Site icon Ullalavani

ಮುನ್ನೂರು ಗ್ರಾಮಸಭೆ, ಚರಂಡಿ ವ್ಯವಸ್ಥೆಗೆ ಗ್ರಾಮಸ್ಥರ ಆಗ್ರಹ

UN NETWORKS

ಉಳ್ಳಾಲ: ಮುನ್ನೂರು ಗ್ರಾಮ ವ್ಯಾಪ್ತಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ಜನ ತೊಂದರೆಗೊಳಗಾಗುತ್ತಿದ್ದಾರೆ. ಪ್ರಮುಖ ಕುತ್ತಾರು ಜಂಕ್ಷನ್ನಿನಲ್ಲಿ ದಿನನಿತ್ಯ ಮೂಗು ಮುಚ್ಚಿಕೊಂಡು ಹೋಗುವ ವಾತಾವರಣ ನಿರ್ಮಾಣವಾಗಿದೆ. ಹಲವು ಗ್ರಾಮಸಭೆಯಲ್ಲಿ ಚರಂಡಿ ವ್ಯವಸ್ಥೆ ಕುರಿತು ಚರ್ಚಿಸಿದರೂ ಸೂಕ್ತ ಕ್ರಮ ಇನ್ನೂ ಜಾರಿಯಾಗಿಲ್ಲ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿಬಂತು.

ಸುಭಾಷನಗರದ ಸಮುದಾಯಭವನದಲ್ಲಿ ಶುಕ್ರವಾರ ಜರಗಿದ ಮುನ್ನೂರು ಗ್ರಾಮ ಪಂಚಾಯಿತಿಯ 2018-19 ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯಲ್ಲಿ ಗ್ರಾಮದ ಸಮಸ್ಯೆಯ ವಿಚಾರಗಳು ಪ್ರಸ್ತಾಪವಾಯಿತು.ಕುತ್ತಾರು ಭಾಗದಲ್ಲಿ ವಸತಿ, ವಾಣಿಜ್ಯ ಸಂಕೀರ್ಣಗಳು ತಲೆ ಎತ್ತಿನಿಂತಿವೆ. ಆದರೆ ಕಟ್ಟಡ ಹೊಂದಿರುವವರು ಚರಂಡಿ ಸಂಸ್ಕರಣಾ ಘಟಕವನ್ನು ನಿರ್ಮಿಸದೆ ಸಾರ್ವಜನಿಕ ರಸ್ತೆ ಬದಿಯಲ್ಲಿ ಬಿಡುವಂತಹ ಕೆಲಸಗಳಾಗುತ್ತಿವೆ. ಇದರಿಂದ ಕುತ್ತಾರು ಜಂಕ್ಷನ್ ಇಡೀ ದುರ್ನಾತ ಬೀರುತ್ತಿದೆ. ಸಂತೋಷನಗರ ವ್ಯಾಪ್ತಿಯಲ್ಲಿ ಮನೆಗಳ ಚರಂಡಿ ನೀರು ಹರಿಯಲು ಸರಿಯಾದ ಜಾಗವಿಲ್ಲದೆ, ಸಾರ್ವಜನಿಕ ರಸ್ತೆಯಲ್ಲೇ ಹರಿಯುತ್ತಿದೆ. ಗ್ರಾಮಕ್ಕೆ ಚರಂಡಿ ಅವ್ಯವಸ್ಥೆ ಗಂಭೀರ ಸಮಸ್ಯೆಯಾಗಿದೆ. ಗ್ರಾಮಸಭೆಗಳಲ್ಲಿ ನಿರ್ಣಯ ಕೈಗೊಂಡರೂ ಸೂಕ್ತ ಚರಂಡಿ ವ್ಯವಸ್ಥೆ ಅನುಷ್ಠಾನವಾಗಿಲ್ಲ ಅನ್ನುವ ಗ್ರಾಮಸ್ಥ ಕಿಶೋರ್ ಅವರ ಆರೋಪಕ್ಕೆ ಎಲ್ಲರೂ ದನಿಗೂಡಿಸಿದರು. ಕುತ್ತಾರು ಜಂಕ್ಷನ್ನಿನಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆ ಇರುವುದರಿಂದ ಅವರಾಗಿಯೇ ಚರಂಡಿ ವ್ಯವಸ್ಥೆ ಮಾಡಿಕೊಡಬೇಕಿದೆ. ಮಳೆ ನೀರು ಹೋಗುವ ಚರಂಡಿಗಳನ್ನು ಮಪುಚ್ಚುವಂತಿಲ್ಲ. ಚರಂಡಿ ಬ್ಲಾಕ್ ಆಗಿರುವಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳುತ್ತೇವೆ ಎಂದರು.

ಪ್ರತಿ ಮೂಲೆಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ. ಆದರೆ ಮದನಿನಗರ ಎಂ.ಕೆ ಸ್ಟೋರ್ ಎದುರುಗಡೆ ರಸ್ತೆ ನಿರ್ಮಾಣ ಈವರೆಗೂ ಆಗಿಲ್ಲ. ಶಾಲೆಗೆ ಹೋಗುವ ವಾಹನಗಳು ಸೇರಿದಂತೆ ದಿನನಿತ್ಯ ಹಲವು ವಾಹನಗಳು, ಪಾದಚಾರಿಗಳು ತೆರಳುತ್ತಾರೆ. ರಸ್ತೆ ಅವ್ಯವಸ್ಥೆಯಿಂದ ಬಹಳಷ್ಟು ತೊಂದರೆಯಾಗಿದೆ. ರಾಜಕೀಯ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿಲ್ಲ. ಆದರೂ ಜನರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಪಂಚಾಯಿತಿ ಆಡಳಿತ ಸೂಕ್ತ ಕ್ರಮಕೈಗೊಂಡು ರಸ್ತೆ ನಿರ್ಮಾಣ ಶೀಘ್ರವೇ ನಡೆಸಬೇಕು ಎಂದು ಗ್ರಾಮಸ್ಥರೋರ್ವರು ಒತ್ತಾಯಿಸಿದರು. ಸರಕಾರದಿಂದ ಸಿಗುವ ವಿವಿಧ ಸವಲತ್ತುಗಳ ಕುರಿತು ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ ಮಾಹಿತಿ ನೀಡಿ, ಆಯುಷ್ಮಾನ್ ಯೋಜನೆಯ ಕೌಂಟರ್ ಗಳು ಪ್ರತಿ ಸರಕಾರಿ ಆಸ್ಪತ್ರೆಗಳಲ್ಲಿ ಇವೆ. ರೋಗಿಗಳನ್ನು ದಾಖಲಿಸುವ ಸಂದರ್ಭ ಆಧಾರ್ ಕಾರ್ಡು, ರೇಷನ್ ಕಾರ್ಡು ಅಗತ್ಯವಾಗಿ ಕೊಡಬೇಕಿದೆ. ಉಳ್ಳಾಲದ ಆಸ್ಪತ್ರೆಯಲ್ಲಿ ಸವಲತ್ತು ಒದಗಿಸುವ ಕುರಿತು ಸಚಿವರು ಸವಲತ್ತುಗಳನ್ನು ಒದಗಿಸಬೇಕಿದೆ. ಸರಕಾರಿ ಆಸ್ಪತ್ರೆಯಲ್ಲಿ ಸೌಕರ್ಯ ವ್ಯವಸ್ಥೆ ಸಿಗದೇ ಇದ್ದಲ್ಲಿ, ಸರಕಾರಿ ಆಸ್ಪತ್ರೆ ವೈದ್ಯರ ಶಿಫಾರಸ್ಸು ಪತ್ರದ ಮೂಲಕ ಖಾಸಗಿ ಆಸ್ಪತ್ರೆಯಲ್ಲಿ ಸರಕಾರದ ಆಯುಷ್ಮಾನ್ ಸವಲತ್ತುಗಳನ್ನು ಪಡೆಯಬಹುದು ಎಂದರು.

ಮಂಗಳೂರು ಕ್ಷೇತ್ರ ಸಮನ್ವಯಾಧಿಕಾರಿ ಪ್ರಶಾಂತ್ ಕುಮಾರ್ ಕೆ.ಎಸ್ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಗ್ರಾ.ಪಂ ಅಧ್ಯಕ್ಷೆ ರೂಪಾ.ಆರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಸದಸ್ಯೆ ಆಲ್ಫ್ರೆಡ್ ವಿಲ್ಮಾ ಡಿಸೋಜ, ಮುನ್ನೂರು ಗ್ರಾ.ಪಂ ಉಪಾಧ್ಯಕ್ಷ ಹರೀಶ್ ಭಂಡಾರಬೈಲು ಉಪಸ್ಥಿತರಿದ್ದರು.

Exit mobile version