Site icon Ullalavani

ಹುತಾತ್ಮ ಭಾರತೀಯ ಯೋಧರಿಗೆ ಕಂಬನಿ ಮಿಡಿದ ಕರಾವಳಿ

UN NETWORKS

ಮಂಗಳೂರು: ಉಗ್ರರ ದಾಳಿಯಿಂದ ಹುತಾತ್ಮರಾದ ಯೋಧರಿಗೆ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮೊದಲಾದೆಡೆ ಶುಕ್ರವಾರ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.ಕದ್ರಿ ಮತ್ತು ಅಜ್ಜರಕಾಡಿನಲ್ಲಿರುವ ಯೋಧರ ಸ್ಮಾರಕದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದ ನೇತೃತ್ವದಲ್ಲಿ ಪುಷ್ಪ ನಮನ ಸಲ್ಲಿಸಲಾಯಿತು. ಜಿಲ್ಲಾ ಸೈನಿಕರ ಪರವಾಗಿಯೂ ಗೌರವ ನಮನ ಸಲ್ಲಿಸಲಾಯಿತು.

ಜಿಲ್ಲಾ ಯುವ ಕಾಂಗ್ರೆಸ್‌ ಹಾಗೂ ಸಂಘ- ಸಂಸ್ಥೆಗಳ ನೇತೃತ್ವದಲ್ಲಿ ಕದ್ರಿಯ ಯೋಧರ ಸ್ಮಾರಕದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಾರ್ವಜನಿಕರೂ ಆಗಮಿಸಿದ್ದರು. ಮಂಗಳೂರು ಮೇಯರ್‌ ಭಾಸ್ಕರ್‌ ಕೆ. ಮಾತನಾಡಿ, ನಮ್ಮನ್ನು ಕಾಯುವವರ ಮೇಲೆ ನಡೆದಿರುವ ದಾಳಿ ಘೋರವಾಗಿದೆ. ಹುತಾತ್ಮ ಯೋಧರು ಚಿರಸ್ಥಾಯಿಗಳು ಎಂದರು.

ಹೇಯ ಕೃತ್ಯ: ಕ್ಯಾ| ಕಾರ್ಣಿಕ್‌
ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ| ಗಣೇಶ್‌ಕಾರ್ಣಿಕ್‌ ಮಾತನಾಡಿ, ಉಗ್ರರು ಹೇಯ ಕೃತ್ಯನಡೆಸಿದ್ದಾರೆ. ಸೈನಿಕರನ್ನು ಗೌರವಿಸುವ ಮನೋಭಾವ ನಮ್ಮಲ್ಲಿ ಮೊದಲು ಜಾಗೃತವಾಗ ಬೇಕು. ಪ್ರತ್ಯೇಕತೆ, ಜಾತೀಯತೆ, ಸಂಕುಚಿತ ಭಾವನೆ ತೊರೆದು ದೇಶ ರಕ್ಷಕರನ್ನು ಸದಾ ಸ್ಮರಣೀಯವಾಗಿಸೋಣ ಎಂದರು.ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘದ ನಿವೃತ್ತ ಸೈನಿಕರಾದ ಐ.ಎನ್‌.ರೈ, ಶರತ್‌ ಭಂಡಾರಿ, ವಿಕ್ರಂ ದತ್ತ ಸೇರಿದಂತೆ ನಿವೃತ್ತ ಸೈನಿಕರು ಹುತಾತ್ಮ ಯೋಧರಿಗೆ ಗೌರವಪೂರ್ವಕ ನಮನ ಸಲ್ಲಿಸಿದರು. ಮಾಜಿ ಶಾಸಕ ಎನ್‌.ಯೋಗೀಶ್‌ ಭಟ್‌, ದ.ಕ. ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ, ಪ್ರಮುಖರಾದ ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ, ಕ್ಯಾ| ಬೃಜೇಶ್‌ ಚೌಟ, ಎಂ. ಶಶಿಧರ ಹೆಗ್ಡೆ, ನವೀನ್‌ ಡಿ’ಸೋಜಾ, ರೂಪಾ ಡಿ. ಬಂಗೇರ, ಪ್ರವೀಣ್‌ಚಂದ್ರ ಆಳ್ವ, ಮಹಾಬಲ ಮಾರ್ಲ, ಎ.ಸಿ. ವಿನಯ್‌ರಾಜ್‌ ಮೋಂಬತ್ತಿ ಬೆಳಗಿ ಪುಷ್ಪನಮನ ಸಲ್ಲಿಸಿದರು. ಫ್ರಾಂಕ್ಲಿನ್‌ ಮೊಂತೇರೋ ದೇಶಭಕ್ತಿ ಗೀತೆ ಹಾಡಿದರು. ಉಡುಪಿಯಲ್ಲಿ ಮಾಜಿ ಸೈನಿಕರ ವೇದಿಕೆಯ ಗಿಲ್ಬರ್ಟ್‌ ಬ್ರಿಗಾಂಝ, ಗಣೇಶ್‌ ರಾವ್‌ ನಮನ ಸಲ್ಲಿಸಿದರು.

ವಿಹಿಂಪ ಹಾಗೂ ಬಜರಂಗದಳ ನೇತೃತ್ವದಲ್ಲಿ ಮಂಗಳೂರಿನ ಪಿವಿಎಸ್‌ ಸರ್ಕಲ್‌ನಲ್ಲಿ ಮತ್ತು ಉಡುಪಿ ಅಜ್ಜರಕಾಡಿನ ಹುತಾತ್ಮ ಸ್ಮಾರಕದಲ್ಲಿ ಬೆಳಗ್ಗೆ ಪಾಕಿಸ್ಥಾನದ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಹುತಾತ್ಮ ಭಾರತೀಯ ಯೋಧರಿಗೆ ಇದೇ ವೇಳೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಉಗ್ರರ ಕೃತ್ಯ ಖಂಡಿಸಿ ಉಳ್ಳಾಲ ದರ್ಗಾ ಸೇರಿದಂತೆ ದ.ಕ. ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಖಂಡನಾ ಖುತಾಂ ನಡೆಸಿ, ಪ್ರಾರ್ಥನೆ ಸಲ್ಲಿಸಲಾಯಿತು.

Exit mobile version