Site icon Ullalavani

ಕೋಟೆಕಾರು: ದಂಪತಿ ಆತ್ಮಹತ್ಯೆ

UN NETWORKS

ಕೋಟೆಕಾರು: ದಂಪತಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರು ಬೀರಿ ಸಮೀಪ ಮಂಗಳವಾರ ಬೆಳಕಿಗೆ ಬಂದಿದೆ.

ದೇವರಾಜ್ (70) ಮತ್ತು ವಸಂತಿ (58) ಆತ್ಮಹತ್ಯೆ ಮಾಡಿಕೊಂಡವರು. ಮಂಗಳವಾರ ಬೆಳಿಗ್ಗೆ ವೆಂಕಪ್ಪ ಅನ್ನುವವರು ಹಾಲು ನೀಡಲೆಂದು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮೂಲತ: ಮಂಜೇಶ್ವರ ಮೂಲದವರಾಗಿರುವ ದಂಪತಿ ಸುಮಾರು 20 ವರ್ಷಗಳಿಂದ ಬೀರಿಯಲ್ಲಿ ಮನೆ ನಿರ್ಮಿಸಿ ವಾಸಿಸುತ್ತಿದ್ದರು. ಮಕ್ಕಳಿರದ ಕೊರಗಿನಲ್ಲಿದ್ದ ಇಬ್ಬರೂ ಅನಾರೋಗ್ಯದಿಂದ ಬಳಲುತ್ತಿದ್ದರು. ರಾತ್ರಿ ಊಟ ಮುಗಿಸಿ ಇಬ್ಬರು ಮನೆ ಚಾವಡಿಯಲ್ಲೇ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ದೇವರಾಜ್ ಅವರು ಮಂಗಳೂರು ಆಕಾಶವಾಣಿಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.

ಶ್ವಾನ ಪ್ರೀತಿ : ಮಕ್ಕಳಿಲ್ಲದಿದ್ದರೂ ದಂಪತಿ ಶ್ವಾನಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ನಾಯಿ ಮನೆಯೊಳಗೆ ದಂಪತಿ ಜತೆಗೆ ಹೆಚ್ಚಾಗಿ ಇರುತ್ತಿತ್ತು. ಮನೆ ಸಮೀಪ ಯಾರದರೂ ಗೇಟಿನ ಹೊರಗಡೆ ನಿಂತರೂ ನಾಯಿ ನಿರಂತರವಾಗಿ ಬೊಗಳುತಿತ್ತು. ಆದರೆ ದಂಪತಿ ಆತ್ಮಹತ್ಯೆ ಬಳಿಕ ಗೂಡಿನಲ್ಲಿದ್ದ ನಾಯಿ ಕೂಡಾ ಯಜಮಾನರ ಅಗಲುವಿಕೆಯಿಂದ ಮೂಕವಾಗಿ ರೋಧಿಸುವಂತಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಮನೆ ಆವರಣದಲ್ಲಿ ಜನ ಜಮಾಯಿಸಿದ್ದರೂ ತನ್ನಷ್ಟಕ್ಕೇ ಮಲಗಿತ್ತು.

ಅಣ್ಣನ ಮಗಳಿಗೆ ಆಸ್ತಿ : ತಮ್ಮ ಮನೆ ಹಾಗೂ ಜಾಗವನ್ನು ಮೃತ ವಸಂತಿ ಅವರ ಅಣ್ಣನ ಮಗಳು ಶ್ವೇತಾ ಎಂಬವರಿಗೆ ನೀಡುವಂತೆಯೂ ಡೆತ್ ನೋಟಲ್ಲಿ ಬರೆದಿಟ್ಟಿದ್ದಾರೆ. ಅಲ್ಲದೆ ಶ್ವಾನ ಮತ್ತು ಸಾಕು ಪ್ರಾಣಿಗಳನ್ನು ಅವರಲ್ಲೇ ಸಲಹುವಂತೆ ಮನವಿ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಎಸಿಪಿ ರಾಮರಾವ್, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ, ಎಸ್.ಐ ವಿನಾಯಕ ತೋರಗಲ್ ಭೇಟಿ ನೀಡಿ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version