UN NETWORKS
ತಲಪಾಡಿ: ಶೈಕ್ಷಣಿಕ ವರ್ಷ 2018-19ನೇ ಸಾಲಿನ ಕೇಂದ್ರ ಪಠ್ಯಕ್ರಮದ ಹತ್ತನೇ ತರಗತಿಯ ಪರೀಕ್ಷೆಯ ಮೌಲ್ಯಮಾಪನ ಕಾರ್ಯದ ರೂಪುರೇಷಗಳನ್ನು ಮೌಲ್ಯಮಾಪಕರಿಗೆ ಪರಿಚಯಿಸುವ ಸಲುವಾಗಿ ಚೆನೈ ನ ಸಿ.ಬಿ.ಎಸ್.ಸಿ ಬೋರ್ಡ್‍ನ ವತಿಯಿಂದ ಒಂದು ದಿನದ ಅಣುಕು ಮೌಲ್ಯಮಾಪನ ಕಾರ್ಯಗಾರ ಕರಾವಳಿ ಸಹೋದಯ ಒಕ್ಕೂಟದ ಸಹಯೋಗದೊಂದಿಗೆ, ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‍ನಲ್ಲಿ ನಡೆಯಿತು.
ಪ್ರಸಕ್ತ ಶೈಕ್ಷಣಿಕ ವರ್ಷದ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಮೌಲ್ಯಮಾಪನದ ಹಲವು ಸಂದೇಹಗಳನ್ನು ಪರಿಹರಿಸಲಾಯಿತು. ಪ್ರಸಕ್ತ ವರ್ಷದಲ್ಲಿ ಮೌಲ್ಯಮಾಪನದಲ್ಲಿ ಮಾಡಲಾದ ಕೆಲವೊಂದು ಬದಲಾವಣೆಗಳನ್ನು ವೀಡಿಯೋ ಪ್ರದರ್ಶನದ ಮೂಲಕ ಶಿಕ್ಷಕರಿಗೆ ತಿಳಿಸಲಾಯಿತು. ದೆಹಲಿಯ ಸಿ.ಬಿ.ಎಸ್.ಸಿ ಬೋರ್ಡ್‍ನಲ್ಲಿ ಆಯೋಜಿಸಲಾದ ‘ಪರೀಕ್ಷೆ ಮತ್ತು ಮೌಲ್ಯಮಾಪನ’ ಕಾರ್ಯದ ವಿಚಾರ ಸಂಕಿರಣದ ನೇರ ಸಂವಾದ ಕಾರ್ಯಕ್ರಮವನ್ನು ಪ್ರದರ್ಶಿಸಲಾಯಿತು. ಕೇಂದ್ರೀಯ ಪಠ್ಯಕ್ರಮವನ್ನು ಅನುಸರಿಸುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲ ಶಾಲೆಯ ಪ್ರಾಂಶುಪಾಲರುಗಳು ಮತ್ತು ಶಿಕ್ಷಕರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.
ಡಾ. ರಾಮಣ್ಣ ಶೆಟ್ಟಿ ಶಾಲೆಯ ಪ್ರಿನ್ಸಿಪಾಲ್ ಶ್ರೀಲತಾ ರಾವ್ ಸ್ವಾಗತಿಸಿದರು. ವಿದ್ಯಾರ್ಥಿ ಸಂಯೋಜಕಿ ದೀಪಾ ಶಂಕರ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಪ್ರಿನ್ಸಿಪಾಲ್ ಸುಷ್ಮಾ ದಿನಕರ್ ವಂದಿಸಿದರು.