UN NETWORKS
ಉಳ್ಳಾಲ: ಜಿಲ್ಲೆಯ ಉಸ್ತುವಾರಿ ಸಚಿವರ ಪ್ರೇರಣೆಯಿಂದಲೇ ಎಸ್ ಡಿಪಿಐ ಜಿಲ್ಲಾಧ್ಯಕ್ಷ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಚಿವರ ಆಪ್ತರು, ಬಾಬರಿ ಮಸೀದಿ ಮೇಲೆ ಅಭಿಮಾನ ಇರುವ ಕಾಂಗ್ರೆಸ್ಸಿಗನ ಮೂಲಕವೇ ಗಮನಕ್ಕೆ ಬಂದಿದೆ ಎಂದು ಅವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ನಾಯಕರ ಹಾಗೂ ಇತರರ ಮೇಲೆ ದಾಖಲಾದ ಸ್ವಯಂಪ್ರೇರಿತ ಪ್ರಕರಣ ಹಿಂತೆಗೆಯಲು ಒತ್ತಾಯಿಸಿ ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಉಳ್ಳಾಲ ಆರಕ್ಷಕ ಠಾಣೆ ಎದುರು ಮಂಗಳವಾರ ಜರಗಿದ ಬೃಹತ್ ಮಟ್ಟದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಜಗದೀಶ ಶೇಣವ ಕುದ್ರೋಳಿ ಕುರಿತು ಪ್ರಚೋದನಕಾರಿ, ನೆಹರೂ ಮೈದಾನದಲ್ಲಿ 40,000 ಮಸೀದಿಗಳನ್ನು ಒಡೆಯುವ ಮಾತು, ಬೆಳ್ತಂಗಡಿ ಪೆರಾಡಿಯ ಪ್ರಚೋದನೆ ಮಾತು, ಖಾಸಗಿ ಸುದ್ಧಿವಾಹಿನಿ ನಿರೂಪಕನ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಾಧ್ಯವಾಗಿಲ್ಲ. ಎಸ್ ಡಿಪಿಐ ಉಳ್ಳಾಲದಾದ್ಯಂತ ಬೆಳೆಯುತ್ತಿರುವ ಪರಿಣಾಮ ಯು.ಟಿ.ಖಾದರ್ ಕುರ್ಚಿ ಅಲುಗಾಡುತ್ತಾ ಇದೆ. ಅದಕ್ಕಾಗಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಉಳ್ಳಾಲದಲ್ಲಿ ನಡೆದ ಬಾಬರಿ ಮಸೀದಿ ಪ್ರದರ್ಶನದಲ್ಲಿ ಮಸೀದಿ ಧ್ವಂಸ ಸಂದರ್ಭ ಕಳಪೆ ರಾಜಕೀಯ ವ್ಯವಸ್ಥೆ, ಲಿಬರ್ ಹನ್ ವರದಿ, ಆಗಿನ ಪ್ರಧಾನಿ ನರಸಿಂಹ ರಾವ್ ಕೈಗೊಂಡ ನಿರ್ಣಯಗಳು ಕುರಿತ ನೈಜ ವಿಚಾರಗಳನ್ನು ಪ್ರದರ್ಶಿಸಲಾಗಿದೆ. ಹಿಂದೂ ಸಂಘಟನೆಯೊಂದು ಹಿಂದೂ ರಾಷ್ಟ್ರ ನಿರ್ಮಾಣದ ಬ್ಯಾನರ್,. ಪೋಸ್ಟರ್ ಗಳನ್ನು ಹಾಕಿದ್ದರೂ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಲ್ಲ. ಧೋರಣೆ ನೀತಿಯನ್ನು ಅನುಸರಿಸುವ ರಾಜ್ಯ ಸರಕಾರ ಪ್ರಕರಣ ಹಿಂಪಡೆಯದೇ ಇದ್ದಲ್ಲಿ ಉಗ್ರ ರೀತಿಯಲ್ಲಿ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಎಸ್ ಡಿಪಿಐ ಜಿಲ್ಲಾ ಉಪಾಧ್ಯಕ್ಷ ಇಕ್ಬಾಲ್ ಐ.ಎಂ.ಆರ್ ಮಾತನಾಡಿ ಪೊಲೀಸರನ್ನು ಉಪಯೋಗಿಸಿ ಕೇಸು ಹಾಕಿರುವುದು ಖೇದಕರ. ರಾಜಕೀಯದವರೇ ಖುದ್ದಾಗಿ ದೂರು ಹಾಕಬಹುದಿತ್ತು. ಪೊಲೀಸರು ಒತ್ತಡಕ್ಕೆ ಮಣಿದು ಕೇಸು ಹಾಕಿದ್ದಾರೆ. ಶೀಘ್ರವೇ ರಾಜ್ಯ ಸರಕಾರ ಹಾಕಿರುವ ಪ್ರಕರಣವನ್ನು ಹಿಂಪಡೆಯದೇ ಇದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು. ನೈಜ ಕೋಮು ಭಾವನೆ ಪ್ರಚೋದಿಸುವವರ ವಿರುದ್ಧ ಕೇಸುಗಳಾಗುತ್ತಿಲ್ಲ. ಬಾಬರಿ ಮಸೀದಿ ಧ್ವಂಸ ವಿಚಾರದಲ್ಲಿ ನೈಜ ವಿಚಾರವನ್ನು ತೋರಿಸುವಾಗ ಕೇಸು ದಾಖಲಿಸಲಾಗುತ್ತಿದೆ. ದೇಶಾದ್ಯಂತ ಅಭಿಯಾನ ನಡೆದರೂ, ಉಳ್ಳಾಲದಲ್ಲಿ ಮಾತ್ರ ಕೇಸು ದಾಖಲಾಗಲು ರಾಜಕೀಯ ದ್ವೇಷ ಕಾರಣ ಎಂದರು.
ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್, ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಬ್ಬಾಸ್ ಕಿನ್ಯಾ, ಮುನೀಬ್ ಬೆಂಗ್ರೆ, ಝಾಹಿದ್ ಮಲಾರ್, ಎ.ಆರ್ ಅಬ್ಬಾಸ್, ಉಳ್ಳಾಲ ನಗರಸಭೆ ಸದಸ್ಯರುಗಳಾದ ರಮೀಝ್ ಉಳ್ಳಾಲ್, ಅಸ್ಗರ್ ಅಲಿ ಸೇರಿದಂತೆ ವಿವಿಧ ಮುಖಂಡರು ಭಾಗಿಯಾಗಿದ್ದರು. ಠಾಣೆಗೆ ಮುತ್ತಿಗೆ ಹಾಕುವ ವಿಚಾರದಿಂದ ಉಳ್ಳಾಲ ಠಾಣೆಗೆ ಅಡ್ಡವಾಗಿ ಬ್ಯಾರಿಕೇಡ್ ಹಾಕಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಫೆ.1 ರಂದು ಉಳ್ಳಾಲ ದರ್ಗಾ ಗೇಟಿನ ಎದುರುಗಡೆ ಬಾಬರಿ ಮಸೀದಿ ಎಕ್ಸ್ ಪೋ-2019 ಎಸ್ ಡಿಪಿಐ ರಾಷ್ಟ್ರಮಟ್ಟದ ಅಭಿಯಾನ ಕಾರ್ಯಕ್ರಮ ನಡೆಸಲಾಗಿತ್ತು. ಬಾಬರಿ ಮಸೀದಿ ಧ್ವಂಸಗೈದ ಪ್ರಕರಣ ಹಾಗೂ ಆ ಬಳಿಕ ನಡೆದಂತಹ ಬೆಳವಣಿಗೆಗಳ ಕುರಿತು ಭಾವಚಿತ್ರಗಳು, ವೀಡಿಯೋ ಮೂಲಕ ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಇಡಲಾಗಿತ್ತು. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೋಮು ಪ್ರಚೋದನಾಕಾರಿ ಕಾರ್ಯಕ್ರಮ ಎಂದು ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅತ್ತಾವುಲ್ಲಾ ಸೇರಿದಂತೆ ಇತರರ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿತ್ತು.