Site icon Ullalavani

ಯೇನೆಪೊಯ : ಯೇನೆಪೊಯ ವಿವಿಯಲ್ಲಿ ಕೆಎಚ್‍ಎಸ್‍ಎಲ್‍ಎ -2019 ಉದ್ಘಾಟನೆ

UN NETWORKS

ಯೇನೆಪೊಯ: ಕೆಲವು ದಶಕಗಳ ಹಿಂದೆ ವೈದ್ಯಕೀಯ ವಿದ್ಯಾರ್ಥಿಗಳು ಜ್ಞಾನ ಸಂಪಾದನೆಗಾಗಿ ಸಿನಿಮಾ, ಸಿಡಿ, ವಿಡಿಯೋ ಮೂಲಕ ಅಧ್ಯಯನ ಮಾಡುತ್ತಿದ್ದು ನಂತರ ಗ್ರಂಥಾಲಯ ಬಳಕೆಗೆ ಬಂತು. ಆ ದಿನಗಳಲ್ಲಿ ಗ್ರಂಥಾಲಯಗಳ ಸಂಖ್ಯೆ ಹಾಗೂ ಕಡಿಮೆ ಪುಸ್ತಕ ಸಂಗ್ರಹವಿದ್ದರೂ ಅದನ್ನೇ ಅವಲಂಬಿಸಿದ್ದರು. ಕೆಲವೇ ಪುಸ್ತಕಗಳನ್ನು ಓದಲು ಜನರು ಸಾಕಷ್ಟು ಸಮಯ ಕಾಯುವಂತಹ ಪರಿಸ್ಥಿತಿ ಇತ್ತು. ಹಾಗಿದ್ದರೂ ಓದುವ ಆಸಕ್ತಿ ಎಲ್ಲೂ ಕುಂಠಿತವಾಗಿರಲಿಲ್ಲ ಎಂದು ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಡಾ. ಸಚ್ಚಿದಾನಂದ ಅಭಿಪ್ರಾಯಪಟ್ಟರು.

ಕರ್ನಾಟಕ ಆರೋಗ್ಯ ವಿಜ್ಞಾನಗಳ ಗ್ರಂಥಾಲಯ ಎಸೋಸಿಯೇಶನ್(ಕೆಎಚ್‍ಎಸ್‍ಎಲ್‍ಎ) ಹಾಗೂ ದೇರಳಕಟ್ಟೆಯ ಯೇನೆಪೊಯ ಪರಿಗಣಿಸಲ್ಪಟ್ಟ ವಿವಿ ಆಶ್ರಯದಲ್ಲಿ ಯೇನೆಪೊಯ ವಿವಿ ಒಳಾಂಗಣ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕರ್ನಾಟಕ ಆರೋಗ್ಯ ವಿಜ್ಞಾನಗಳ ಗ್ರಂಥಾಲಯ ಎಸೋಸಿಯೇಶನ್‍ನ 11ನೆಯ ವಾರ್ಷಿಕ ಸಮ್ಮೇಳನ ಕೆಎಚ್‍ಎಸ್‍ಎಲ್‍ಎ – 2019ಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.ಗ್ರಂಥಾಲಯ ಜಗತ್ತಿನಲ್ಲಿ ಅಭೂತಪೂರ್ವವಾದ ಬದಲಾವಣೆಗಳಾಗಿದೆ. ಮೊಬೈಲ್ ಆ್ಯಪ್‍ಗಳ ಮೂಲಕ ಸ್ವಂತ ಜ್ಞಾನ ಹೆಚ್ಚಿಸಲು ಸಾಧ್ಯವಾಗಿದೆ. ಪ್ರಸ್ತುತ ದಿನಗಳಲ್ಲಿ ಮೆಡಿಕಲ್ ಹಾಗೂ ದಂತ ವೈದ್ಯಕೀಯ ಕಾಲೇಜಿನಲ್ಲಿ ಗ್ರಂಥಾಲಯಗಳನ್ನು ಸುಸಜ್ಜಿತವಾಗಿ ವ್ಯವಸ್ಥೆಗೊಳಿಸಲಾಗುತ್ತಿರುವುದು ನಿಜಕ್ಕೂ ಶ್ಲಾಘನೀಯ. ಹಾಗೆಯೇ ಬೆಂಗಳೂರಿನಲ್ಲಿ ಶೀಘ್ರದಲ್ಲಿ ಸೆಂಟರ್ ಫಾರ್ ಇನ್‍ಪಾರ್ಮೇಟಿಕ್ಸ್ ಸ್ಥಾಪನೆಯಾಗಲಿದ್ದು ಅದಕ್ಕೆ ಬೇಕಾದ ತಜ್ಞ ಬರಹಗಾರರ ಹಾಗೂ ಸಂಶೋಧಕರ ಆಯ್ದ ಪುಸ್ತಕಗಳನ್ನು ಸಂಗ್ರಹಿಸುವ ಕೆಲಸ ಆರಂಭವಾಗಿದೆ. ಪ್ರತಿಯೊಂದು ವಿವಿಗಳಲ್ಲಿ ಗ್ರಂಥಾಲಯ ವಿಭಾಗ, ಪಿಜಿ ಡಿಪ್ಲೊಮಾ, ಪಿಎಚ್‍ಡಿ ಆರಂಭವಾಗಲಿದ್ದು ಆ ಮೂಲಕ ಸಂಶೋಧನೆಗಳಿಗೆ ಹೆಚ್ಚು ಆದ್ಯತೆ ನೀಡಬೇಕಿದೆ ಎಂದು ನುಡಿದರು.

ದಿಕ್ಸೂಚಿ ಭಾಷಣ ಮಾಡಿದ ಬೆಂಗಳೂರು ನಿಮ್ಹಾನ್ಸ್‍ನ ಗ್ರಂಥಾಲಯ ಮತ್ತು ಮಾಹಿತಿ ವಿಭಾಗದ ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್ .ಎಸ್. ಸಿದ್ದರಾಮಲ್ಲಯ್ಯ ಗ್ರಂಥಾಲಯ ಎಂಬುದು ಒಂದು ಜ್ಞಾನ ಭಂಡಾರ. ಪುಸ್ತಕ ಒದುವ ಅಭ್ಯಾಸ ಒಳ್ಳೆಯದು. ಪುಸ್ತಕ ಓದುವ ಅಭ್ಯಾಸವಿದ್ದವರು ಹೆಚ್ಚುವರಿಯಾಗಿ ಒಬ್ಬ ಮಿತ್ರನನ್ನು ಸಂಪಾದಿಸಿದಂತೆ. ಜ್ಞಾನಾಕ್ಕಾಗಿ ಯಾವುದೇ ವಿಷಯ ಶೋಧನೆಗೆ ಗ್ರಂಥಾಲಯದ ಬದಲಿಗೆ ಗೂಗಲ್‍ಗೆ ಮೊರೆ ಹೋಗುತ್ತಿದ್ದಾರೆ ಎಂದು ನುಡಿದರು.ಯೇನೆಪೊಯ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಂ.ವಿಜಯ ಕುಮಾರ್ ಅದ್ಯಕ್ಷತೆ ವಹಿಸಿದ್ದರು.ಯೇನೆಪೊಯ ವಿವಿ ಸಹ ಕುಲಪತಿ ಪ್ರೊ. ಸಿ.ವಿ. ರಘುವೀರ್ ಭಾಗವಹಿದ್ದರು.ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ಮುಖ್ಯ ಗ್ರಂಥಪಾಲಕ ಬಸವಲಿಂಗಪ್ಪ ಎಸ್.ಕೆ. ಅವರನ್ನು ಸನ್ಮಾನಿಸಲಾಯಿತು.

ಕೆಎಚ್‍ಎಸ್‍ಎಲ್‍ಎ-2019 ಸಂಯೋಜಕ ಡಾ. ಕೆ.ಎಸ್. ಗಂಗಾಧರ್ ಸೋಮಯಾಜಿ ಸ್ವಾಗತಿಸಿದರು. ಕೆಎಚ್‍ಎಸ್‍ಎಲ್‍ಎ ಅಧ್ಯಕ್ಷ ಡಾ.ಪಿ.ಎಸ್. ಮಹೇಶ್ ಪ್ರಸ್ತಾವನೆಗೈದರು. ಕಾರ್ಯದರ್ಶಿ ಡಾ. ವೆಂಕಟೇಶ್ ವರದಿ ವಾಚಿಸಿದರು. ಡಾ. ರೋಶೆಲ್ ಟೆಲ್ಲಿಸ್ ಮತ್ತು ಡಾ. ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಮ್ಮೇಳನ ಆಯೋಜನ ಸಮಿತಿ ಕಾರ್ಯದರ್ಶಿ ಡಾ. ಮಮತಾ ಪ್ರಮೋದ್ ಕುಮಾರ್ ವಂದಿಸಿದರು.

Exit mobile version