Site icon Ullalavani

ದೇರಳಕಟ್ಟೆ : ಕ್ವಿಜ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ಅಧ್ಯಾಪಕ ಹಿದಾಯತುಲ್ಲಾ ಅವರಿಗೆ ಸನ್ಮಾನ

UN NETWORKS

ದೇರಳಕಟ್ಟೆ: ಜಮಾಅತೆ ಇಸ್ಲಾಮಿ ಹಿಂದ್ ದೇರಳಕಟ್ಟೆ ವಲಯ ಇದರ ಆಶ್ರಯದಲ್ಲಿ, ಸನ್ಮಾರ್ಗ ಪತ್ರಿಕೆ ನಡೆಸಿದ ಸೀರತ್ ಕ್ವಿಜ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ಅಧ್ಯಾಪಕ ಹಿದಾಯತುಲ್ಲಾ ಅವರಿಗೆ ಸನ್ಮಾನ ಕಾರ್ಯಕ್ರಮ ದೇರಳಕಟ್ಟೆ ಚಿಂತನಾ ಗ್ರಂಥಾಲಯದಲ್ಲಿ ಇತ್ತೀಚೆಗೆ ನಡೆಯಿತು.

ಧಾರ್ಮಿಕ ಆಚಾರ-ವಿಚಾರಗಳ ಬಗ್ಗೆ ಜನರಿಗೆ ತಿಳುವಳಿಕೆ ಬರಬೇಕು, ಜನರಿಗೆ ಓದುವ ಅಭ್ಯಾಸ ಬೆಳೆಯಬೇಕು ಎಂಬ ಸದುದ್ದೇಶದಿಂದ ಮಂಗಳೂರು ಶಾಂತಿ ಪ್ರಕಾಶನದ ಸನ್ಮಾರ್ಗ ವಾರ ಪತ್ರಿಕೆ ಬೇರೆ ಬೇರೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದರ ಅಂಗವಾಗಿ ನವಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಸೀರತ್ ಕ್ವಿಜ್ ಸ್ಪರ್ಧೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ, ವೃತ್ತಿಯಲ್ಲಿ ಅಧ್ಯಾಪಕರಾಗಿ,ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿಸುತ್ತಿರುವ ಹಿದಾಯತುಲ್ಲರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಚಿಂತನಾ ಗ್ರಂಥಾಲಯದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ದೇರಳಕಟ್ಟೆ ವಲಯ ನಡೆಸಿತು. ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಹಿದಾಯತುಲ್ಲಾರನ್ನು ಸನ್ಮಾನಿಸಿದರು. ಓದುವ ಅಭ್ಯಾಸವನ್ನು ಬೆಳೆಸಬೇಕು ಎನ್ನುವ ಸದುದ್ದೇಶದಿಂದ ನಡೆಸಿದ ಕ್ವಿಜ್ ಸ್ಪರ್ಧೆಯಲ್ಲಿ ಅಧ್ಯಾಪಕರು ಗೆದ್ದದ್ದು ನಿಜವಾಗಿಯೂ ಅಭಿನಂದನಾ ವಿಷಯ. ಓದುವ ಅಭ್ಯಾಸ ಬೆಳೆಸಲು ಮಕ್ಕಳಿಗೆ ಅವರು ಮಾದರಿಯಾಗಿದ್ದಾರೆ. ಇಂತಹ ಕ್ವಿಜ್ ಸ್ಪರ್ಧೆಯನ್ನು ನಡೆಸಿದ ಸನ್ಮಾರ್ಗ ಪತ್ರಿಕೆಗೂ, ಗೆದ್ದ ಅಧ್ಯಾಪಕರನ್ನು ಸನ್ಮಾನಿಸಿದ ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಗೂ, ಅದೇ ರೀತಿ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರಥಮ ಬಹುಮಾನ ಪಡೆದ ಹಿದಾಯತುಲ್ಲಾ ಮಾಸ್ಟರ್ ಅವರಿಗೂ ಅಭಿನಂದನೆ ಸಲ್ಲಿಸಿದ ವಿದ್ಯಾಧರ್ ಶೆಟ್ಟಿ ಅವರು ಮಕ್ಕಳಿಗೆ ಓದುವ ಅಭ್ಯಾಸ ಬೆಳೆಸಲಿಕ್ಕಾಗಿ ಮನೆಯವರು ಪ್ರಯತ್ನ ಮಾಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸನ್ಮಾರ್ಗ ವಾರ ಪತ್ರಿಕೆ ಸಂಪಾದಕ ಅಬ್ದುಲ್ ಖಾದರ್ ಕುಕ್ಕಿಲ, ಧಾರ್ಮಿಕ ವಿಚಾರಧಾರೆಗೆ ಒತ್ತು ನೀಡಿ ಓದುವ ವರ್ಗವನ್ನು ಬೆಳೆಸುವ ಪ್ರಯತ್ನ ಪತ್ರಿಕೆಯಿಂದ ನಿರಂತರ ಆಗುತ್ತಿದೆ. ಇದಕ್ಕೆ ಸ್ಪಂದಿಸಿ, ಕಠಿಣ ಸವಾಲಿಗೆ ಉತ್ತರಿಸಿ ಕ್ವಿಜ್‍ನಲ್ಲಿ ಗೆದ್ದ ಹಿದಾಯತುಲ್ಲ ಅವರಿಗೆ ಅಭಿನಂದನೆ ಸಲ್ಲಿಸಿ, ಸ್ಪರ್ಧೆಯಲ್ಲಿ ಭಾಗವಹಿಸಿದ, ಪ್ರೋತ್ಸಾಹ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿದಾಯತುಲ್ಲ ಅವರು ತಾನು ಪ್ರತಿ ಸ್ಪರ್ಧೆಯಲ್ಲಿ ಭಾಗವಹಿಸುತ್ತೇನೆ. ಕೆಲವೊಂದು ಸ್ಪರ್ಧೆಯಲ್ಲಿ ಬಹುಮಾನ ಸಿಕ್ಕಿದೆ. ಈ ಬಾರಿ ಮೊದಲ ಬಹುಮಾನ ಸಿಕ್ಕಿದ ಕಾರಣ ಸಂತೋಷವಾಗಿದೆ ಎಂದು, ಸನ್ಮಾನ ಮಾಡಿದ ಜಮಾಅತೆ ಇಸ್ಲಾಮಿ ಹಿಂದ್ ಸದಸ್ಯಯರಿಗೆ ವಂದನೆ ಸಲ್ಲಿಸಿದರು. ಒಳ್ಳೆಯ ಉದ್ದೇಶದಿಂದ ನಡೆಸಿದ ಸನ್ಮಾರ್ಗ ವಾರ ಪತ್ರಿಕೆಯ ಕ್ವಿಜ್ ಕಾರ್ಯಕ್ರಮ, ಇದರಲ್ಲಿ ಗೆದ್ದ ತಮ್ಮ ಪರಿಸರದ ಹಿದಾಯತುಲ್ಲಾರಿಗೆ ಅಭಿನಂದನೆ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿ ಮಾಜಿ ಅಧ್ಯಕ್ಷ ಹಾಜಿ ಅಬೂಬಕರ್ ಶುಭ ಹಾರೈಸಿದರು. ಮೆಹರೂಫ್ ದೇರಳಕಟ್ಟೆ ಕಿರಾಅತ್ ಪಠಿಸಿದರು. ಎಸ್‍ಐಒ ಜಿಲ್ಲಾಧ್ಯಕ್ಷ ನಿಯಾಝ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಘಟಕದ ಅಧ್ಯಕ್ಷ ಅಬ್ದುಲ್ ಕರೀಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಘಟಕದ ಉಪಾಧ್ಯಕ್ಷ ಅಬ್ದುಲ್ ರಹೀಂ ದೇರಳಕಟ್ಟೆ, ದೇರಳಕಟ್ಟೆ ವಲಯ ಸಂಚಾಲಕ ಡಾ ಅಬೂಸಾಲಿಹ್ ಮೊದಲಾದ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Exit mobile version