UN NETWORKS
ಕೊಣಾಜೆ : ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಹೋನ್ನತವಾದ ಕೊಡುಗೆ ನೀಡಿದ ಮಹಾನ್ ಸಾಧಕ ಎಂದು ಚಿಂತಕ ಡಿ.ಎಸ್. ನಾಗಭೂಷಣ ಶಿವಮೊಗ್ಗ ಅಭಿಪ್ರಾಯಪಟ್ಟರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ್ ರೈ ಮಾತನಾಡಿ ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು ಮಂಗಳೂರು ನಗರದಲ್ಲಿದ್ದ ಸ್ನಾತಕೋತ್ತರ ಕೇಂದ್ರವನ್ನು ಕೊಣಾಜೆಯ ಮಂಗಳಗಂಗೋತ್ರಿಗೆ ಸ್ಥಳಾಂತರಗೊಳಿಸುವಲ್ಲಿ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಕನಸು ಸಾಕಾರಗೊಳಿಸಿದ ವ್ಯಕ್ತಿಯಾಗಿದ್ದಾರೆ. ಅಲ್ಲದೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಎಸ್‍ವಿಪಿಯವರನ್ನು ಪ್ರೊ.ಎಸ್.ವಿ. ಪರಮೇಶ್ವರ ಭಟ್ಟ ಸಂಸ್ಮರಣಾ ಸಮಿತಿಯು 2002ನೇ ಇಸವಿಯಿಂದ ಇಲ್ಲಿಯವರೆಗೆ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತಾ ಬಂದಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್‍ವಿಪಿ ಸಂಸ್ಮರಣಾ ಸಮಿತಿಯ ಅಧ್ಯಕ್ಷ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಶಾಂತಿ, ಸೌಹಾರ್ದಯುತ ಸಮಾಜವನ್ನು ನಿರ್ಮಾಣ ಮಾಡಲು ನಾವೆಲ್ಲರೂ ಮುಂದಾಗಬೇಕಿದೆ. ಗಾಂಧೀ ಹಾಗೂ ಲೋಹಿಯಾ ಅವರ ಸಮಾಜವಾದ ಚಿಂತನೆಯ ಡಿ.ಎಸ್.ನಾಗಭೂಷಣ ಶಿವಮೊಗ್ಗ ಅವರಿಗೆ ಎಸ್‍ವಿಪಿ ಸಂಸ್ಮರಣಾ ಪ್ರಶಸ್ತಿ ಲಭಿಸಿರುವುದು ಸಮಂಜಸವಾಗಿದೆ ಎಂದರು. ತುಮಕೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ. ನಿತ್ಯಾನಂದ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು.
ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ಕಿಶೋರಿ ನಾಯಕ್, ಕುಲಸಚಿವ ಪ್ರೊ.ಎ.ಎಂ. ಖಾನ್ ಹಾಗೂ ಎಸ್.ಪಿ. ರಾಮಚಂದ್ರ ಬೆಂಗಳೂರು ಉಪಸ್ಥಿತರಿದ್ದರು. ಮಂಗಳೂರು ವಿಶ್ವವಿದ್ಯಾಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ. ನಾಗಪ್ಪ ಗೌಡ ಸ್ವಾಗತಿಸಿದರು. ನಿವೃತ್ತ ಉಪನ್ಯಾಸಕಿ ಚಂದ್ರಕಲಾ ನಂದಾವರ ವಂದಿಸಿದರು. ನರಸಿಂಹ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಶ್ರೀದೇವಿ ಭಟ್ ಕಲ್ಲಡ್ಕ ಎಸ್‍ವಿಪಿ ಅವರು ಬರೆದ ಕವನಗಳನ್ನು ವಾಚಿಸಿದರು.