ಗುಣ ಶ್ರೀ ವಿದ್ಯಾಲಯ ಅಡ್ಯಾರು : ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ
UllalaVani
UN NETWORKS
ಅಡ್ಯಾರು: ಗುಣ ಶ್ರೀ ವಿದ್ಯಾಲಯ ಅಡ್ಯಾರು ಇಲ್ಲಿ ವಾರ್ಷಿಕ ಕ್ರೀಡೋತ್ಸವ ನಡೆಯಿತು.
ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ತ್ಯಾಗಂ ಹರೇಕಳ ಇವರು ಇವತ್ತು ಅದೆಷ್ಟೋ ವಿದ್ಯಾಸಂಸ್ಥೆಗಳು ವಾರ್ಷಿಕೋತ್ಸವವನ್ನು ಮಾಡುತ್ತವೆ. ಆದರೆ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹವನ್ನು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸುವ ಕ್ರೀಡೋತ್ಸವವನ್ನು ಸಂಘಟನೆ ಮಾಡದಿರುವುದು ದುರಂತವೇ ಸರಿ. ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಅಭಿವೃದ್ಧಿ ಹೊಂದುವಲ್ಲಿ ಕ್ರೀಡೆ ಬಹಳ ಮುಖ್ಯ. ವಿದ್ಯಾರ್ಥಿಗಳಿಗೆ ಅದೆಷ್ಟೋ ಶಾಲೆಗಳು ಮೈದಾನವಿಲ್ಲ ಎನ್ನುವ ಕಾರಣ ತೋರಿಸಿ, ದೈಹಿಕ ಶಿಕ್ಷಣ ಶಿಕ್ಷಕರನ್ನೂ ನೇಮಿಸದೇ, ಯಾವುದೇ ಕ್ರೀಡೆಗೆ ಪೂರಕವಾದ ಚಟುವಟಿಕೆಗಳನ್ನು ಮಾಡದೇ ಕೇವಲ ಪಠ್ಯಕ್ಕೆ ಹೆಚ್ಚಿನ ಒತ್ತನ್ನು ಕೊಡುವುದನ್ನು ಕಾಣುತ್ತೇವೆ. ಇದರಲ್ಲಿ ನಾವೆಲ್ಲರೂ ಪರಿವರ್ತನೆಯನ್ನು ಹೊಂದಬೇಕು ಎಂದರು. ಅಧ್ಯಕ್ಷತೆಯನ್ನು ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ಗಂಗಾಧರ್ ಮಾಣಿಯವರು ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನು ಇಟ್ಟುಕೊಳ್ಳಬೇಕು. ಗುರಿ ಈಡೇರಲು ಸದಾ ಪ್ರಯತ್ನವನ್ನು ಮಾಡಬೇಕು.ಇದರಿಂದ ಯಶಸ್ಸು ಕಾಣಬಹುದು ಎಂದರು. ಸಂಚಾಲಕರಾದ ಬಿ.ರಾಧಕೃಷ್ಣ ಶೆಟ್ಟಿಯವರು ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಕವಾಯತುಗಳನ್ನು ಮಕ್ಕಳಿಂದ ಮಾಡಿಸಲಾಯಿತು. ಅತಿಥಿಗಳಾಗಿ ಮೋಹನ್‍ದಾಸ್ ಶೆಟ್ಟಿ, ಗಣೇಶ್ ಕೋಟೆಕಾರು, ರಾಧಕೃಷ್ಣ ರೈ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಸಂಗೀತ ಸ್ವಾಗತಿಸಿದರು, ಶಿಕ್ಷಕಿ ಪವಿತ್ರ ನಿರೂಪಿಸಿದರು, ಶಿಕ್ಷಕಿ ಪ್ರಿಯಾ ಧನ್ಯವಾದಗೈದರು.