗತಿ ಮಹಿಳಾ ಸಂಘದ ಸದಸ್ಯ ಸ್ವಸಹಾಯ ಸಂಘಗಳ ಮಹಿಳಾ ದಿನಾಚರಣೆಯ ಪ್ರಯುಕ್ತ ಕುರ್ನಾಡು ಗ್ರಾಮ ಪಂಚಾಯಿತಿಯಲ್ಲಿ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಸ ಹಾಕುವುದು, ತೆಗೆಯುವುದು ಕೆಲಸವಲ್ಲ. ಕಸಹಾಕುವ ಮುನ್ನ ಜಾಗೃತಿ ಮೂಡಿಸಬೇಕು. ಒಣ ಕಸ, ಹಸಿ ಕಸವನ್ನು ಪತ್ಯೇಕವಾಗಿ ಶೇಖರಿಸಿಟ್ಟು ಅದನ್ನು ತಿಂಗಳಿಗೊಮ್ಮೆ ತೆಗೆಯುವ ಕೆಲಸ ಆಗಬೇಕು. ವಾರದ ಮೂರನೇ ಶನಿವಾರ ಸ್ವಚ್ಛತೆ ಅಭಿಯಾನ ನಡೆಸಲು ಅಂಗನವಾಡಿ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಪ್ರತ್ಯೇಕವಾಗಿ ಪ್ಲಾಸ್ಟಿಕ್ ತ್ಯಾಜ್ಯ ನಿವಾರಣೆಯಾಗಬೇಕು ಎಂದು ನುಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಿಒಡಿಪಿ ಸಂಸ್ಥೆಯ ಸಂಯೋಜಕ ರವಿಕುಮಾರ್ ಕ್ರಾಸ್ತಾ ಬಾರಿ ನಾವು ಮಹಿಳಾ ದಿನಾಚರಣೆಯ ಪ್ರಯುಕ್ತ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದೇವೆ. ಕಸಗಳನ್ನು ನಾವೇ ಹಾಕುತ್ತೇವೆ. ರೋಗಗಳನ್ನು ನಾವೇ ಉತ್ಪಾದನೆ ಮಾಡುತ್ತಿದ್ದೇವೆ. ನಾವು ಎಸೆಯುವ ಕಸಗಳಿಂದ ನಮಗೆ ರೋಗ ಬರುತ್ತದೆ. ಅದಕ್ಕೆ ಪರಿಹಾರ ನಾವೇ ಮಾಡಬೇಕಾಗಿದೆ ಎಂದರು.ಸಿಒಡಿಪಿ ಸಂಯೋಜಕಿ ರೀಟಾ ಡಿಸೋಜ ಉಪಸ್ಥಿತರಿದ್ದರು.