Site icon Ullalavani

ಮೋದಿ ಮತ್ತೆ ಪ್ರಧಾನಿ ಆಗುವುದು ನಿಶ್ಚಿತ “ಮೇರಾ ಬೂತ್ ಸಬ್ಸೇ ಮಜ್ಬೂತ್”ನಲ್ಲಿ ಸಂತೋಷ್ ಕುಮಾರ್ ರೈ

UN NETWORKS

ಬೋಳಿಯಾರ್ : ಜನರಿಗೆ ಒಳ್ಳೆಯ ಕೆಲಸ ಮಾಡಿದ ವ್ಯಕ್ತಿಯನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಈಗ ವೃದ್ಧರಿಂದ ಮೊದಲ್ಗೊಂಡು ಬಾಲರವರೆಗೆ ಮೋದಿ ಎಂಬ ಹೆಸರು ಎಲ್ಲರ ನಾಲಗೆಯ ತುದಿಯಲ್ಲಿದ್ದು ಅವರೆಲ್ಲರಿಗೂ ಮೋದಿ ಅವರೇ ಮತ್ತೆ ಪ್ರಧಾನಿ ಆಗಬೇಕು ಎಂಬ ಬಯಕೆ ಇದೆ. ಜನಪ್ರಿಯ ಕಾರ್ಯಕ್ರಮಗಳು ಹಾಗೂ ಭಾರತದ ನೈಜ ಸಾಮರ್ಥ್ಯವನ್ನು ವಿಶ್ವಮಟ್ಟದಲ್ಲಿ ತೋರಿಸಿದ ಪರಿ ಮೋದಿ ಅವರು ಪ್ರಧಾನಿ ಆಗಿ ಮತ್ತೆ ಆಯ್ಕೆಯಾಗುವುದರಲ್ಲಿ ಸ್ವಲ್ಪವೂ ಸಂಶಯ ಬೇಡ ಎಂದು ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಹೇಳಿದರು.

ಬಿಜೆಪಿಯ “ಮೇರಾ ಬೂತ್ ಸಬ್ಸೇ ಮಜ್ಬೂತ್” ಕಾರ್ಯಕ್ರಮದಡಿಯಲ್ಲಿ ಬೋಳಿಯಾರಿನ ಅಮರದೀಪ್ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿಜೆಪಿ ಮಂಗಳೂರು ಕ್ಷೇತ್ರ ಚುನಾವಣಾ ಸಂಚಾಲಕ ಬೂಡಿಯಾರ್ ರಾಧಾಕೃಷ್ಣ ಮಂಗಳೂರು ಕ್ಷೇತ್ರದಲ್ಲಿರುವ ಬಿಜೆಪಿಯ ಮೂರು ಮಹಾಶಕ್ತಿ ಕೇಂದ್ರದಲ್ಲಿಈಗಾಗಲೇ ಚುನಾವಣೆ ಕಚೇರಿ ತೆರೆಯಲಾಗಿದೆ. ಚುನಾವಣೆ ಘೋಷಣೆ ಆಗಿ ಚುನಾವಣೆ ನಡೆಯುವ ಸಮೀಪದ ದಿನಗಳಲ್ಲಿ ಪಕ್ಷದ ಕಾರ್ಯಕ್ರಮ ನಡೆಸುವುದು ಕಷ್ಟ ಸಾಧ್ಯವಾಗಿದೆ. ಹಾಗಾಗಿ ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪೇಜ್ ಪ್ರಮುಖ್ ಮಾಡಿದಂತೆ ಈ ಬಾರಿಯೂ ಮುಂದುವರಿಯಲಿದ್ದು ಬಿಜೆಪಿ ಕಾರ್ಯಕರ್ತರು ಮತದಾರರ ಬಳಿಗೆ ತೆರಳುವಾಗ ಪ್ರಧಾನಿ ಮೋದಿ ಅವರು ಜಾರಿಗೆ ತಂದ ಯೋಜನೆ ಹಾಗೂ ದೇಶ ರಕ್ಷಣೆಯ ಕಾರ್ಯವೈಖರಿ ಉಲ್ಲೇಖಿಸಬೇಕು ಎಂದು ಹೇಳಿದರು.ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಮಾತನಾಡಿ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಸಿಗುತ್ತಿರುವ ಮನ್ನಣೆ ನಿಜಕ್ಕೂ ಬಣ್ಣಿಸಲಸಾಧ್ಯ. ಬಲಾಢ್ಯ ರಾಷ್ಟ್ರಗಳು ಬಲಾಢ್ಯ ರಾಷ್ಟ್ರಗಳನ್ನೇ ಬೆಂಬಲಿಸುವುದು ಸಾಮಾನ್ಯ. ಭಯೋತ್ಪಾದನೆಗೆ ಆಶ್ರಯ ಕೊಡುವ ಪಾಕಿಸ್ತಾನಕ್ಕೆ ಕಪ್ಪು ಪಟ್ಟಿಗೆ ಸೇರಿಸುವಂತೆ ವಿಶ್ವ ಸಂಸ್ಥೆಗೆ ಠರಾವು ಕಳುಹಿಸಲು ಬಲಾಢ್ಯ ರಾಷ್ಟ್ರಗಳು ಭಾರತದ ಪರವಾಗಿ ನಿಂತಿರುವುದು ಭಾರತದ ಬಲಾಢ್ಯತೆ ಹಾಗೂ ನಮ್ಮ ಪ್ರಧಾನಿಯ ಆಡಳಿತ ವೈಖರಿಗೆ ಸಿಕ್ಕ ಗೌರವ ಎಂದು ನುಡಿದರು.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಕೇಮದ್ರ ಸರಕಾರ ಮೀನುಗಾರಿಕೆ ಸಚಿವಾಲಯವನ್ನು ಆರಂಭಿಸುವ ಮೂಲಕ ಮೀನುಗಾರರ ಕಷ್ಟಕ್ಕೆ ಸ್ಪಂದಿಸಲಾಗಿದೆ. ಕಿಸಾನ್ ಸಮ್ಮಾನ್ ಕಾರ್ಯಕ್ರಮದಡಿಯಲ್ಲಿ ರೈತರ ಖಾತೆಗೆ ಹಣ ಸಂದಾಯ ಮಾಡುವ ಮೂಲಕ ರೈತರ ಬದುಕನ್ನು ಹಸನು ಮಾಡುವ ಪ್ರಯತ್ನ ನಡೆದಿದೆ. ವಾಜಪೇಯಿ ಆಡಳಿತದ ಬಳಿಕ ಸಿಲಿಂಡರ್ ಯಥೇಚ್ಛವಾಗಿ ಸಿಕ್ಕಿದ್ದು ಮೋದಿ ಅವರ ಆಡಳಿತದಲ್ಲಿ. ಆನ್‍ಲೈನ್ ಬುಕ್ಕಿಂಗ್ ಮೂಲಕ ಸಿಲಿಂಡರ್ ವಿತರಣೆ ಆಗುತ್ತಿದೆ. ಆಯುಷ್ಮಾನ್ ಯೋಜನೆ ಮೂಲಕ ಬಿಪಿಎಲ್, ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಸದಸ್ಯರ ಕಣ್ಣೀರು ಒರೆಸುವ ಕೆಲಸ ಮೋದಿ ಮಾಡುತ್ತಿದ್ದು ಮೋದಿ ಅವರ ಯೋಜನೆ ಮನೆ ಮನೆಗೆ ತಲುಪಿಸುವ ಕಾರ್ಯ ಕಾರ್ಯಕರ್ತರಿಂದ ನಡೆಯಬೇಕು ಎಂದು ಹೇಳಿದರು.ಪುದು ಜಿಲ್ಲಾ ಪಂಚಾಯಿತಿ ಕ್ಷೇತ್ರ ಸದಸ್ಯ ರವೀಂದ್ರ ಕಂಬಳಿ ಹಾಗೂ ತಾಲೂಕು ಪಂಚಾಯಿತಿ ಸದಸ್ಯ ನವೀನ್ ಪಾದಲ್ಪಾಡಿ ಉಪಸ್ಥಿತರಿದ್ದರು. ಬಿಜೆಪಿ ಮುಖಂಡ ಟಿ.ಜಿ. ರಾಜಾರಾಮ ಭಟ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ಅವರ ಸಂವಾದ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.

Exit mobile version