UN NETWORKS
ಹರೇಕಳ: ಹರೇಕಳ ಗ್ರಾಮಸ್ಥರ ಬಹುಕಾಲದ ಬೇಡಿಕೆಯಾಗಿದ್ದ ಸರ್ಕಾರಿ ಬಸ್ ಸಂಚಾರ ಬೇಡಿಕೆ ಈಡೇರುವ ಲಕ್ಷಣ ಗೋಚರಿಸುತ್ತಿದೆ. ಗುರುವಾರ ಗ್ರಾಮ ಪಂಚಾಯಿತಿ ನಿಯೋಗ ಆರ್‍ಟಿಓ ಹಾಗೂ ಕೆಎಸ್‍ಆರ್‍ಟಿಸಿ ಅಧಿಕಾರಿಗಳನ್ನು ಭೇಟಿ ಮಾಡಿ ನೀಡಿರುವ ಮನವಿಗೆ ಸೂಕ್ತ ಭರವಸೆ ದೊರಕಿದೆ.
ಗ್ರಾ.ಪಂ. ನಿಯೋಗದಿಂದ ಮನವಿ
ಗ್ರಾಮಸ್ಥರ ಬೇಡಿಕೆಗೆ ಅನುಗುಣವಾಗಿ ಈ ಹಿಂದೆ ಎರಡು ಬಾರಿ ಗ್ರಾಮ ಪಂಚಾಯಿತಿ, ಅಧಿಕಾರಿಗಳಿಗೆ ಮಾಡಿದ ಮನವಿ ಪ್ರಯೋಜನವಾಗಿರಲಿಲ್ಲ. ಇದೇ ತಿಂಗಳು 23ರಂದು ಗ್ರಾಮಸಭೆ ನಡೆಯಲಿದ್ದು ಹಿಂದಿನ ಪ್ರಕರಣ ಮರುಕಳಿಸಬಾರದು ಎನ್ನುವ ನೆಲೆಯಲ್ಲಿ ಗ್ರಾಮ ಪಂಚಾಯಿತಿ ನಿಯೋಗ ಗುರುವಾರ ಸಚಿವ ಯು.ಟಿ.ಖಾದರ್ ಅವರ ಲಿಖಿತ ಪತ್ರದೊಂದಿಗೆ ಆರ್‍ಟಿಓಗೆ ಮನವಿ ಸಲ್ಲಿಸಿತು. ಅಲ್ಲದೆ ಗ್ರಾಮಸಭೆಗೂ ಅಧಿಕಾರಿಗಳನ್ನು ಕಳುಹಿಸುವಂತೆ ಪಂಚಾಯಿತಿ ನಿಯೋಗ ಮನವಿ ಮಾಡಿತು.
ಈ ಸಂದರ್ಭ ಆರ್‍ಟಿಓ ಅಧಿಕಾರಿ ಜಾನ್ ಬಿ.ಮಿಸ್ಕಿತ್ ಅವರಿಗೂ ಸಚಿವ ಯು.ಟಿ.ಖಾದರ್ ಕರೆ ಮಾಡಿ ಗ್ರಾಮ ಪಂಚಾಯಿತಿ ಬೇಡಿಕೆ ಈಡೇರಿಸುವಂತೆ ಸೂಚಿಸಿದರು. ಈ ನಿಟ್ಟಿನಲ್ಲಿ ಅಧಿಕಾರಿಯೇ ಕೆಎಸ್‍ಆರ್‍ಟಿಸಿ ಅಧಿಕಾರಿ ದೀಪಕ್ ಅವರಿಗೆ ಕರೆ ಮಾಡಿ, ಹರೇಕಳಕ್ಕೆ ಬಸ್ಸು ಒದಗಿಸಿದರೆ ತಕ್ಷಣ ತಾತ್ಕಾಲಿಕ ಪರವಾನಿಗೆ ನೀಡುತ್ತೇನೆ ಎಂದರು. ಆರ್‍ಟಿಓ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿದ್ದು, ಸಭೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮಕ್ಕೆ ಬಸ್ಸು ಒದಗಿಸಲು ಯಾವುದೇ ತೊಂದರೆಯಿಲ್ಲ. ಖಾಸಗಿ ಬಸ್ಸಿನವರು ಜವಾಬ್ದಾರಿ ಇಲ್ಲದಂತೆ ವರ್ತಿಸುತ್ತಿದ್ದು, ಯಾರಾದರೂ ಬಸ್ಸು ಹಾಕಲು ಮುಂದೆ ಬಂದರೆ ತಕ್ಷಣ ಪರವಾನಿಗೆ ನೀಡುವುದಾಗಿ ಭರವಸೆ ನೀಡಿದರು.
ಬಳಿಕ ಪಂಚಾಯಿತಿ ನಿಯೋಗ ಕೆಎಸ್‍ಆರ್‍ಟಿಸಿ ಅಧಿಕಾರಿ ದೀಪಕ್ ರಾವ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ತಕ್ಷಣ ಕ್ರಮ ಕೈಗೊಳ್ಳುವುದಾಗಿ ದೀಪಕ್ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಡಿಸೋಜ, ಉಪಾಧ್ಯಕ್ಷ ಮಹಾಬಲ ಹೆಗ್ಡೆ ದೆಬ್ಬೇಲಿಗುತ್ತು, ಸದಸ್ಯರಾದ ಬದ್ರುದ್ದೀನ್ ಫರೀದ್‍ನಗರ, ಬಶೀರ್ ಉಂಬುದ, ಎಂ.ಪಿ.ಮಜೀದ್ ಆಲಡ್ಕ, ಅಶ್ರಫ್ ಹರೇಕಳ, ಎಚ್.ಶಾಲಿಹ್, ಅಬ್ದುಲ್ ಸತ್ತಾರ್ ಬಾವಲಿಗುಲಿ, ಅಬ್ದುಲ್ ಖಾದರ್ ಬೈತಾರ್ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮುಸ್ತಫಾ ಮಲಾರ್ ಹಾಗೂ ಅಂಬ್ಲಮೊಗರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ರಫೀಕ್ ಉಪಸ್ಥಿತರಿದ್ದರು.