ಅಬ್ಬಕ್ಕಳ ನೆನಪಿನ ಉತ್ಸವ ಶ್ಲಾಘನೀಯ: ಡಾ. ಸಂಧ್ಯಾ ಎಸ್. ಪೈ
UllalaVani
UN NETWORKS
ಉಳ್ಳಾಲ: ದೇಶಕ್ಕಾಗಿ ಬಲಿದಾನಗೈದ ಅಬ್ಬಕ್ಳಳ ನೆನಪನ್ನು ಸದಾ ಕಾಲ ಸ್ಮರಿಸಿಕೊಳ್ಳುವಂತೆ ಐನೂರು ವರ್ಷ ಕಳೆದರೂ ಅವಳ ನೆನೆಪು ಅಬ್ಬಕ್ಕ ಉತ್ಸವವಾಗಿ ಆಚರಿಸಿಕೊಂಡು ಬರಲಾಗುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದು ತರಂಗ ವಾರಪ್ರತಿಕೆಯ ಸಂಪಾದಕಿ ಡಾ. ಸಂಧ್ಯಾ ಎಸ್. ಪೈ ಅಭಿಪ್ರಾಯಪಟ್ಟರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಉಳ್ಳಾಲ ಮೊಗವೀರಪಟ್ಣದ ಸಮುದ್ರತಟದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ-2019ರ ಪ್ರಯುಕ್ತ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ನಡೆದ ಅಬ್ಬಕ್ಕ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಅಬ್ಬಕ್ಕ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.ಅಬ್ಬಕ್ಕಳಿಗೂ ಜಿಎಸ್‍ಬಿ ಸಮುದಾಯಕ್ಕೂ ಒಂದು ಒಳ್ಳೆಯ ನಂಟಿದೆ. ಯಾಕೆಂದರೆ ಐನೂರು ವರ್ಷಗಳ ಹಿಂದೆ ಗೋವಾದಲ್ಲಿ ಜಿಎಸ್‍ಬಿ ಸಮುದಾಯ ಕೃಷಿ ಬೇಸಾಯ ಜೀವನ ಮಾಡಿಕೊಂಡು ಸುಂದರ ಜೀವನ ನಡೆಸುತ್ತಿದ್ದರು. ಪೋರ್ಚುಗೀಸರು ಗೋವಾಕ್ಕೆ ಕಾಲಿಟ್ಟ ನಂತರ ಹಲವು ವರ್ಷ ಸುಮ್ಮನಿದ್ದರು. ಬಳಿಕ ಅವರ ಮತಾಂತರ ಕ್ರಿಯೆ ಹೆಚ್ಚಿತು. ಧರ್ಮಾಂತರ ಪ್ರಕ್ರಿಯೆಯಿಂದಾಗಿ ದೇವಸ್ಥಾನಗಳನ್ನು ಹಾಳುಗೆಡಹಲು ಆರಂಭಿಸಿದರು. ಹಾಗಾಗಿ ಸಮುದಾಯದ ದೊಡ್ಡ ಗುಂಪು ಗೋವಾದಿಂದ ಪ್ರಯಾಣ ಮಾಡುತ್ತಾ ಇತ್ತ ಕಡೆ ಬಂದಾಗ ಸಮುದಾಯದವರಿಗೆ ಆಶ್ರಯ ಕೊಟ್ಟ ಮಹಾನ್ ತ್ಯಾಗಿ ರಾಣಿ ಅಬ್ಬಕ್ಕ ಎಂದರು.ಪೋರ್ಚುಗೀಸರ ವಿರುದ್ಧ ಹೋರಾಡಲು ಸನ್ನದ್ಧಳಾಗಿದ್ದ ಅಬ್ಬಕ್ಕ ಉಳ್ಳಾಲದಲ್ಲಿ ಜಿಎಸ್‍ಬಿ ಸಮುದಾಯಕ್ಕೆ ಆಶ್ರಯ ಕೊಟ್ಟು ಸಮುದಾಯದಲ್ಲಿರುವ ವಿವಿಧ ಪಂಗಡದವರಿಗೆ ಬೇರೆ ವೃತ್ತಿಯನ್ನು ಕಲ್ಪಿಸಿಕೊಟ್ಟಿದ್ದರು. ಪ್ರಸ್ತುತ ಬಂಟ್ವಾಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಬಾಳಿಗಾ ಎಂಬ ಸಮುದಾಯ ಅಬ್ಬಕ್ಕಳ ಸೈನ್ಯದಲ್ಲಿ ಸೇನಾ ನಾಯಕರಾಗಿ, ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ದೇಶಕ್ಕಾಗಿ ಸ್ವಾತಂತ್ರ್ಯಕ್ಕಾಗಿ ಈ ಮಣ್ಣಿಗಾಗಿ ಹೋರಾಡಿದ ಪ್ರಪ್ರಥಮ ಮಹಿಳೆ ಅಬ್ಬಕ್ಕ ಎಂಬುದು ಸತ್ಯ. ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ರಾಣಿ ಚೆನ್ನಮ್ಮ ಯಾರೇ ಇದ್ದರೂ ಮೊದಲ ಸ್ವಾತಂತ್ರ್ಯ ಸಂಗ್ರಾಮ ಶುರು ಆದದ್ದು ಅಬ್ಬಕ್ಕಳಿಂದ ಎಂದು ನುಡಿದರು.
ಅಬಕ್ಕ ಪ್ರಶಸ್ತಿ ಪಡೆದ ಸಾಹಿತಿ, ಸಮಾಜ ಸೇವಕಿ ಉರ್ಮಿಳಾ ರಮೇಶ್ ಕುಮಾರ್ ಮಾತನಾಡಿ ನನಗೆ ಪ್ರಶಸ್ತಿ ದೊರಕಲು ಕಾರಣಕರ್ತರಾದ ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರ ಆಡಳಿತ ಮಂಡಳಿ, ಲಲಿಲಾ ಭಜನಾ ಮಂಡಳಿ ಹಾಗೂ ಬಿಲ್ಲವ ಏಕೀಕಕರಣ ವೇದಿಕೆಗೆ ಅಭಿನಂದನೆಗಳು. ಹಾಗೆಯೇ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಪ್ರಶಸ್ತಿ ನೀಡಿ ಗೌರವಿಸಿದ ಸಂಬಂಧಿಸಿ ಕೆಲಸ ಮಾಡಿದ ಎಲ್ಲರಿಗೂ ಗೌರವ ಪ್ರಣಾಮಗಳು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಡಾ. ಸಂಧ್ಯಾ ಎಸ್. ಪೈ ಹಾಗೂ ಸಾಹಿತಿ, ಸಮಾಜ ಸೇವಕಿ ಉರ್ಮಿಳಾ ರಮೇಶ್ ಕುಮಾರ್ ಅವರಿಗೆ ಅಬ್ಬಕ್ಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯಕ್ ಹಾಗೂ ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು.
ಉತ್ಸವ ಸಮಿತಿ ಸದಸ್ಯರುಗಳಾದ ಪಿ.ಡಿ. ಶೆಟ್ಟಿ ಹಾಗೂ ನಮಿತಾ ಶ್ಯಾಂ ಪ್ರಶಸ್ತಿ ಪತ್ರ ವಾಚಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಉಪಸ್ಥಿತರಿದ್ದರು.
ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಮನೋಹರ್ ಪ್ರಸಾದ್ ಹಾಗೂ ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜೇಶ್ ಬಿ. ವಂದಿಸಿದರು.