Site icon Ullalavani

ತಂತುಕೋಶಗಳ ದೋಷ ಪತ್ತೆಹಚ್ಚುವಿಕೆಗೆ ಸಂಶೋಧನೆ: ಡಾ. ವೆಲೆಂಟಿನ್ ಸಿ ಡೋನ್ಸ್ ಥರ್ಡ್

UN NETWORKS

ದೇರಳಕಟ್ಟೆ: ತಂತುಕೋಶಗಳಲ್ಲಿರುವ ನ್ಯೂನ್ಯತೆಗಳನ್ನು ಪತ್ತೆಹಚ್ಚುವ ಸಲುವಾಗಿ ಹಲವು ರೀತಿಯ ಸಂಶೋಧನೆಗಳು ನಡೆಯುತ್ತಿದೆ. ನೋವು ಕಂಡುಬರುವ ತಂತುಕೋಶವನ್ನು ಪತ್ತೆಹಚ್ಚಲು ಆಧುನಿಕ ತಂತ್ರಜ್ಞಾನಗಳಿಂದ ಸಾಧ್ಯ ಎಂದು ಫಿಲಿಪೇನ್ಸ್ ಮನಿಲಾದ ಸ್ಯಾಂಟೋ ಟೊಮಸ್ ವಿ.ವಿ. ಯ ಡಾ. ವೆಲೆಂಟಿನ್ ಸಿ ಡೋನ್ಸ್111 ಅಭಿಪ್ರಾಯಪಟ್ಟರು.

ಇಂಡಿಯನ್ ಎಸೋಸಿಯೇಷನ್ ಆಫ್ ಫಿಸಿಯೋಥೆರಪಿಸ್ಟ್ಸ್, ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಜಂಟಿ ಆಶ್ರಯದಲ್ಲಿ ಚಿಂತನ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಗಾರದಲ್ಲಿ ಅವರು ಮಾತನಾಡಿದರು. ಜನತೆ ತಂತುಕೋಶಗಳ ಕುರಿತು ಹೆಚ್ಚು ಗಮನ ಹರಿಸುತ್ತಿಲ್ಲ. ಬೆನ್ನು, ಕುತ್ತಿಗೆ, ಮಾಂಸ ಖಂಡ ಎಲುಬಿನಲ್ಲಿ ನೋವು ಕಂಡು ಚಿಕಿತ್ಸೆ ಪಡೆಯುತ್ತಾರೆ. ಆದರೆ ವಾಸ್ತವವಾಗಿ ತಂತುಕೋಶಗಳಲ್ಲಿರುವ ದೋಷವನ್ನು ಪರಿಹರಿಸಲು ಚಿಕಿತ್ಸೆ ಪಡೆದುಕೊಂಡರೆ ನೋವು ನಿವಾರಣೆ ಸಾಧ್ಯ. ಕಾಲಿನಡಿಯ ತಂತುಕೋಶದಲ್ಲಿ ಅನಾರೋಗ್ಯದ ಲಕ್ಷಣಗಳು ಕಂಡುಬಂದಲ್ಲಿ ಮೆದುಳಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ತಂತುಕೋಶಗಳಲ್ಲಿನ ದೋಷಗಳನ್ನು ಕಂಡುಹಿಡಿಯಲು ಅಲ್ಟ್ರಾಸೌಂಡ್ ವಿಧಾನಗಳು ಕಾರ್ಯಚರಿಸುತ್ತಿದೆ. ಇನ್ನೂ ಪರಿಣಾಮಕಾರಿಯಾಗಿ ಅರಿಯಲು ಹೆಚ್ಚಿನ ಸಂಶೋಧನೆಗಳು ಮುಂದುವರಿದಿದೆ ಎಂದು ನುಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಇಂಡಿಯನ್ ಎಸೋಸಿಯೇಷನ್ ಆಫ್ ಫಿಸಿಯೋತೆರಪಿಸ್ಟ್ಸ್ ಗಳ ಅಧ್ಯಕ್ಷ ಡಾ. ಉಮಾಶಂಕರ್ ಮೊಹಾಂತಿ ಮಾತನಾಡಿ ತಂತುಕೋಶಗಳ ಅರಿವಿಗೆ ನಿಟ್ಟೆ ವಿ.ವಿ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಅಂತರಾಷ್ಟ್ರೀಯ ಮಟ್ಟದ ಕಾರ್ಯಗಾರದ ಪ್ರಯೋಜನವನ್ನು ವೈದ್ಯರು ಪಡೆಯುವಂತಾಗಲಿ ಎಂದರು.
ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ.ಬಿ ಅಧ್ಯಕ್ಷತೆ ವಹಿಸಿದ್ದರು.ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಪ್ರೊ. ಧಾನೇಶ್ ಸ್ವಾಗತಿಸಿದರು. ಡೆಲಿಶಾ ಕಾರ್ಯಕ್ರಮ ನಿರೂಪಿಸಿದರು. ಪ್ರಿಯಾಂಕ ನಾಯಕ್ ವಂದಿಸಿದರು.

Exit mobile version