UN NETWORKS
ಉಳ್ಳಾಲ: ರಾಜ್ಯ ಸರಕಾರ ಹುತಾತ್ಮರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಲು ಹೊರಟು 10 ವರ್ಷಗಳು ಕಳೆದಿವೆ. ಈವರೆಗೂ ಯೋಜನೆ ಅನುಷ್ಠಾನವಾಗದಿರುವುದು ದುರಾದೃಷ್ಟ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಖೇದ ವ್ಯಕ್ತಪಡಿಸಿದರು.
ಅವರು ನಿಟ್ಟೆ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ದೇರಳಕಟ್ಟೆಯ ಕ್ಷೇಮ ಆಡಿಟೋರಿಯಂನಲ್ಲಿ ಆಯೋಜಿಸಲಾದ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರ ಸಂಬಂಧಿಕರಿಗೆ ಹಾಗೂ ನಿವೃತ್ತರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ನೌಕಾದಳದಿಂದ ನಿವೃತ್ತರಾದ ವಿಕ್ರಂ ದತ್ತಾ ಮಾತನಾಡಿ, ಉಗ್ರರಿಂದ ಹತ್ಯೆಗೀಡಾದ ಕರ್ನಲ್ ಎಂ.ಎನ್.ರೈ ಹುತಾತ್ಮರಾದ ಸಂದರ್ಭ ವೈರಿಗಳ ವಿರುದ್ಧ ಘೋಷಣೆ ಕೂಗಿದಂತಹ ಅವರ ಪುತ್ರಿ ಅಲ್ಕಾ ರೈ ನಂತಹ ಗಟ್ಟಿ ಮನಸ್ಸಿನ ಬಾಲಕಿಯನ್ನು ವಿ.ವಿಗಳು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ದೇಶಭಕ್ತಿಯ ಜಾಗೃತಿ ಮೂಡಿಸುವಂತಹ ಕಾರ್ಯ ನಡೆಯಬೇಕಿದೆ. ದೇಶದಾದ್ಯಂತ ಪ್ರತಿ ಕ್ಷೇತ್ರದಲ್ಲೂ ಪ್ರಾಮಾಣಿಕರಿದ್ದಾರೆ. ಪ್ರಾಮಾಣಿಕರಿಂದ ಮಾತ್ರ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ. ಯುವಸಮುದಾಯ, ವಿದ್ಯಾರ್ಥಿಗಳು ಮನಸ್ಸು ಬದಲಾಯಿಸಿ ದೇಶಭಕ್ತಿಯನ್ನು ತಮ್ಮಲ್ಲಿ ಹೆಚ್ಚಿಸಿಕೊಳ್ಳಬೇಕಿದೆ. ನಿವೃತ್ತ ಯೋಧರಿಗೆ ನಿಟ್ಟೆ ವಿಶ್ವವಿದ್ಯಾನಿಲಯದ ಕೊಡುಗೆ ಅಪಾರ ಎಂದರು.ಈ ಸಂದರ್ಭ ನಿಟ್ಟೆ ವಿ.ವಿ ಸಹಕುಲಾಧಿಪತಿ ಡಾ. ಎಂ. ಶಾಂತಾರಾಮ ಶೆಟ್ಟಿ, ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ, ಕುಲಸಚಿವೆ ಡಾ.ಅಲ್ಕಾ ಕುಲಕರ್ಣಿ ಉಪಸ್ಥಿತರಿದ್ದರು.ಸಹಕುಲಪತಿ ಪ್ರೊ.ಎಂ.ಯಸ್ ಮೂಡಿತ್ತಾಯ ಸ್ವಾಗತಿಸಿದರು. ಡಾ| ಸುಮಲತಾ ಆರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
2002 ರಲ್ಲಿ ಭಾರತೀಯ ಸೇನೆ ಸೇರಿದ್ದ ಹವಾಲ್ದಾರ್ ಗಿರೀಶ್
ಬಜಪೆ ನಿವಾಸಿಯಾಗಿದ್ದಾರೆ. 2016ರ ಜ.2 ರಂದು ರಾಜಸ್ತಾನದ ಗಂಗಾನಗರದಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭ ಹೃದಯಾಘಾತಕ್ಕೀಡಾಗಿ ಸಾವನ್ನಿಪ್ಪಿದ್ದರು. 35 ರ ಹರೆಯದಲ್ಲಿ ಹುತಾತ್ಮರಾದ ಗಿರೀಶ್ ದೆಹಲಿ, ಜಮ್ಮು, ಉತ್ತರಾಂಚಲ, ಅಸ್ಸಾಂ, ಕೊಲ್ಕತ್ತಾ, ರಾಜಸ್ತಾನದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ವಿವಾಹಿತಾರಗಿರುವ ಇವರು ಪತ್ನಿ ರೇಖಾ, ಪುತ್ರ ಗಗನ್ ನನ್ನು ಅಗಲಿದ್ದರು.
ಮಡಿಕೇರಿ ಬಲಂಬಿ ನಿವಾಸಿ ನಾಯ್ಕ್ ಶಿವರಾಂ ಕೆ.ಪಿ 1967 ರಲ್ಲಿ ಸೇನೆ ಸೇರ್ಪಡೆಗೊಂಡಿದ್ದರು. ಏಳನೇ ಫೀಲ್ಡ್ ರೆಜಿಮೆಂಟ್ (ಗಝಾಲ) ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಹಿಮಾಚಲ ಪ್ರದೇಶದ ಪರ್ತ್ ಪುರದಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭ ಪ್ರತಿಕೂಲ ಹವಾಮಾನದಿಂದಾಗಿ ತೀವ್ರ ಅಸೌಖ್ಯಕ್ಕೀಡಾಗಿ, ಎರಡು ದಿನಗಳ ಬಳಿಕ ಆಸ್ಪತ್ರೆಗೆ ದಾಖಲಾಗಿ ಅಲ್ಲಿ 2000 ನೇ ಡಿ.14 ಹುತಾತ್ಮರಾಗಿದ್ದರು. ಇವರು ಪತ್ನಿ ಗೀತಾ ಮತ್ತು ಪುತ್ರಿ ಪಲ್ಲವಿ ಯನ್ನು ಅಗಲಿದ್ದರು.