Site icon Ullalavani

ಮಂಗಳೂರು ಸಿಟಿ ಬಸ್‌ನಲ್ಲಿ ‘ಚಲೋ’ ಆ್ಯಪ್

UN NETWORKS

ಮಂಗಳೂರು: ಬಸ್ ಯಾವ ಮಾರ್ಗದಲ್ಲಿ ಬರುತ್ತಿದೆ, ಎಷ್ಟು ಹೊತ್ತಿಗೆ ಮನೆಯಿಂದ ಹೊರಡಬೇಕು ಎಂಬುದನ್ನು ಮೊಬೈಲ್‌ನಲ್ಲಿ ನೋಡಿದರೆ ಸಾಕು. ಟಿಕೆಟ್ ಪಡೆಯಲು ಚಿಲ್ಲರೆ ಕೊಡುವ ಸಮಸ್ಯೆಯೂ ಇಲ್ಲ. ಮೊದಲೇ ರೀಚಾರ್ಚ್ ಮಾಡಿದ ಸ್ಮಾರ್ಟ್ ಕಾರ್ಡ್ ಸ್ವೈಪ್ ಮಾಡಿದರಾಯಿತು.

ಮಂಗಳೂರು ಸಿಟಿ ಬಸ್‌ಗಳಲ್ಲಿ ಓಲಾ ಮಾದರಿಯ ‘ಚಲೋ ಆ್ಯಪ್’ ಬರಲಿದ್ದು, ಡಿಜಿಟಲ್ ಟಿಕೆಟಿಂಗ್ ತಂತ್ರಜ್ಞಾನ ಜಾರಿ ಆಗಲಿದೆ. ಇದೀಗ ಪೂರ್ವಭಾವಿಯಾಗಿ 350 ಬಸ್‌ಗಳಲ್ಲಿ ಜಿಪಿಎಸ್ ಅಳವಡಿಸಲು ಆರಂಭವಾಗಿದೆ. ಫೆಬ್ರವರಿಯಲ್ಲಿ ಸ್ಟೇಟ್‌ಬ್ಯಾಂಕ್- ಮಂಗಳಾದೇವಿ ಮಾರ್ಗದ (ರೂಟ್ ಸಂಖ್ಯೆ 27) ಐದು ಬಸ್ ಮತ್ತು ಉಳ್ಳಾಲ ಮಾರ್ಗದ (ರೂಟ್ ಸಂಖ್ಯೆ44) 16 ಬಸ್‌ಗಳಲ್ಲಿ ಪ್ರಾಯೋಗಿಕವಾಗಿ ಚಲೋ ಟಿಕೆಟ್ ಮಷಿನ್ ಬರಲಿದೆ.

ಏನಿದು ಚಲೋ ಆ್ಯಪ್? : ಚಲೋ ಆ್ಯಪ್ ಓಲಾ ಕ್ಯಾಬ್‌ನ ಆ್ಯಪ್ ರೀತಿ ಕಾರ್ಯನಿರ್ವಹಿಸುತ್ತದೆ. ಆ್ಯಪ್‌ಗೆ ಎಲ್ಲ ಬಸ್‌ಗಳಲ್ಲಿ ಅಳವಡಿಸಿರುವ ಜಿಪಿಎಸ್ ಸಂಪರ್ಕ ಇರುತ್ತದೆ.ಪ್ರಯಾಣಿಸಬೇಕಾದ ರೂಟ್ ನಂಬರ್ ಅಥವಾ ಬಸ್ ಹೆಸರನ್ನು ಆ್ಯಪ್‌ನಲ್ಲಿ ನಮೂದಿಸಿದಾಗ ಬಸ್ ಸದ್ಯ ಎಲ್ಲಿದೆ, ಎಷ್ಟು ಹೊತ್ತಿಗೆ ತಾನಿರುವ ಸ್ಥಳಕ್ಕೆ ಬರಲಿದೆ ಎಂಬ ಮಾಹಿತಿ ಸಿಗುತ್ತದೆ. ಚಲೋ ಆ್ಯಪ್ ಸದ್ಯ ಇಂಗ್ಲಿಷ್, ಮರಾಠಿ, ಬೆಂಗಾಲಿ ಮತ್ತು ಮಲಯಾಳ ಭಾಷೆಯಲ್ಲಿದೆ.ಸ್ಥಳೀಯರ ಬೇಡಿಕೆ ಅನುಗುಣವಾಗಿ ಇತರ ಭಾಷೆಗಳನ್ನು ಅಳವಡಿಸಬಹುದು. ಚಲೋ ಹೆಸರಿನ ಬದಲು ಸ್ಥಳೀಯ ಹೆಸರಿನಲ್ಲಿ ಆ್ಯಪ್ ತರುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ ಎಂದು ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ.

ಹೊಸ ಟಿಕೆಟ್ ಮಷಿನ್ : ನೂತನ ವ್ಯವಸ್ಥೆ ಜಾರಿಯಾದಾಗ ಈಗಿರುವ ಟಿಕೆಟ್ ಯಂತ್ರ ಮೂಲೆಗುಂಪಾಗಲಿದ್ದು, ಮೊಬೈಲ್ ಗಾತ್ರದ ಡಿಜಿಟಲ್ ಮಷಿನ್ ಕಂಡಕ್ಟರ್‌ಗಳ ಕೈಗೆ ಬರಲಿದೆ. ಇದರಲ್ಲಿ ಇ ಟಿಕೆಟ್, ಮೊಬೈಲ್ ಟಿಕೆಟ್‌ಗೆ ಅವಕಾಶಗಳಿವೆ. ಪ್ರಯಾಣಿಕ ಟಿಕೆಟ್ ಮೆಷಿನಲ್ಲಿರುವ ಕೋಡ್ ಸ್ಕಾೃನ್ ಮಾಡುವ ಮೂಲಕ ಹಣ ಪಾವತಿ ಮಾಡಬಹುದು. ಕಂಡಕ್ಟರ್ ಚಿಲ್ಲರೆ ಕೊಡಲಿಲ್ಲ, ಟಿಕೆಟ್ ನೀಡಲಿಲ್ಲ ಎಂಬ ಸಮಸ್ಯೆ ಇಲ್ಲಿಲ್ಲ. ಬಸ್ ಹತ್ತುವ ಮೊದಲೇ ಟಿಕೆಟ್ ಪಡೆಯಬಹುದು. ಪ್ರಯಾಣದ ವೆಚ್ಚ ಎಷ್ಟು ಎಂಬುದನ್ನು ಬಸ್ ಹತ್ತುವ ಮೊದಲೇ ತಿಳಿಯಲು ಅವಕಾಶವಿದೆ.

ಅವ್ಯವಹಾರಕ್ಕೆ ಕಡಿವಾಣ : ಬಸ್‌ಗಳಲ್ಲಿ ಜಿಪಿಎಸ್ ಅಳವಡಿಸಿರುವುದರಿಂದ ರೂಟ್ ತಪ್ಪಿಸಿ ಹೋಗಲು ಸಾಧ್ಯವಿಲ್ಲ. ಕೆಲವು ಬಸ್ ಕಂಡಕ್ಟರ್‌ಗಳು ಟಿಕೆಟ್ ನೀಡದೆ ಕಡಿಮೆ ಅಥವಾ ಹೆಚ್ಚು ಹಣ ಪಡೆಯುತ್ತಾರೆ. ಇದರಿಂದ ಮಾಲೀಕ ಮತ್ತು ಪ್ರಯಾಣಿಕರಿಗೆ ನಷ್ಟ. ಬಸ್‌ನಲ್ಲಿ ಆನ್‌ಲೈನ್ ವ್ಯವಹಾರ ಮಾಡಿದ ಪ್ರಯಾಣಿಕನಿಗೆ ಕಡ್ಡಾಯವಾಗಿ ಚೀಟಿ ಕೊಡಲೇಬೇಕಾಗುತ್ತದೆ. ಟಿಕೆಟ್ ಮಷಿನ್‌ಗಳಲ್ಲಿ ಕ್ಯಾಮರಾ ಇದ್ದು, ಯಾವುದಾದರೂ ಅವ್ಯವಹಾರ ಅಥವಾ ಅನುಮಾನಾಸ್ಪದ ಸಂಗತಿ ಕಂಡರೆ ಟಿಕೆಟ್ ಯಂತ್ರದಲ್ಲಿ ಮೊಬೈಲ್‌ನಂತೆ ಸೆರೆ ಹಿಡಿಯಬಹುದು.

ಡೈಲಿ ಪಾಸ್ ಸುಲಭ : ವಿದ್ಯಾರ್ಥಿಗಳಿಗೆ, ಹಿರಿಯರಿಗೆ, ಅಂಗವಿಕಲರಿಗೆ ಇರುವ ರಿಯಾಯಿತಿ ಪಾಸ್, ಡೈಲಿ ಪಾಸ್ ವ್ಯವಸ್ಥೆ ನೂತನ ಟಿಕೆಟ್ ಮಷಿನ್‌ನಿಂದ ಸುಲಭ. ಚಲೋ ಆ್ಯಪ್‌ನಲ್ಲಿ ಕಾಮನ್ ಮೊಬಿಲಿಟಿ ಕಾರ್ಡ್ ಎಂಬ ವಿಶಿಷ್ಟ ವ್ಯವಸ್ಥೆ ಇದೆ. ಇದೊಂದು ಸ್ಮಾರ್ಟ್ ಕಾರ್ಡ್. ಮೊದಲೇ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡಿಕೊಂಡರೆ, ಎಲ್ಲಿ ಬೇಕಾದರೂ ಕಾರ್ಡ್ ಸ್ವೈಪ್ ಮಾಡಿ ಪ್ರಯಾಣ ಮಾಡಬಹುದು.
ಸ್ಮಾರ್ಟ್ ಸಿಟಿಗೆ ಪೂರಕವಾಗಿ ಚಲೋ ಆ್ಯಪ್ ಬರಲಿದೆ. ಪ್ರಯಾಣಿಕರಿಗೆ ಟಿಕೆಟ್ ಸಮಸ್ಯೆ, ಚಿಲ್ಲರೆ ಸಮಸ್ಯೆ ಕಡಿಮೆಯಾಗಲಿದೆ. ಮೊದಲ ಹಂತದಲ್ಲಿ ಎಲ್ಲ ಬಸ್‌ಗಳಿಗೆ ಜಿಪಿಎಸ್ ಅಳವಡಿಕೆ ನಡೆದಿದೆ. ಫೆಬ್ರವರಿಯಲ್ಲಿ ಎರಡು ಮಾರ್ಗದ ಬಸ್‌ಗಳಲ್ಲಿ ಇ ಟಿಕೆಂಗ್ ತಂತ್ರಜ್ಞಾನ ಪ್ರಾಯೋಗಿಕವಾಗಿ ಜಾರಿಯಾಲಿದೆ.

ದಿಲ್‌ರಾಜ್ ಆಳ್ವ, ದ.ಕ ಬಸ್ ಮಾಲೀಕರ ಸಂಘ ಅಧ್ಯಕ್ಷ

Exit mobile version