Site icon Ullalavani

ದೇರಳಕಟ್ಟೆ-9ನೇ ವರ್ಷದ ನಿಟ್ಟೆ ಅಕೊಲೇಡ್ಸ್ ಉದ್ಘಾಟನೆ

UN NETWORKS

ದೇರಳಕಟ್ಟೆ : ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯ ಆರೋಗ್ಯ ರಕ್ಷಣೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಿದ್ದು ವಿದ್ಯಾರ್ಥಿಗಳು ದೈಹಿಕವಾಗಿ ಆರೋಗ್ಯವಂತರಾಗಿರಲು ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಅಭಿಪ್ರಾಯಪಟ್ಟರು.

ದೇರಳಕಟ್ಟೆ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ವತಿಯಿಂದ ದಕ್ಷಿಣ ಭಾರತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಅಂತರ್ ಕಾಲೇಜು ಮಟ್ಟದ 9ನೇ ವರ್ಷದ ಕ್ರೀಡಾಕೂಟ “ನಿಟ್ಟೆ ಅಕೊಲೇಡ್ಸ್”-2019ನ್ನು ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿ ಸಭಾಂಗಣದಲ್ಲಿ ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಅವಕಾಶ ಹಾಗೂ ಸಮಯ ಸಿಕ್ಕಾಗ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸಬೇಕು. ಈ ವರ್ಷದ ಕ್ರೀಡಾಕೂಟದಲ್ಲಿ 20ತಂಡಗಳು ಭಾಗವಹಿಸುತ್ತಿದೆ. ಗೆಲುವು ಮತ್ತು ಸೋಲು ಕ್ರೀಡೆಯ ಒಂದು ಭಾಗ. ಕೂಟದಲ್ಲಿ ಭಾಗವಹಿಸುವವರು ಕ್ರೀಡಾಸ್ಪೂರ್ತಿ ಹೊಂದಿರುವುದು ಮುಖ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ದೇರಳಕಟ್ಟೆಯ ಎ.ಬಿ. ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ದಂತ ಕಾಲೇಜಿನ ಡೀನ್ ಡಾ.ಪಿ.ಎಸ್. ಪ್ರಕಾಶ್ ಮಾತನಾಡಿ ದಕ್ಷಿಣ ಭಾರತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ಹೊನಲು ಬೆಳಕಿನಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾಟದಲ್ಲಿ ಆರು ತಂಡಗಳು ಭಾಗವಹಿಸುತ್ತಿದ್ದು, ಆಟದಲ್ಲಿ ಸ್ಪೂರ್ತಿ ಸದಾ ಸ್ಪೂರ್ತಿ ಇರಲಿ ಎಂದು ಆಶಿಸಿದರು.
ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿ ವೈಸ್ ಡೀನ್ ಡಾ.ಜೆ.ಪಿ. ಶೆಟ್ಟಿ, ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಡೀನ್ ಡಾ. ಧಾಣೇಶ್ ಕುಮಾರ್, ನಮಸ್ತೆ ನಿರ್ದೇಶಕ ಡಾ. ಅನಿರ್ಬನ್ ಚಕ್ರಬರ್ತಿ, ಡಾ. ಕರುಣಾಕರ್ ಶೆಟ್ಟಿ, ನಿಟ್ಟೆ ಉಷಾ ಇನ್ ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಡಾ. ಫಾತಿಮಾ ಡಿಸಿಲ್ವಾ, ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಔಷಧೀಯ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಡಾ.ಸಿ.ಎಸ್. ಶಾಸ್ತ್ರಿ ಉಪಸ್ಥಿತರಿದ್ದರು. ನಿಟ್ಟೆ ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಮುರಳೀ ಕೃಷ್ಣ ಸ್ವಾಗತಿಸಿದರು.

ಉಸ್ರಫ್ ಸದ್ರಿ ಕಾರ್ಯಕ್ರಮ ನಿರೂಪಿಸಿದರು. ಮೇಘನಾ ವಂದಿಸಿದರು.

Exit mobile version