ಹಾಸನದಲ್ಲಿ ಮತ್ತೊಬ್ಬ ಗೌಡ ಬೆಳೆಯಬಾರದು ಅನ್ನುವುದು ದೊಡ್ಡ ಗೌಡರ ಗುರಿ’ : ಮಾಜಿ ಶಾಸಕ ಜಯರಾಮ ಶೆಟ್ಟಿ
UllalaVani
UN NETWORKS
ತೊಕ್ಕೊಟ್ಟು: ಹಾಸನದಲ್ಲಿ ದೇವೇಗೌಡ ಮಾತ್ರ ಇರಬೇಕು, ಮತ್ತೊಬ್ಬ ಗೌಡ ಅಲ್ಲಿ ಬೆಳೆಯಬಾರದು ಎನ್ನುವುದೇ ದೊಡ್ಡ ಗೌಡರ ಕುಟುಂಬದ ಗುರಿಯಾಗಿದೆ. ಇದೇ ಉದ್ದೇಶದಿಂದ ಯುವನಾಯಕ ಶಾಸಕ ಪ್ರೀತಂ ಗೌಡ ಮನೆಮೇಲೆ ಮತ್ತು ಬಿಜೆಪಿ ಕಾರ್ಯಕರ್ತನ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಕುಮ್ಮಕ್ಕಿನಿಂದ ದಾಳಿ ನಡೆದಿದೆ ಎಂದು ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ ಹೇಳಿದ್ದಾರೆ.
ಹಾಸನದಲ್ಲಿ ಜೆ.ಡಿ.ಎಸ್. ಕಾರ್ಯಕರ್ತರು ಬಿ.ಜೆ.ಪಿ. ಕಾರ್ಯಕರ್ತನ ಮೇಲೆ ನಡೆಸಿದ ಹಲ್ಲೆ ಮತ್ತು ಶಾಸಕರಾದ ಪ್ರೀತಮ್ ಗೌಡ ಅವರ ಮನೆಗೆ ಕಲ್ಲು ತೂರಾಟ ನಡೆಸಿರುವ ಘಟನೆಯನ್ನು ವಿರೋಧಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆಗೆ ಒತ್ತಾಯಿಸಿ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಘಟನೆ ಪ್ರಜಾತಂತ್ರ ವ್ಯವಸ್ಥೆಯನ್ನು ಹತ್ತಿಕ್ಕುವ ಪ್ರಯತ್ನ ವಾಗಿದೆ. ಪ್ರತಿಪಕ್ಷಗಳು ಬಿಜೆಪಿಯ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನದಿಂದ ವಿವಿಧ ರೀತಿಯಲ್ಲಿ ಅಪಪ್ರಚಾರದಲ್ಲಿ ತೊಡಗಿದೆ. ಕ್ಷೇತ್ರದ ಶಾಸಕರು ತಮ್ಮದೇ ಪಕ್ಷದ ಕಾರ್ಯಕರ್ತರ ಜಾಗ ಉಳಿಸಲು ಹಿಂದೆ ಫ್ಲೈಓವರ್ ಕಾಮಗಾರಿ ನಡೆಸುವ ಸಂದರ್ಭದಲ್ಲಿ ತಡೆಯೊಡ್ಡಿ ವಿಳಂಬವಾಗುವಂತೆ ಮಾಡಿದ್ದಾರೆ. ಇದೀಗ ಅವರೇ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ವಿಳಂಬ ಎಂದು ಸಂಸದರ ಮೇಲೆ ಆರೋಪವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕ್ಷೇತ್ರದ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಮಾತನಾಡಿ, ಹಾಸನದಲ್ಲಿ ಗೌಡರ ಕುಟುಂಬದ ನಡುವೆ ಶಾಸಕನಾಗಲು ಬಿಜೆಪಿಗೆ ಮಾತ್ರ ಸಾಧ್ಯವಾಗಿದೆ. ಗೆದ್ದ ಯುವನಾಯಕ ಪ್ರೀತಂ ಗೌಡ ಇರುವ ಬಿಜೆಪಿ ಯ ಶಕ್ತಿ ಕುಗ್ಗಿಸಲು ಷಡ್ಯಂತ್ರಗಳು ಜೆಡಿಎಸ್ ಮತ್ತು ಕಾಂಗ್ರೆಸ್ ನಿಂದ ನಡೆದಿದೆ. ರಾಜ್ಯದ ಮುಖ್ಯಮಂತ್ರಿ ಎಲ್ಲರನ್ನು ಒಂದೇ ರೀತಿಯಲ್ಲಿ ನೋಡಬೇಕಾದವರು ತಮ್ಮ ಪಕ್ಷದ ಬೆಂಬಲಕ್ಕೆ ನಿಂತು ದಾಂಧಲೆಗಳಿಗೆ ಪ್ರೋತ್ಸಾಹಿಸುತ್ತಿರುವುದು ಖಂಡನೀಯ. ತಕ್ಷಣ ರಾಜ್ಯ ಸರಕಾರವನ್ನು ವಿಸರ್ಜಿಸಬೇಕು. ಪ್ರೀತಂ ಅವರ ಮನೆಗೆ ಮತ್ತು ಕಾರ್ಯಕರ್ತನಿಗೆ ಕಲ್ಲೇಟು ಹೊಡೆದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ರವೀಂದ್ರ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಚಂದ್ರಹಾಸ ಉಳ್ಳಾಲ, ಕಾರ್ಯದರ್ಶಿ ಸತೀಶ್ ಕುಂಪಲ, ಕ್ಷೇತ್ರ ಪ್ರ.ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್, ಸೀತರಾಮ ಬಂಗೇರ, ಲಲಿತಾ ಸುಂದರ್,ಸೀತರಾಮ ದಡಸ್, ಮೋಹನ್ ದಾಸ್ ಶೆಟ್ಟಿ ಕಿನ್ಯಾ ,ರಾಮಚಂದ್ರ ಕುಂಪಲ, ಸಂಜೀವ ಶೆಟ್ಟಿ, ಸುರೇಂದ್ರ ಶೆಟ್ಟಿ, ಜೀವನ್ ಕುಮಾರ್, ಆನಂದ ಶೆಟ್ಟಿ, ಮಹಾಲಕ್ಷೀ, ದಯಾನಂದ ತೊಕ್ಕೊಟ್ಟು, ಕೌನ್ಸಿಲರ್ ಗಳಾದ ಗೀತಾ ಬಾಯಿ, ರಾಜೇಶ್ ಯು.ಬಿ., ಪ್ರಶಾಂತ್ ಕಾಪಿಕಾಡ್, ರಂಜಿತ್ ಗಟ್ಟಿ , ಪ್ರಶಾಂತ ಗಟ್ಟಿ, ಅಜಿತ್ ಉಳ್ಳಾಲ್, ಅಜಂತ್ ಪಿಲಾರ್, ಇನ್ನಿತರರು ಉಪಸ್ಥಿತರಿದ್ದರು.