Site icon Ullalavani

ಮಂಗಳಗಂಗೋತ್ರಿಯಲ್ಲಿ ರಂಗೇರಿದ “ಮಾ’ ಉತ್ಸವ

UN NETWORKS

ಕೊಣಾಜೆ: ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಸ್ನೇಹ ಸಂಬಂಧಗಳು ಕೇವಲ ಡಿಜಿಟಲ್ ರೂಪಕ್ಕೆ ಸೀಮಿತವಾಗದೆ ನೈಜ ರೂಪದಲ್ಲಿ ಗಟ್ಟಿಯಾಗಲಿ ಎಂದು ಮಂಗಳೂರು ವಿಶ್ವವಿದ್ಯಾಲಯದ ಮೊದಲ ಬ್ಯಾಚ್‍ನ ವಿದ್ಯಾರ್ಥಿ ಪ್ರೊ. ಬಿ.ಎ. ವಿವೇಕ್ ರೈ ಹೇಳಿದರು.

“ಮಾ’ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಭಾನುವಾರ ಮಂಗಳೂರು ವಿಶ್ವವಿದ್ಯಾಲಯದಲ್ಲಿನಡೆದ `ಮಾ ಉತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.ಮಂಗಳೂರು ವಿವಿವಿಯ ವಿದ್ಯಾರ್ಥಿಗಳು ಇಂದು ವಿಶ್ವದ ನಾನಾ ಭಾಗದಲ್ಲಿದ್ದು ತಮ್ಮ ಗೆಳೆಯರು, ಕಾಲೇಜಿನೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಕಷ್ಟ ಸುಖಗಳ ವಿನಿಮಯ ಮಾಡಲು ಸಾಧ್ಯವಾಗುತ್ತದೆ. ಹಳೆ ವಿದ್ಯಾರ್ಥಿ ಮಿತ್ರರು ಡಿಜಿಟಲ್ ರೂಪಕ್ಕೆ ಸೀಮಿತವಾಗದೇ, ಮುಖತಃ ಭೇಟಿಯಾಗಿ ಭಾವನಾತ್ಮಕ ಸಂಬಂಧಗಳನ್ನು ಗಟ್ಟಿಗೊಳಿಸುವ ರೂಪದಲ್ಲಿರಬೇಕು ಎಂದರು.ಮಂಗಳೂರು ವಿವಿ ನನ್ನ ಮನೆ, ವಿದ್ಯಾರ್ಥಿಗಳು ನನ್ನ ಕುಟುಂಬವಿದ್ದಂತೆ. ಹಂಪಿ ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗುವ ಅರ್ಹತೆ ನೀಡಿದ್ದು ಈ ನನ್ನ ಮಂಗಳಗಂಗೋತ್ರಿ. ನಾಯಕತ್ವ ಪಾಠ ಕಲಿಸಿಕೊಟ್ಟದ್ದು ಗಂಗೋತ್ರಿ. ಬಾನಂಗಳದಲ್ಲಿ ಹಾರುತ್ತಿರುವ ನನ್ನಂತಹ ಹಲವಾರು ಬಲೂನುಗಳಿಗೆ ಹಾರುವ ಶಕ್ತಿಯನ್ನು ತುಂಬಿದ್ದು ಈ ವಿಶ್ವವಿದ್ಯಾಲಯ ಎಂದು ಸಂತಸ ವ್ಯಕ್ತಪಡಿಸಿದರು.ಜರ್ಮನ್ ಮೊದಲಾದ ದೇಶದಲ್ಲಿ ಒಬ್ಬ ವ್ಯಕ್ತಿ ವಯಸ್ಸಿಗಿಂತ ಆತನಲ್ಲಿ ಕಲಿಸುವ ಶಕ್ತಿ ಮುಖ್ಯವಾಗುತ್ತದೆ. ಅವರಲ್ಲಿ ಸ್ಪೂರ್ತಿ ಇದ್ದರೆ ಅವಕಾಶವೂ ಸದಾ ತೆರೆದಿರುತ್ತದೆ. ಹಾಗಾಗಿ ವಯಸ್ಸಿಗಿಂತಲೂ ಉತ್ಸಾಹ ಮುಖ್ಯ ಎಂದರು.

ಮಾ ಸಂಘಟನೆಯ ಗೌರವಾಧ್ಯಕ್ಷ ಅನಂತಕೃಷ್ಣ ಮಾತನಾಡಿ, `ವಿಶ್ವವಿದ್ಯಾಲಯದ ಮೊದಲ ಬ್ಯಾಚ್ ಎಂದು ಹೇಳಿಕೊಳ್ಳುವುದೇ ಹೆಮ್ಮೆ ಎನಿಸುತ್ತದೆ. ಮಂಗಳೂರು ವಿಶ್ವವಿದ್ಯಾಲಯದ ಸ್ಥಾಪನೆಗೆ ನಾರಾಯಣ ಅಡಿಗ, ಎಸ್.ವಿ.ಪಿ. ಹಲವಾರು ಗಣ್ಯರ ಅವಿರತ ಶ್ರಮ ಕಾರಣವಾಗಿದೆ. ಅಂತಹ ಬಹುದೊಡ್ಡ ಕನಸಿನೊಂದಿಗೆ, ಹಲವರ ಬೆವರಹನಿಯಿಂದ ಹುಟ್ಟಿ ಬೆಳೆದ ಮಂಗಳಗಂಗೋತ್ರಿಯಲ್ಲಿ ಕಲಿತು ಗಳಿಸಿದ ಅನುಭವಗಳೇ ದೊಡ್ಡದು ಎಂದರು.ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ಈಶ್ವರ ಪಿ, ಮಾ ಸಂಘಟನೆಯ ಕಾರ್ಯದರ್ಶಿ ಗಣೇಶ್ ಸಂಜೀವ, ಮಾ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ, ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎ.ಎಂ. ಖಾನ್ ಉಪಸ್ಥಿತರಿದ್ದರು.

ಮಾ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ ಸ್ವಾಗತಿಸಿದರು. ಉಪಾಧ್ಯಕ್ಷೆ ಡಾ. ದೇವಿಪ್ರಭಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಕ್ರಿಕೆಟ್, ಲಗೋರಿ ಹಾಗೂ ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮ ಪ್ರದರ್ಶನ ನಡೆಯಿತು.

Exit mobile version