Site icon Ullalavani

ಕೊಣಾಜೆ : ಮಂಗಳೂರು ವಿವಿಯಲ್ಲಿ ಬ್ಯಾರಿ ಅಧ್ಯಯನ ಪೀಠ ಉದ್ಘಾಟನೆ

UN NETWORKS

ಕೊಣಾಜೆ: ತುಳು, ಬ್ಯಾರಿ, ಕೊಂಕಣಿ ಭಾಷೆಗಳಿಗೆ ಲಿಪಿ ಇಲ್ಲದಿದ್ದರೂ ಆ ಸಮುದಾಯದ ಜನರ ಸಂಸ್ಕೃತಿ, ಆಚರಣೆ ಆಚಾರ ವಿಚಾರಗಳಿಂದ ಅದು ಶ್ರೀಮಂತವೆನಿಸಿದೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬ್ಯಾರಿ ಅಧ್ಯಯನ ಪೀಠ ಸ್ಥಾಪನೆಯಾಗಿರುವ ಬ್ಯಾರಿ ಭಾಷೆ, ಸಂಸ್ಕೃತಿ ಹಾಗೂ ಸಮುದಾಯದ ಬಗ್ಗೆ ಅಧ್ಯಯನಗಳಿಗೆ ಅವಕಾಶ ದೊರಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರು ಅಭಿಪ್ರಾಯಪಟ್ಟರು.

ಅವರು ಮಂಗಳೂರು ವಿಶ್ವವಿದ್ಯಾಲಯ ಮಂಗಳಾ ಸಭಾಂಗಣದಲ್ಲಿ ಗುರುವಾರ ಬ್ಯಾರಿ ಅಧ್ಯಯನ ಪೀಠದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬ್ಯಾರಿ ಸಂಸ್ಕೃತಿ ವಿಶಿಷ್ಟ್ಯವಾದುದು. ಈ ಸಮುದಾಯದ ಇತಿಹಾಸವನ್ನು ನೋಡಿದರೆ ಶ್ರಮ ಸಂಸ್ಕೃತಿಯೊಂದಿಗೆ ಬೆಳೆದು ಬಂದಿರುವುದನ್ನು ಗಮನಿಸಬಹುದು. ಬ್ಯಾರಿ ಸಮುದಾಯ ಯಾವುದೇ ಕೋಮುವಾದಿ ಸಮುದಾಯವಲ್ಲ, ಶಾಂತಿ, ಸೌಹಾರ್ದತೆಯೊಂದಿಗೆ ಸಮಾಜದ ಎಲ್ಲಾ ಜನರೊಂದಿಗೆ ಬೆರೆತು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ಸಮುದಾಯವಾಗಿದೆ ಎಂದರು.ಮಂಗಳೂರು ವಿಶ್ವವಿದ್ಯಾಲಯದಲ್ಲಿ ಈಗಾಗಲೇ ತುಳು ಅಧ್ಯಯನ ಪೀಠ, ಕೊಡವ ಅಧ್ಯಯನ ಪೀಠ, ಕೊಂಕಣಿ ಪೀಠ ಸೇರಿದಂತೆ ಹಲವು ಪೀಠಗಳಿದ್ದು ಇದರೊಂದಿಗೆ ಈ ಬ್ಯಾರಿ ಅಧ್ಯಯನ ಪೀಠ ಕೂಡಾ ಸ್ಥಾಪನೆಗೊಂಡು ಅಧ್ಯಯನದ ಅವಕಾಶಗಳು ಹೆಚ್ಚಿವೆ. ವಿವಿಯಲ್ಲಿರುವ ಬೇರೆ ಬೇರೆ ಪೀಠಗಳಲ್ಲಿ ಅನುದಾನವೂ ಕೂಡಾ ಬೇರೆ ಬೇರೆ ರೀತಿಯಲ್ಲಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಪೀಠಗಳು ಒಂದೇ ಸೂರಿನಡಿ ಬಂದು, ಎಲ್ಲಾ ಪೀಠಗಳಿಗೂ ಒಂದೇ ರೀತಿಯ ಅನುದಾನ ಸಿಗುವಂತಾಗಬೇಕಾಗಿದ್ದು ಈ ನಿಟ್ಟಿನಲ್ಲಿ ಪ್ರಯತ್ನಿಸೋಣ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಕಿಶೋರಿ ನಾಯಕ್ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಕರಂಬಾರು ಮಹಮ್ಮದ್, ಮಂಗಳೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಸುರೇಂದ್ರರಾವ್, ಕರ್ನಾಟಕ ತುಳು/ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಬಿ.ಚಂದ್ರಹಾಸ್ ರೈ, ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಮಹಮ್ಮದ್ ಮೋನು, ಸಲಹಾ ಸಮಿತಿ ಸದಸ್ಯ ಇಬ್ರಾಹಿಂ ಕೋಡಿಜಾಲ್, ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಎ.ಮಹಮ್ಮದ್ ಹನೀಫ್, ಪೀಠಗಳ ಸಂಯೋಜಕರಾದ ಪ್ರಭಾಕರ ನೀರುಮಾರ್ಗ ಮೊದಲಾದವರು ಉಪಸ್ಥಿತರಿದ್ದರು. ಬ್ಯಾರಿ ಅಧ್ಯಯನ ಪೀಠದ ಸಂಯೋಜಕರಾದ ಪ್ರೊ.ಇಸ್ಮಾಯಿಲ್ ಅವರು ಪೀಠದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿ ಕುಲಸಚಿವ ಪ್ರೊ.ಎ.ಎಂ.ಖಾನ್ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.

Exit mobile version