Site icon Ullalavani

ಖಾದರ್ -ಲೋಬೋ ಜಾತಿಪ್ರೇಮದಿಂದ ತೊಕ್ಕೊಟ್ಟು-ಪಂಪ್ ವೆಲ್ ಫ್ಲೈಓವರ್ ವಿಳಂಬವಾಗಿದೆ: ಸಂಸದ ನಳಿನ್ ಕಟೀಲ್

UN NETWORKS

ಉಳ್ಳಾಲ: ಪಂಪ್‍ವೆಲ್ ಮತ್ತು ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಮಾಜಿ ಶಾಸಕ ಜೆ.ಆರ್ ಲೋಬೊ ಮತ್ತು ಸಚಿವ ಯು.ಟಿ.ಖಾದರ್ ಅವರಲ್ಲಿರುವ ಜಾತಿ ಪ್ರೇಮವೇ ಕಾರಣವಾಗಿದೆ. ತಮ್ಮ ಜಾತಿ ಬಾಂಧವರ ಕಟ್ಟಡಗಳನ್ನು ಉಳಿಸುವ ಉದ್ದೇಶದಿಂದ ಕಾಮಗಾರಿ ವಿಳಂಬವಾಗುವಂತೆ ಮಾಡಿ ಇದೀಗ ತನ್ನ ಮೇಲೆ ತೂಗುಗತ್ತಿ ಇಡಲಾಗುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಭರವಸೆಯ ಮಾತುಗಳನ್ನಾಡಿದರು.

ಬಿಜೆಪಿಯ ಕೋಟೆಕಾರು ಶಕ್ತಿ ಕೇಂದ್ರದ ಆಶ್ರಯದಲ್ಲಿ ಕೋಟೆಕಾರಿನಲ್ಲಿ ಭಾನುವಾರ ನಡೆದ “ಮತ್ತೊಮ್ಮೆ ನರೇಂದ್ರ ಮೋದಿ” ಅಂಬಿಕಾರೋಡ್ ನಿಂದ ಕೋಟೆಕಾರು ತನಕ ನಡೆದ ಬೃಹತ್ ಜನಬೆಂಬಲ ಯಾತ್ರೆ ಹಾಗೂ ಚುನಾವಣಾ ಕಾರ್ಯಾಲಯ ಉದ್ಘಾಟನೆ ಬಳಿಕ ಕೋಟೆಕಾರು ಜಂಕ್ಷನ್ ನಲ್ಲಿ ನಡೆದ ಸಮಾವೇಶದಲ್ಲಿ ಪುಲ್ವಾಮದಲ್ಲಿ ವೀರಮರಣವನ್ನಪ್ಪಿದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿ ಅವರು ಮಾತನಾಡಿದರು.ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಸಂದರ್ಭ ತನ್ನ ಜಾತಿ ಬಾಂಧವರ ಮೂರು ಕಟ್ಟಡಗಳನ್ನು ಉಳಿಸುವ ಉದ್ದೇಶದಿಂದ ಮೂರು ಬಾರಿ ತಡೆ ಹಾಕಿದ್ದರಿಂದಾಗಿ ಮೂರು ಬಾರಿ ಪ್ಲ್ಯಾನ್ ಬದಲಾವಣೆಯಾಗಿ ವಿಳಂಬವಾಯಿತು. ಅದೇ ರೀತಿಯಲ್ಲಿ ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿಗೂ ಜೆ.ಆರ್ ಲೋಬೋ ಅವರೇ ತಡೆಯೊಡ್ಡಿ, ತಮ್ಮವರ ಕಟ್ಟಡಗಳನ್ನು ಉಳಿಸುವ ದುರುದ್ದೇಶದಿಂದ ವಿಳಂಬವಾಯಿತು. ಇದರ ಪರಿಣಾಮ ಈಗಲೂ ತೊಕ್ಕೊಟ್ಟುವಿನಲ್ಲಿ ಮೂರು ಕಟ್ಟಡಗಳು ಇನ್ನೂ ತೆರವು ಮಾಡಲಾಗಿಲ್ಲ. ಈ ನಡುವೆ ಕಟೌಟ್ ಹಾಕಿರುವಷ್ಟು ಜನರಿಲ್ಲದ ಪಾದಯಾತ್ರೆಯಲ್ಲಿ ಮಂತ್ರಿಗಳು ಭಾಗವಹಿಸುವ ದೌರ್ಭಾಗ್ಯ ಎದುರಾಯಿತು. ವಿಳಂಬ, ಅಪಪ್ರಚಾರದ ನಡುವೆಯೂ ಮಾಚ್ ್ ತಿಂಗಳ ಒಳಗೆ ಎರಡು ಫ್ಲೈಓವರ್ ಕಾಮಗಾರಿಗಳು ಮುಗಿಯದೇ ಇದ್ದಲ್ಲಿ ತಾನೇ ಖುದ್ದು ನಿಂತು ಟೋಲ್ ಪಡೆಯುವುದನ್ನು ನಿಲ್ಲಿಸುವುದು ಶತಸಿದ್ಧ ಎಂದ ಅವರು ಆರೋಗ್ಯ ಸಚಿವರಾಗಿದ್ದ ಸಂದರ್ಭ ಸಚಿವ ಯು.ಟಿ.ಖಾದರ್ ಅವರು ಹಲ್ಲುಭಾಗ್ಯ, ಅನಿಲಭಾಗ್ಯ ಮತ್ತು ಉಚಿತ ಕನ್ನಡಕ ಕೊಡುವ ವಿಶ್ವಾಸ ಜನತೆಗೆ ನೀಡಿದ್ದರು. ಆದರೆ ಅದನ್ನು ನೀಡಿದ್ದಾರೆಂದು ಉಳ್ಳಾಲದ ಮಸೀದಿ ಎದುರುಗಡೆ ಬಂದು ಪ್ರಮಾಣ ಮಾಡಿ ಹೇಳಲಿ ಎಂದು ಸವಾಲೆಸೆದ ಸಂಸದರು, ದೇಶಕ್ಕೆ ಪ್ರಧಾನಿ ಮೋದಿ ಕೊಟ್ಟಂತಹ ಯೋಜನೆಗಳನ್ನು , ಅನುದಾನದಲ್ಲಿ ರಾಜ್ಯ ಸರಕಾರ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುತ್ತಿದೆ. ದೇಶದ ಅಭಿವೃದ್ಧಿ ವಿಚಾರದಲ್ಲಿ ಪ್ರಚಾರ ಬಯಸುವುದಿಲ್ಲ. ಮಂಗಳೂರು ಕ್ಷೇತ್ರದ ಶಾಸಕ ಖಾದರ್ ಕೂಡಾ ಕೇಂದ್ರದ ಯೋಜನೆಗಳನ್ನು ಅನುಷ್ಠಾನಗೊಳಿಸಿ, ತೆಂಗಿನಕಾಯಿ ಒಡೆಯುತ್ತಾ ಯಾರ್ಯಾರಿಗೂ ಹುಟ್ಟಿದ ಮಕ್ಕಳಿಗೆ ಅಪ್ಪ ಅನಿಸಿಕೊಳ್ಳುತ್ತಿದ್ದಾರೆ ಎಂದು ಕಟುವಾಗಿ ವಿರೋಧಿಸಿದರು. ತಾನು ಜಿಲ್ಲೆಗೆ ಬಿಡುಗಡೆಗೊಳಿಸಿದ ಅನುದಾನಗಳ ಶ್ವೇತಪತ್ರವನ್ನು ಬಿಡುಗಡೆಗೊಳಿಸಲು ಸವಾಲೆಸೆಯುವ ಖಾದರ್ ಅವರೇ, ಮೂರು ತಿಂಗಳ ಹಿಂದೆಯೇ ಶ್ವೇತಪತ್ರವನ್ನು ತೆರೆದು ಕೊಟ್ಟಿದ್ದೇನೆ. ಅದನ್ನು ಓದುವಷ್ಟು ಪುರುಸೊತ್ತಿಲ್ಲದೇ, ಮಾತನಾಡುತ್ತಿದ್ದೀರಿ. ಬಿ.ಸಿ.ರೋಡ್ -ಗುಂಡ್ಯ ಚತುಷ್ಪಥ ಕಾಮಗಾರಿಯಲ್ಲೂ ಹಿಂದೆ ಅರಣ್ಯ ಸಚಿವರಾಗಿದ್ದ ರಮಾನಾಥ ರೈ ಅವರೇ ಮರ ಕಡಿಯುವ ಕಾರ್ಯಗಳಿಗೆ ತಡೆಯೊಡ್ಡಿ ರಸ್ತೆ ಕಾಮಗಾರಿಯನ್ನೇ ನಿಲ್ಲಿಸುವಂತೆ ಮಾಡಿದರು. ಅಂದಿನ ಮುಖ್ಯಮಂತ್ರಿಯೂ ಅದನ್ನು ಎತ್ತಿಹಿಡಿದು ಕಾಮಗಾರಿ ಆಗದಂತೆ ನೋಡಿಕೊಂಡಿದ್ದರು. ಆದರೆ ಇದೀಗ ಕುಮಾರಸ್ವಾಮಿಯವರು ಕಾಮಗಾರಿಗಳಿಗೆ ಅಂಕಿತ ನೀಡಿರುವುದರಿಂದ ಶೀಘ್ರವೇ ಕಾಮಗಾರಿ ನಡೆಯಲಿದೆ ಎಂದರು.

ಜಿಲ್ಲೆಯಲ್ಲಿ ಕೇಂದ್ರ ಸರಕಾರ ಪ್ಲಾಸ್ಟಿಕ್ ಪಾರ್ಕ್ ನಿರ್ಮಿಸಲು ಅನುಮೋದನೆಯನ್ನು ನೀಡಿದೆ. ಇದರಿಂದ ಸಾವಿರಾರು ಮಂದಿಗೆ ಉದ್ಯೋಗದ ಅವಕಾಶ ಲಭ್ಯವಾಗಲಿದೆ. ಕೋಸ್ಟ್ ಗಾರ್ಡ್  ತರಬೇತು ಕಾಲೇಜು, ನಗರದ ರೈಲ್ವೇ ನಿಲ್ದಾಣವನ್ನು ಅಂತರಾಷ್ಟ್ರೀಯ ಮೇಲ್ದರ್ಜೆಗೆ ಏರಿಸುವ ಸಲುವಾಗಿ ಟೆಂಡರ್ ಕರೆಯಲಾಗಿದೆ. ಮೀನುಗಾರಿಕೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಕುಳಾಯಿ ಪ್ರದೇಶದಲ್ಲಿ ಜಟ್ಟಿ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಕಳೆದ ಎರಡು ಅವಧಿಯಲ್ಲಿಯೂ ರಾಜ್ಯದಲ್ಲಿ ಬಿಜೆಪಿ ಸರಕಾರ ಇಲ್ಲದಿರುವುದರಿಂದ ಶೇ.50 ರಷ್ಟು ಅಭಿವೃದ್ಧಿ ಕಾಮಗಾರಿಯನ್ನು ಮಾತ್ರ ನಡೆಸಲು ಸಾಧ್ಯವಾಗಿದೆ. ಶಾಸಕ ಕೆ. ಜಯರಾಮ ಶೆಟ್ಟಿ ಮಾತನಾಡಿ ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ಶಾಸಕ ಯು.ಟಿ. ಖಾದರ್ ಅವರು ಹಾಗೂ ಕೆಲವೇ ಕೆಲವು ವ್ಯಕ್ತಿಗಳು ಪರಿಹಾರ ಸಿಗಲಿಲ್ಲ ಎಂಬ ಕಾರಣಕ್ಕೆ ಕನಿಷ್ಠ ನಾಲ್ಕು ವರ್ಷಗಳಷ್ಟು ವಿಳಂಬವಾಗಲು ಕಾರಣವಾಗಿದೆ. ಉಳ್ಳಾಲ ನಗರಸಭೆಗೆ ಸೇರಿದ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಜನರ ಬಹುಬೇಡಿಕೆಯ ಅಬ್ಬಕ್ಕ ಭವನಕ್ಕೆ ಯಡ್ಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಎರಡು ಕೋಟಿ ರೂ. ಅನುದಾನ ಮಂಜೂರು ಮಾಡಿದ್ದರೂ ಇದುವರೆಗೆ ಕಾಮಗಾರಿ ನಡೆಯದಿರುವುದು ದುರಂತ ಮತ್ತು ಬೇಸರದ ವಿಷಯ ಎಂದು ನುಡಿದರು.

ಬಿಜೆಪಿ ಮಂಗಳೂರು ಕ್ಷೇತ್ರ ಚುನಾವಣಾ ಉಸ್ತುವಾರಿ ಬೂಡಿಯಾರ್ ರಾಧಾಕೃಷ್ಣ ರೈ, ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ನಮಿತಾ ಶ್ಯಾಂ, ಕ್ಷೇತ್ರ ಮಾಜಿ ಅಧ್ಯಕ್ಷ ಚಂದ್ರಶೇಖರ ಉಚ್ಚಿಲ್, ರವಿಶಂಕರ್ ಸೋಮೇಶ್ವರ, ಹಿರಿಯ ಮುಖಂಡ ಸೀತಾರಾಮ ಬಂಗೇರ, ಪ್ರಶಾಂತ ಗಟ್ಟಿ ಕಾಪಿಕಾಡ್, ಮುನೀರ್ ಬಾವ, ರಾಜೀವಿ ಕೆಂಪುಮಣ್ಣು, ದೇವದಾಸ ಕೊಲ್ಯ, ರಾಜೇಶ್ ಉಚ್ಚಿಲ್, ಕೋಟೆಕಾರು ಶಕ್ತಿ ಕೇಂದ್ರದ ಅಧ್ಯಕ್ಷ ಅಜಂತ ಪಿಲಾರು ಉಪಸ್ಥಿತರಿದ್ದರು. ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್ ಸ್ವಾಗತಿಸಿದರು. ಗೋಪಾಲಕೃಷ್ಣ ಮೇಲಾಂಟ ಕಾರ್ಯಕ್ರಮ ನಿರೂಪಿಸಿದರು.

ನಂ 1 ಎಂದು ಎಲ್ಲಿಯೂ ಹೇಳಿಕೊಂಡಿಲ್ಲ !
ಅತಿ ಹೆಚ್ಚು ಅನುದಾನವನ್ನು ತಂದುಕೊಟ್ಟ ಸಂಸದರು , ಅವರು ನಂ.1 ಎಂದು ಎಲ್ಲಿಯೂ ನಳಿನ್ ಕಟೀಲ್ ಹೇಳಿಕೊಂಡು ಬಂದಿಲ್ಲ. ರಾಜ್ಯದ ಮಾಧ್ಯಮ, ರಾಷ್ಟ್ರದ ಮಾಧ್ಯಮ ಹಾಗೂ ಮೈಸೂರು ವಿ.ವಿ ನಡೆಸಿದ ಸರ್ವೇ ವರದಿಯ ಮೂಲಕ ಅವರೇ ನಂ.1 ಸ್ಥಾನ ಕೊಟ್ಟಿದ್ದಾರೆ. ಇದೀಗ ಮಾಜಿ ಸಚಿವ ರಮಾನಾಥ ರೈ ಅವರು ನಂ.1 ಪಟ್ಟವನ್ನು ಟೀಕಿಸುವ ಮೂಲಕ ಸರ್ವೇ ಮಾಡಿ ವರದಿ ನೀಡಿದವರನ್ನು ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಂಸದ ನಳಿನ್ ಕಟೀಲ್

10 ದಿನಗಳಲ್ಲಿ ಪ್ರತ್ಯುತ್ತರ
ಉರಿ ಹಾಗೂ ಮ್ಯಾನ್ಮಾರ್ ನಲ್ಲಿ ಸರ್ಜಿಕಲ್ ಸ್ಟ್ರ್‍ಐಕ್ ಮೂಲಕ ದಿಟ್ಟ ಉತ್ತರ ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಹತ್ತು ದಿನಗಳಲ್ಲಿ ಪುಲ್ವಾಮ ಮಾರಣಹೋಮಕ್ಕೆ ಪ್ರತಿಯಾಗಿ ಪಾಕಿಸ್ತಾನಕ್ಕೆ ಪ್ರತ್ಯುತ್ತರವನ್ನು ತಕ್ಕ ಶಾಸ್ತಿ ಮೂಲಕ ನೀಡಲಿದ್ದಾರೆ. ಹುತಾತ್ಮರಾದ ಸೈನಿಕರನ್ನು ಎಂದಿಗೂ ವ್ಯರ್ಥವಾಗಲು ಸರಕಾರ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಸಂಸದ ನಳಿನ್ ಕಟೀಲ್

Exit mobile version